ರಾಜ್ಯದ ಮಹಿಳಾ ಕ್ರಿಕೆಟಿಗರಿಗೆ ಪಿಂಚಣಿ ಭಾಗ್ಯ..! ಮಾಜಿ ಸಿಂಹಿಣಿಯರಿಗೆ ಸಿಗಲಿದೆ ಮಾಸಿಕ ಪೆನ್ಶನ್

ವೆಂಕಟೇಶ್​ ಪ್ರಸಾದ್​ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಕರ್ನಾಟಕ ಕ್ರಿಕೆಟ್​​ ಕ್ಷೇತ್ರದಲ್ಲಿ ಅನೇಕ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಇನ್ನು ಇತಿಹಾಸದ ಪುಟ ಸೇರಲಿದೆ ಎಂದು ಅಭಿಮಾನಿಗಳು ಅಂದುಕೊಳ್ಳುವಾಗಲೇ ಸತತ ಪ್ರಯತ್ನದ ಮೂಲಕ ಐಪಿಎಲ್​ ಉದ್ಘಾಟನಾ ಪಂದ್ಯವೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವಂತೆ ಮಾಡಿದ್ದಾರೆ. ಇದೇ ರೀತಿ ಇದೀಗ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಮಾಜಿ ಮಹಿಳಾ ಕ್ರಿಕೆಟ್​ ಆಟಗಾರರಿಗೆ (pension for former Karnataka cricket players) ಕೆಎಸ್​ಸಿಎನಿಂದ ಗುಡ್​​ನ್ಯೂಸ್​ ಒಂದು ಹೊರಬಿದ್ದಿದೆ.

ಹೌದು..! ಕರ್ನಾಟಕ ತಂಡದಲ್ಲಿ ಆಡಿ 55 ವರ್ಷ ಮೇಲ್ಪಟ್ಟಿರುವ ಮಹಿಳಾ ಆಟಗಾರರಿಗೆ ಇನ್ಮುಂದೆ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಘದ ವತಿಯಿಂದ ಪಿಂಚಣಿ ಸೌಲಭ್ಯ ದೊರಕಲಿದೆ. ಆದರೆ ಬಿಸಿಸಿಐನಿಂದ ಈಗಾಗಲೇ ಪಿಂಚಣಿ ಸೌಲಭ್ಯ ಹೊಂದಿರುವವರು ಈ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ ಎಂದು ಕೆಎಸ್​ಸಿಎ ತಿಳಿಸಿದೆ. ಕರ್ನಾಟಕ ಕ್ರಿಕೆಟ್​ ಅಸೋಸಿಯೇಷನ್​ನಿಂದ ಕೇಳಲಾಗುವ ದಾಖಲೆಗಳನ್ನು ಸೂಕ್ತವಾಗಿ ಒದಗಿಸುವ ಮಾಜಿ ಕ್ರಿಕೆಟ್​ ಆಟಗಾರ್ತಿಯರು ಈ ಪಿಂಚಣಿ ಸೌಲಭ್ಯಕ್ಕೆ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಮಟ್ಟದ ಸ್ಪೀಡ್​ ಸ್ಕೇಟಿಂಗ್​ ಚಾಂಪಿಯನ್​ಶಿಪ್​ : ಬ್ರಹ್ಮಾವರದ ಅದ್ವಿತ​ ಗುರುಪ್ರಸಾದ್​ ಶೆಟ್ಟಿಗಾರ್ ಗೆ ಚಿನ್ನದ ಪದಕ

ಇನ್ನು ಈ ವಿಚಾರವಾಗಿ ಮಾತನಾಡಿದ ಕೆಎಸ್​ಸಿಎ ಕಾರ್ಯದರ್ಶಿ ಸಂತೋಷ್​ ಮೆನನ್​, ರಾಜ್ಯದ ಮಹಿಳಾ ಕ್ರಿಕೆಟಿಗರನ್ನು ಹುರಿದುಂಬಿಸುವ ಉದ್ದೇಶದಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಪ್ರಸ್ತುತ ನಮ್ಮ ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್​ ಹಾಗೂ ಶ್ರೇಯಾಂಕಾ ಪಟೇಲ್​ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ.ಇಂತಹ ಯುವ ಆಟಗಾರ್ತಿಯರ ಸಂಖ್ಯೆ ಮತ್ತಷ್ಟು ಹೆಚ್ಚಬೇಕು. ಕರ್ನಾಟಕ ಕ್ರಿಕೆಟ್​ ಮಂಡಳಿಯು ಸದಾ ತನ್ನ ಆಟಗಾರರೊಂದಿಗೆ ಇರಲಿದೆ ಎಂಬುದನ್ನು ಸಾಬೀತುಪಡಿಸಲು ಈ ಸೌಲಭ್ಯ ಪರಿಚಯಿಸಿದ್ದೇವೆ ಎಂದಿದ್ದಾರೆ.

ಬಿಸಿಸಿಐ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಮಹಿಳಾ ಆಟಗಾರ್ತಿಯರಿಗೆ ಮಾಸಿಕ 52,000 ರೂಪಾಯಿ ಪಿಂಚಣಿ ನೀಡುತ್ತಿದೆ.25ಕ್ಕೂ ಅಧಿಕ ಪಂದ್ಯಗಳನ್ನು ಆಡಿದ ಹಾಗೂ 1993ಕ್ಕಿಂತ ಮೊದಲ ನಿವೃತ್ತರಾದ ಮಹಿಳಾ ಆಟಗಾರರು 70 ಸಾವಿರ ರೂಪಾಯಿ ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ. ಕರ್ನಾಟಕ ಕ್ರಿಕೆಟ್​ ಅಸೋಸಿಯೇಷನ್​ ತನ್ನ ಮಾಜಿ ಮಹಿಳಾ ಕ್ರಿಕೆಟಿಗರಿಗೆ ಯಾವ ಮೊತ್ತದ ಪಿಂಚಣಿ ನೀಡುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories