Kerala Corona : ನೆಗೆಟಿವ್‌ ರಿಪೋರ್ಟ್‌ ಇಲ್ಲದೇ ಮಂಗಳೂರು ಪ್ರವೇಶವಿಲ್ಲ : ಎಡಿಜಿಪಿ ಪ್ರತಾಪ್‌ ರೆಡ್ಡಿ

ಮಂಗಳೂರು : ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ತಲಪಾಡಿ ಮೂಲಕ ಕರ್ನಾಟಕ ಪ್ರವೇಶಕ್ಕೆ ಕೊರೊನಾ ನೆಗೆಟಿವ್‌ ರಿಪೋರ್ಟ್‌ ಕಡ್ಡಾಯ ಎಂದು ಎಡಿಜಿಪಿ ಪ್ರತಾಪ್‌ ರೆಡ್ಡಿ ಹೇಳಿದ್ದಾರೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಕೇರಳ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿಂದು ಎಡಿಜಿಪಿ ಪ್ರತಾಪ್‌ ರೆಡ್ಡಿ ಅವರು ತಲಪಾಡಿಗೆ ಭೇಟಿ ನೀಡಿದರು. ಈ ವೇಳೆಯಲ್ಲಿ ಮಾತನಾಡಿದ ಅವರು, ಕೇರಳ ಗಡಿಭಾಗವಾಗಿರುವ ತಲಪಾಡಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಬಿಗಿ ಪೊಲೀಸ್‌ ಭದ್ರತೆಯ ಹಿನ್ನೆಲೆಯಲ್ಲಿ ತುರ್ತು ಭೇಟಿ ಹಾಗೂ ಪರೀಕ್ಷೆಯ ಬರೆಯಲು ಆಗಮಿಸುವ ವಿದ್ಯಾರ್ಥಿಗಳಿಗೆ ಮಾತ್ರವೇ ಹಾಲ್‌ ಟಿಕೆಟ್‌ ತೋರಿಸಿ ಪ್ರಯಾಣಿಸಲು ಅವಕಾಶವನ್ನುಕಲ್ಪಿಸಲಾಗುತ್ತಿದೆ. ಅಲ್ಲದೇ ಕೇರಳದಿಂದ ರೈಲಿನ ಮೂಲಕ ಬರುವವರಿಗೆ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಮಂಗಳೂರಿನ ಪುರಭವನದಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಕಾಸರಗೋಡು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಎರಡೂ ಜಿಲ್ಲೆಗಳ ನಡುವೆ ಯಾವುದೇ ಗೊಂದಲವಿಲ್ಲ. ಕೊರೊನಾ ಸೋಂಕು ತಡೆಯ ನಿಟ್ಟಿನಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಕರ್ನಾಟಕದ ಗಡಿಯೊಳಗೆ ಪ್ರವೇಶ ಮಾಡುವವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್.‌ ಶಶಿಕುಮಾರ್‌, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೊನಾವಣೆ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.