ಅನ್ ಲಾಕ್ 4.0 ಸೆಪ್ಟೆಂಬರ್ 30ರ ವರೆಗೂ ಶಾಲೆ, ಕಾಲೇಜು ಬಂದ್ : ಥಿಯೇಟರ್, ಮೆಟ್ರೋ ಸಂಚಾರ ಆರಂಭ

0

ನವದೆಹಲಿ : ಅನ್ ಲಾಕ್ 4.0 ಮಾರ್ಗಸೂಚಿ ಪ್ರಕಟವಾಗಿದೆ. ಪ್ರಮುಖವಾಗಿ ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಶೈಕ್ಷಣಿಕ ಸಂಸ್ಥೆಗಳ ಮೇಲಿನ ನಿರ್ಬಂಧ ಮುಂದುವರಿಯಲಿದ್ದು, ಸೆಪ್ಟೆಂಬರ್ 30ರ ವರೆಗೆ ಶಾಲೆ, ಕಾಲೇಜುಗಳು ಬಂದ್ ಆಗಲಿವೆ.

ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಂತ ಹಂತವಾಗಿ ಅನ್ ಲಾಕ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಇದೀಗ ಅನ್ ಲಾಕ್ 4.0 ಮಾರ್ಗಸೂಚಿಯನ್ನು ಪ್ರಕಟಿಸಿದೆ. ಪ್ರಮುಖವಾಗಿ ಶಾಲೆ, ಕಾಲೇಜುಗಳನ್ನು ಆರಂಭ ಮಾಡುವುದರಿಂದ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುವ ಸಾಧ್ಯತೆಯಿರುವುದರಿಂದಾಗಿ ಶಾಲೆ, ಕಾಲೇಜು ಹಾಗೂ ತರಬೇತಿ ಕೇಂದ್ರಗಳು ಸಪ್ಟೆಂಬರ್ 30ರ ವರೆಗೂ ಬಂದ್ ಆಗಿರಲಿವೆ.

ಇನ್ನು ಅನ್ ಲೈನ್ ಕ್ಲಾಸ್ ಅಥವಾ ಟೆಲಿ ಕೌನ್ಸಿಲಿಂಗ್ ಇನ್ನಿತರ ಕಾರ್ಯಕ್ರಮಗಳಿಗೆ ಶೇ.50 ರಷ್ಟು ಸಿಬ್ಬಂದಿಗಳನ್ನು ಮಾತ್ರವೇ ಬಳಸಿಕೊಳ್ಳುವಂತೆ ಆದೇಶಿಸಲಾಗಿದೆ. ಆದರೆ 9 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ಪೋಷಕರ ಲಿಖಿತ ಅನುಮತಿಯನ್ನು ಪಡೆದು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳಬಹುದಾಗಿದೆ.

ಆದರೆ ಕಂಟೈನ್ಮೆಂಟ್ ಝೋನ್ ಗಳಲ್ಲಿ ಇದಕ್ಕೆ ಅವಕಾಶವಿಲ್ಲ. ಇನ್ನು ಉನ್ನತ ಶಿಕ್ಷಣ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಹಾಗೂ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಮೆಟ್ರೋ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿದ್ದು, ಸಪ್ಟೆಂಬರ್ 7 ರಿಂದ ಬೆಂಗಳೂರಲ್ಲಿ ಮೆಟ್ರೋ ಸಂಚಾರ ನಡೆಸಲಿದೆ. ಇನ್ನು ಸಿನಿಮಾ ಮಂದಿಗೂ ಕೇಂದ್ರ ಸರಕಾರ ಗುಡ್ ನ್ಯೂಸ್ ಕೊಟ್ಟಿದ್ದು, ಸಪ್ಟೆಂಬರ್ 21ರಿಂದ ಹವಾನಿಯಂತ್ರಿತ ಥಿಯೇಟರ್ ಗಳನ್ನು ಆರಂಭಿಸಲು ಅನುಮತಿಯನ್ನು ನೀಡಲಾಗಿದೆ.

ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಇನ್ನುಳಿದ ಪ್ರದೇಶಗಳಲ್ಲಿನ ಸ್ವಿಮಿಂಗ್ ಪೂಲ್, ಪಾರ್ಕ್ ಸೇರಿದಂತೆ ಇನ್ನಿತರ ಸೇವೆಗಳು ಸಾರ್ವಜನಿಕರಿಗೆ ಮುಕ್ತವಾಗಲಿವೆ. ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿಲ್ಲ. ಕೇವಲ ವಂದೇ ಭಾರತ್ ಮಿಷನ್ ನಡಿಯಲ್ಲಿ ವಿಮಾನಗಳು ಹಾರಾಟ ನಡೆಸಲಿವೆ.

ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಅಥವಾ ರಾಜ್ಯ ಕೌಶಲ್ಯ ಅಭಿವೃದ್ಧಿ ಮಿಷನ್‍ನಲ್ಲಿ ನೋಂದಾಯಿಸಲಾದ ಅಲ್ಪಾವಧಿಯ ತರಬೇತಿ ಕೇಂದ್ರಗಳಲ್ಲಿ ಕೌಶಲ್ಯ ಅಥವಾ ಉದ್ಯಮಶೀಲತೆ, ವಾಣಿಜ್ಯೋದ್ಯಮ ಮತ್ತು ಸಣ್ಣ ಉದ್ಯಮ ಅಭಿವೃದ್ಧಿಗಾಗಿ ರಾಷ್ಟ್ರೀಯ ಸಂಸ್ಥೆ, ಭಾರತೀಯ ಉದ್ಯಮ ಸಂಸ್ಥೆಯ ತರಬೇತಿಯನ್ನು ಅನುಮತಿ ನೀಡಲಾಗಿದೆ.

Leave A Reply

Your email address will not be published.