ಕರ್ನಾಟಕ ಬ್ಯಾಂಕ್ ಕೊರೊನಾ ವಿಮೆ ಮಾಡಿಸೋ ಮುನ್ನ ಇರಲಿ ಎಚ್ಚರ !!!

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿದೆ. ಕೊರೊನಾ ಸೋಂಕನ್ನೇ ಖಾಸಗಿ ಆಸ್ಪತ್ರೆಗಳು ಬಂಡವಾಳ ಮಾಡಿಕೊಂಡಿವೆ. ಇನ್ನೊಂದೆಡೆ ಇನ್ಶುರೆನ್ಸ್ ಹೆಸರಿನಲ್ಲಿಯೂ ಹಲವು ಕಂಪೆನಿಗಳು, ಬ್ಯಾಂಕುಗಳು ಜನರಿಂದ ಸುಲಿಗೆಗೆ ಇಳಿದಿವೆ.

ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಬಹುತೇಕ ಇನ್ಶೂರೆನ್ಸ್ ಕಂಪೆನಿಗಳು ಕೊರೊನಾ ಹಾಗೂ ಕೋವಿಡ್ ಹೆಸರಲ್ಲಿ ಆರೋಗ್ಯ ವಿಮೆಯನ್ನು ಘೋಷಣೆ ಮಾಡಿವೆ. ಅಂತೆಯೇ ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕರ್ನಾಟಕ ಬ್ಯಾಂಕ್ ಯುನಿವರ್ಸಲ್ ಸೋಂಪೋ ಜನರಲ್ ಇನ್ಶುರೆನ್ಸ್ ಕಂಪೆನಿಯ ಸಹಯೋಗದೊಂದಿಗೆ ಕೊರೊನಾ ಕವಚ ಅನ್ನೋ ವಿಮಾ ಪಾಲಿಸಿಯನ್ನು ಗ್ರಾಹಕರಿಗೆ ಒದಗಿಸುತ್ತಿದೆ. 18 ವರ್ಷದಿಂದ 65 ವರ್ಷದೊಳಗಿನ ಗ್ರಾಹಕರು ಕೇವಲ 399 ರೂಪಾಯಿ ಕಂತು ಪಾವತಿಸುವ ಮೂಲಕ ವಿಮಾ ಸೌಲಭ್ಯವನ್ನು ಪಡೆಯಬಹುದಾಗಿದೆ. ಬ್ಯಾಂಕಿನ ಗ್ರಾಹಕರಲ್ಲದವರಿಗೂ ಕೂಡ ಈ ವಿಮಾ ಸೌಲಭ್ಯವನ್ನು ಒದಗಿಸುತ್ತಿದೆ.

ವಿಮೆ ಪಾಲಿಸಿದಾರರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ್ರೆ, ವಿಮಾದಾರರಿಗೆ 3 ಲಕ್ಷ ರುಪಾಯಿವರೆಗೆ ಆಸ್ಪತ್ರೆಯ ಖರ್ಚನ್ನು ಹಾಗೂ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ 3 ಸಾವಿರ ರುಪಾಯಿವರೆಗಿನ ಔಷಧಿಗಳ ಖರ್ಚನ್ನು ವಿಮಾ ನಿಯಮದ ಆಡಿಯಲ್ಲಿ ಒದಗಿಸುವುದಾಗಿ ಹೇಳಲಾಗುತ್ತಿದೆ. ಮಾತ್ರವಲ್ಲ ಕ್ವಾರಂಟೈನ್ ಗೆ ಒಳಪಟ್ಟರೂ ಕೂಡ ವಿಮಾ ಸೌಲಭ್ಯವನ್ನು ಪಡೆಯಬಹುದಾಗಿದ್ದು, ನಿತ್ಯವೂ 1 ಸಾವಿರ ರೂಪಾಯಿಯಂತೆ 14 ದಿನಗಳ ವರೆಗೂ ಕ್ವಾರಂಟೈನ್ ವೆಚ್ಚವನ್ನು ವಿಮಾ ಕಂಪೆನಿ ಭರಿಸಲಿದೆ.

ಕರ್ನಾಟಕ ಬ್ಯಾಂಕ್ ಹಾಗೂ ಯೂನಿವರ್ಸಲ್ ಸೋಂಪೋ ವಿಮಾ ಕಂಪೆನಿಯ ಮಾತನ್ನು ನಂಬಿ ಈಗಾಗಲೇ ಲಕ್ಷಾಂತರ ಮಂದಿ 399 ರೂಪಾಯಿ ಹಣವನ್ನು ನೀಡಿ ಕೊರೊನಾ ವಿಮೆ ಮಾಡಿಕೊಂಡಿದ್ದಾರೆ. ಕೊರೊನಾ ಸೋಂಕು ಬಂದ್ರೆ ನಮ್ಮಲ್ಲಿ ಕೊರೊನಾ ವಿಮೆಯಿದೆ ಅಂತಾ ಆರಾಮಾಗಿದ್ದಾರೆ. ಆದ್ರೆ ವಿಮೆ ಮಾಡಿಸಿಕೊಂಡ ಗ್ರಾಹಕರಿಗೆ ಇದೀಗ ವಿಮಾ ಕಂಪೆನಿ ಶಾಕ್ ಕೊಟ್ಟಿದೆ.

