ಮೇ 17ರ ವರೆಗೆ ದೇಶದಾದ್ಯಂತ ಲಾಕ್ ಡೌನ್ ಮುಂದುವರಿಕೆ : ಕೇಂದ್ರ ಗೃಹ ಸಚಿವಾಲಯದಿಂದ ಮಹತ್ವದ ಘೋಷಣೆ

0

ನವದೆಹಲಿ : ದೇಶದಾದ್ಯಂತ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಮೇ 17ರ ವರೆಗೆ ಮುಂದುವರಿಸಲಾಗಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯದ ಮಹತ್ವ ಘೋಷಣೆಯನ್ನು ಮಾಡಿದೆ. ಲಾಕ್ ಡೌನ್ ಆದೇಶವನ್ನು ಇನ್ನಷ್ಟು ಕಠಿಣಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.

ದೇಶದಾದ್ಯಂತ ಮೇ 3ರ ವರೆಗೆ ಎರಡನೇ ಹಂತದ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಆದರೆ ದೇಶದ ಬಹುತೇಕ ರಾಜ್ಯಗಳಲ್ಲಿ ಕೊರೊನಾ ಮಹಾಮರಿ ರೌದ್ರ ನರ್ತನ ಮೆರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಹೀಗಾಗಿ ಮೇ 3ರಂದು ಮುಕ್ತಾಯಗೊಳ್ಳಲಿದ್ದ ಎರಡನೇ ಹಂತದ ಲಾಕ್ ಡೌನ್ ಆದೇಶವನ್ನು ಮೇ 17ರ ವರೆಗೂ ವಿಸ್ತರಿಸಲಾಗಿದೆ. ಮೂರನೇ ಹಂತದ ಲಾಕ್ ಡೌನ್ ಆದೇಶದ ಕುರಿತು ಕೇಂದ್ರ ಗೃಹ ಇಲಾಖೆ ಘೋಷಣೆಯನ್ನು ಮಾಡಿದೆ. ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಗ್ರೀನ್, ಆರೆಂಜ್ ಹಾಗೂ ರೆಡ್ ವಲಯಗಳನ್ನಾಗಿ ವಿಸ್ತರಿಸಲಾಗಿದೆ.

ರೆಡ್ ವಲಯದಲ್ಲಿ ದೇಶದ 130 ಜಿಲ್ಲೆಗಳಿದ್ರೆ, ಆರೆಂಜ್ ವಲಯದಲ್ಲಿ 284 ಹಾಗೂ ಗ್ರೀನ್ ವಲಯದಲ್ಲಿ ಒಟ್ಟು 319 ಜಿಲ್ಲೆಗಳನ್ನು ಒಳಗೊಂಡಿದೆ.
ರೆಡ್ ವಲಯಗಳಾಗಿ ಘೋಷಣೆ ಮಾಡಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶವನ್ನು ಇನ್ನಷ್ಟು ಕಠಿಣಗೊಳಿಸಲಾಗುತ್ತಿದ್ದು, ಆರೆಂಜ್ ಹಾಗೂ ಗ್ರೀನ್ ವಲಯಗಳಲ್ಲಿ ಲಾಕ್ ಡೌನ್ ಆದೇಶವನ್ನು ಸಡಿಲಗೊಳಿಸುವ ಸಾಧ್ಯತೆಯಿದೆ. ಈ ಕುರಿತು ಕೇಂದ್ರ ಸರಕಾರ ಹೊಸ ಮಾರ್ಗ ಸೂಚಿಯನ್ನು ಪ್ರಕಟಿಸಲಿದೆ.

ಲಾಕ್ ಡೌನ್ ಆದೇಶ ಇನ್ನೂ ಎರಡು ವಾರಗಳ ಕಾಲ ಮುಂದುವರಿಯುವ ಹಿನ್ನೆಲೆಯಲ್ಲಿ ಯಾರೂ ಕೂಡ ಮನೆಯಿಂದ ಹೊರಬರುವಂತಿಲ್ಲ. ಸಾರ್ವಜನಿಕ ಸಾರಿಗೆ ಸಂಚಾರದ ಮೇಲಿನ ನಿಷೇಧ ಮುಂದುವರಿಯಲಿದೆ. ಶಾಲಾ, ಕಾಲೇಜು ಸೇರಿದಂತೆ ಶೈಕ್ಷಣಿಕ ಚಟುವಟಿಕೆ ಸಂಪೂರ್ಣವಾಗಿ ಬಂದ್ ಆಗಲಿದೆ. ಈ ಹಿಂದೆ ಹೊರಡಿಸಲಾಗಿದ್ದ ಲಾಕ್ ಡೌನ್ ಆದೇಶದಲ್ಲಿನ ನಿಷೇಧ ಮತ್ತೆ ಮುಂದುವರಿಯಲಿದೆ.

Leave A Reply

Your email address will not be published.