ಶಾಸಕರ ಐಪಿಎಲ್ ಟಿಕೆಟ್ ಗೊಂದಲಕ್ಕೆ ಕೊನೆಗೂ ತೆರೆ – ಡಿಕೆಶಿ ನೇತೃತ್ವದಲ್ಲಿ ಕೆಎಸ್ಸಿಎ ಪದಾಧಿಕಾರಿಗಳೊಂದಿಗೆ ಸಭೆ – 3 IPL, 2 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಉಚಿತ ಪ್ರವೇಶ
ಈ ಮೊದಲು ಕೇವಲ 2 ಟಿಕೆಟ್ಗಳನ್ನು ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಸೋಮವಾರ ನಡೆದ ಸಭೆಯಲ್ಲಿ 3 ಟಿಕೆಟ್ಗಳನ್ನು ನೀಡಲು ಸಮ್ಮತಿ ನೀಡಲಾಗಿದೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ರಾಜಕೀಯ ತಿರುವು ಪಡೆದುಕೊಂಡಿದ್ದ ಐಪಿಎಲ್ ಟಿಕೆಟ್ (IPL Tickets 2026) ಹಣಾಹಣಿಗೆ ಕೊನೆಗೂ ತೆರೆ ಬಿದ್ದಿದೆ. ಈ ಸಂಬಂಧ ಕೆಎಸ್ಸಿಎ ಹಾಗೂ ಆರ್ಸಿಬಿ ಮ್ಯಾನೇಜ್ಮೆಂಟ್ಗಳ ಜೊತೆ ಸಭೆ ನಡೆಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಶಾಸಕರಿಗೆ ಉಚಿತ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಐಪಿಎಲ್ ಟಿಕೆಟ್ ವಿಚಾರವಾಗಿ ಧ್ವನಿ ಎತ್ತಿದ್ದರು. ಇದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಸಾಥ್ ನೀಡಿದ್ದರು. ಇದು ಭಾರೀ ದೊಡ್ಡ ವಿವಾದವನ್ನೇ ಸೃಷ್ಠಿಸಿತ್ತು. ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ಐಪಿಎಲ್ ಟಿಕೆಟ್ ಬೇಕೆಂದು ಚರ್ಚೆ ಮಾಡುತ್ತಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕಳೆದ ಕೆಲವು ದಿನಗಳಿಂದ ಪರ ವಿರೋಧದ ಚರ್ಚೆ ನಡೆಯುತ್ತಲೇ ಇತ್ತು.
ಈ ಎಲ್ಲದರ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್, ರಾಜ್ಯ ಕ್ರಿಕೆಟ್ ಅಸೋಸಿಯೇಷನ್ , ಡಿಎನ್ಎ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್ಮೆಂಟ್ ಜೊತೆ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮೀಟಿಂಗ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕರ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಸಭೆಯಲ್ಲಿ ಓರ್ವ ಶಾಸಕನಿಗೆ ಒಂದು ಮ್ಯಾಚ್ನಲ್ಲಿ 3 ಟಿಕೆಟ್ಗಳನ್ನು ನೀಡಲು ಸಮ್ಮತಿ ನೀಡಲಾಗಿದೆ.
ಈ ಮೊದಲು ಕೇವಲ 2 ಟಿಕೆಟ್ಗಳನ್ನು ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಸೋಮವಾರ ನಡೆದ ಸಭೆಯಲ್ಲಿ 3 ಟಿಕೆಟ್ಗಳನ್ನು ನೀಡಲು ಸಮ್ಮತಿ ನೀಡಲಾಗಿದೆ. ಆದರೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಒಂದು ಪಂದ್ಯದಲ್ಲಿ ಓರ್ವ ಶಾಸಕನಿಗೆ 2 ಟಿಕೆಟ್ಗಳು ಉಚಿತವಾಗಿ ಸಿಗಲಿದೆ. ಮಿಕ್ಕ ಟಿಕೆಟ್ಗಳನ್ನು ಶಾಸಕರು ಕಾಸು ಕೊಟ್ಟು ಖರೀದಿಸಬೇಕಿದೆ. ಒಂದು ಪಂದ್ಯದಲ್ಲಿ ಕೇವಲ ಒಬ್ಬ ಶಾಸಕನಿಗೆ ಮಾತ್ರ ಈ ಉಚಿತ ಟಿಕೆಟ್ ಭಾಗ್ಯ ದೊರೆಯಲಿದೆ.
ಇದನ್ನೂ ಓದಿ: ವಿರಾಟ್ ಕಿಂಗ್.. ಪಡಿಕ್ಕಲ್ ಸಿಂಹ ! IPL ಉದ್ಘಾಟನಾ ಪಂದ್ಯದಲ್ಲೇ ದಾಖಲೆಗಳ ಪುಡಿಪುಡಿ ಮಾಡಿದ RCB
ಇನ್ನು ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಜೊತೆ ಸಭೆಯಲ್ಲಿ ಹಾಜರಾಗಿದ್ದ ಆರ್ಸಿಬಿ ಸಿಇಓ, ಡಿಸಿಎಂ ಡಿ.ಕೆ ಶಿವಕುಮಾರ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇನ್ನು ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ,ಬೆಂಗಳೂರಿನಲ್ಲಿ ಪ್ರತಿ ಐಪಿಎಲ್ ಮ್ಯಾಚ್ನಲ್ಲಿ ಒಬ್ಬ ಶಾಸಕನಿಗೆ ಉಚಿತ 3 ಟಿಕೆಟ್ಗಳು ದೊರೆಯಲಿವೆ. ಅಂತಾರಾಷ್ಟ್ರೀಯ ಪಂದ್ಯಗಳಿರುವಾಗ 2 ಟಿಕೆಟ್ಗಳು ದೊರೆಯಲಿವೆ. ಇದಕ್ಕಿಂತ ಹೆಚ್ಚು ಟಿಕೆಟ್ ಅವಶ್ಯವಿದ್ದರೆ ಅವರು ಹಣ ಕೊಟ್ಟು ಖರೀದಿಸಬೇಕು ಎಂದು ಮಾಹಿತಿ ನೀಡಿದರು.