ಹೌದು, ಕೊರೊನಾ ವಿಮೆ ಮಾಡಿಸುವಾಗ ಯಾವುದೇ ಕಂಡಿಷನ್ ಗಳನ್ನೂ ಬ್ಯಾಂಕ್ ಆಗಲಿ, ವಿಮಾ ಕಂಪೆನಿಯಾಗಲಿ ಹೇಳುವುದಿಲ್ಲ. ಕೊರೊನಾ ಸೋಂಕು ಬಂದ್ರೆ ಹೆಲ್ಪ್ ಆಗುತ್ತೆ ಅಂತಾ ಹೇಳುತ್ತಲೇ ಗ್ರಾಹಕರಿಂದ ಪ್ರತೀ ಬ್ರ್ಯಾಂಚ್ ಗಳಲ್ಲಿಯೂ ವಿಮೆ ಮಾಡಿಸಿಕೊಳ್ಳಲಾಗುತ್ತಿದೆ. ಆದರೆ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ ಮೇಲೆ ವಿಮಾ ಕಂಪೆನಿ ಒಂದೊಂದೇ ರೂಲ್ಸ್ ಹೇಳುತ್ತಿದೆ.

399 ರೂಪಾಯಿಯ ವಿಮೆಯನ್ನು ಮಾಡಿಸಿದ ಗ್ರಾಹಕರು ಒಂದೊಮ್ಮೆ ಕೊರೊನಾ ಸೋಂಕಿಗೆ ತುತ್ತಾಗಿ ಐಸಿಯುಗೆ ದಾಖಲಾದ್ರೆ ಐಸಿಯು ಬಿಲ್ ನ ಕೇವಲ ಶೇ. 3ರಷ್ಟನ್ನು ಹಾಗೂ ವಾರ್ಡ್ ನಲ್ಲಿ ಚಿಕಿತ್ಸೆ ಪಡೆದ್ರೆ ಕೇವಲ ಶೇ.2ರಷ್ಟು ಹಣವನ್ನು ಮಾತ್ರವೇ ವಿಮಾ ಕಂಪೆನಿ ನೀಡಲಿದೆ. ಆದರೆ ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಕೆಯಾಗುವ ಪಿಪಿಇ ಕಿಟ್, ಮಾಸ್ಕ್, ಕಾಟನ್ ಸೇರಿದಂತೆ ಯಾವುದೇ ವಸ್ತುಗಳಿಗೆ ತಗಲುವ ವೆಚ್ಚದ ಹಣಕ್ಕೆ ವಿಮೆ ಅನ್ವಯವಾಗುವುದಿಲ್ಲವಂತೆ. ದುರಂತವೆಂದ್ರೆ ಕೊರೊನಾ ಸೋಂಕಿಗೆ ಔಷಧ ಇನ್ನೂ ಪತ್ತೆಯಾಗಿಲ್ಲ. ಆದರೆ ವಿಮಾ ಕಂಪೆನಿ ಕೊರೊನಾ ಔಷಧಕ್ಕೆ ಖರ್ಚು ಮಾಡುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಹೇಳುತ್ತಿದೆ.

ಆದರೆ ಕೊರೊನಾ ಸೋಂಕಿತರಿಗೆ ಬಹುತೇಕ ಖರ್ಚುಗಳು ಎದುರಾಗುವುದು ಪಿಪಿಇ ಕಿಟ್ ಹಾಗೂ ಮಾಸ್ಕ್ ಬಳಕೆಯಿಂದ. ಆದರೆ ಯುನಿವರ್ಸಲ್ ಸೋಂಪೋ ವಿಮಾ ಕಂಪೆನಿ ಕ್ಲೈಮ್ ವೇಳೆಯಲ್ಲಿ ಪಿಪಿಇ ಕಿಟ್, ಮಾಸ್ಕ್ ಗೆ ಹಣ ನೀಡಲಾಗುವುದಿಲ್ಲ ಅಂತಾ ಹೇಳುತ್ತಿದೆ. ಹಾಗಾದ್ರೆ ಕೊರೊನಾ ಹೆಸರಲ್ಲಿ ಮಾಡಿಸಿದ ವಿಮೆ ಕೇವಲ ಜ್ವರದ ಔಷಧಕ್ಕೆ ಮಾತ್ರವೇ ಬಳಕೆಯಾಗೋದಾ ಅನ್ನೋದು ವಿಮಾ ಪಾಲಿಸಿದಾರರ ಪ್ರಶ್ನೆ.

