ಬೆಂಗಳೂರು : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ನಿರ್ಮಾಪಕ ಮುನಿರತ್ನಗೂ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನಾರ್ದನ ರೆಡ್ಡಿ ಅವರು ಆಗಸ್ಟ್ 30ರಂದು ಬಳ್ಳಾರಿಗೆ ತೆರಳಬೇಕಾಗಿತ್ತು. ಇದಕ್ಕೂ ಮುನ್ನ ಇಂದು ಸಂಜೆ ಅವರು ಕೊರೋನಾ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

ಈ ಕುರಿತಂತೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಇಂದು ಸಂಜೆ ನನಗೆ ಕೊರೋನಾ ಸೊಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವೆ. ಆ ಕಾರಣದಿಂದ ನಾನು ಆಗಸ್ಟ್ 30 ರಂದು ಬಳ್ಳಾರಿಗೆ ಭೇಟಿ ನೀಡಿ ನನ್ನ ಪ್ರಾಣ ಸ್ನೇಹಿತ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ತಾಯಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.

ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ತಂಡ ನನಗೆ ಚಿಕಿತ್ಸೆ ನೀಡುತ್ತಿದೆ. ನನಗೆ ಯಾವುದೇ ರೋಗದ ಲಕ್ಷಣಗಳು ಇಲ್ಲದಿದ್ದರೂ ಕೊರೋನಾ ಪಾಸಿಟಿವ್ ಬಂದಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗಿ ಮನೆಗೆ ಮರಳಲಿದ್ದೇನೆ ಎಂದು ತಿಳಿಸಿದ್ದಾರೆ.
ಮುನಿರತ್ನ ಅವರು ಫೇಸ್ ಬುಕ್ ನಲ್ಲಿ ಕೊರೋನಾ ಪಾಸಿಟಿವ್ ಬಂದಿರುವುದನ್ನು ಸ್ಪಷ್ಟಪಡಿಸಿದ್ದಾರೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ನನ್ನ ಎಲ್ಲಾ ಮತದಾರ ದೇವರುಗಳಿಗೆ ವಂದನೆಗಳು. 57 ವರ್ಷ ವಯಸ್ಸಿನವನಾದ ನಾನು ಇಂದು ಕೊವೀಡ್ ಪರೀಕ್ಷೆ ಮಾಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ. ಕ್ಷೇಮವಾಗಿ ಬಂದರೆ ನಿಮ್ಮ ಸೇವೆ. ಇಲ್ಲದಿದ್ದರೆ ಕ್ಷಮಿಸಿಬಿಡಿ ಎಂದು ಹೇಳಿದ್ದಾರೆ.