ವಿಮಾ ಪಾಲಿಸಿಯನ್ನು ಮಾಡಿಸಿಕೊಳ್ಳುವಾಗ ಬ್ಯಾಂಕ್ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾದ್ರೆ 3 ಲಕ್ಷ ರೂಪಾಯಿ ವರೆಗೆ ಆರೋಗ್ಯ ವಿಮೆ ಸಿಗುತ್ತೆ ಅಂತಾ ಹೇಳ್ತಾರೆ. ಆದರೆ ಆಸ್ಪತ್ರೆಗೆ ದಾಖಲಾಗಿ ಇನ್ಶುರೆನ್ಸ್ ಕ್ಲೈಮ್ ಕುರಿತು ವಿಮಾ ಕಂಪೆನಿಯ ಸಿಬ್ಬಂದಿಗಳನ್ನು ಸಂಪರ್ಕ ಮಾಡಿದ್ರೆ ಒಂದೊಂದೆ ಕಂಡಿಷನ್ ಹೇಳೋದಕ್ಕೆ ಶುರು ಮಾಡ್ತಾರೆ. ಕೊರೊನಾ ಇನ್ಶುರೆನ್ಸ್ ಮಾಡಿಸುವಾಗ ಪಿಪಿಇ ಕಿಟ್, ಮಾಸ್ಕ್ ವೆಚ್ಚವನ್ನು ನೀಡಲಾಗುವುದಿಲ್ಲಾ ಅಂತಾ ಬ್ಯಾಂಕ್ ಆಗಲಿ, ವಿಮಾ ಕಂಪೆನಿಯಾಗಲಿ ಹೇಳುವುದಿಲ್ಲ. ಸಾಲದಕ್ಕೆ ಬಾಂಡ್ ನಲ್ಲಿಯೂ ಆ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ಮಾತ್ರವಲ್ಲ ಈ ಬಗ್ಗೆ ಪ್ರಶ್ನಿಸಿದ್ರೆ ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ.

ಒಂದೊಮ್ಮೆ ನೀವೇನಾದ್ರೂ ಕೊರೊನಾ ಸೋಂಕಿಗೆ ಒಳಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಉ, ಆಸ್ಪತ್ರೆಯ ಬಿಲ್ 1 ಲಕ್ಷ ದಾಟಿದ್ರೆ ಇನ್ಶುರೆನ್ಸ್ ಕಂಪೆನಿ ಪಾವತಿ ಮಾಡೋದು ಕೇವಲ 2 ರಿಂದ 5 ಸಾವಿರ ಮಾತ್ರ. ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುವಾಗ ವಿಮಾ ಕಂಪೆನಿ ನೀಡುವ ಪುಡಿಗಾಸಿಗಾಗಿ ಬ್ಯಾಂಕ್ ಮೂಲಕ ವಿಮೆ ಮಾಡಿಸಬೇಕಾ. ವಿಮಾ ಕಂಪೆನಿಗಳು ಕೇವಲ ಕೊರೊನಾ ಹೆಸರಲ್ಲಿ ಜನರಿಗೆ ಒಳಿತು ಮಾಡುವ ಬದಲು ವಂಚನೆಯನ್ನು ಮಾಡುತ್ತಿವೆ ಅಂತಾ ಗ್ರಾಹಕರು ಆರೋಪಿಸುತ್ತಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ತೀವ್ರ ಅನಾರೋಗ್ಯಕ್ಕೆ ತುತ್ತಾದ್ರೆ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ಹಣವನ್ನು ವಸೂಲಿ ಮಾಡುತ್ತಿವೆ. ಆದರೆ ಇನ್ಶುರೆನ್ಸ್ ಮಾಡಿದ್ದೇವೆ ಅಂತಾ ಸುಮ್ಮನಾದ್ರೆ ಕೊನೆಗೆ ಆಸ್ಪತ್ರೆಯ ಲಕ್ಷಾಂತರ ರೂಪಾಯಿ ಬಿಲ್ ಪಾವತಿಸೋದಕ್ಕೆ ಆಗದೆ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.

ಪ್ರತಿಷ್ಠಿತ ಬ್ಯಾಂಕುಗಳೇ ಇಂತಹ ಕಂಪೆನಿಗಳ ಜೊತೆಗೆ ಸೇರಿ ಗ್ರಾಹಕರನ್ನು ವಂಚಿಸುತ್ತಿರೋದು ಎಷ್ಟು ಸರಿ. ಇನ್ನಾದ್ರೂ ಕರ್ನಾಟಕ ಬ್ಯಾಂಕ್ ಮುಖ್ಯಸ್ಥರು ಯುನಿವರ್ಸೆಲ್ ಸೋಂಪೋ ಕಂಪೆನಿಯ ಕಳ್ಳಾಟಕ್ಕೆ ಮಂಗಳ ಹಾಡಬೇಕಿದೆ. ನೀವೇನಾದ್ರೂ ಕೊರೊನಾ ಇನ್ಶುರೆನ್ಸ್ ಮಾಡಿಸೋ ಪ್ಲ್ಯಾನ್ ಇದ್ರೆ ಮೊದಲು ಕಂಡಿಷನ್ಸ್ ಕೇಳಿಕೊಳ್ಳುವುದನ್ನು ಮರೆಯಬೇಡಿ.

Leave A Reply

Your email address will not be published.