ಶತಕ ‘ವೈಭವ’ : ಕೇವಲ 32 ಎಸೆತಗಳಲ್ಲಿ ಶತಕ ಸಿಡಿಸಿ ವೈಭವ್ ಸೂರ್ಯವಂಶಿ
Vaibhav Suryavanshi: ದೋಹಾದಲ್ಲಿರುವ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಯುಎಇ ವಿರುದ್ಧದ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಪಂದ್ಯದಲ್ಲಿ ಭಾರತೀಯ ಆಟಗಾರ ವೈಭವ್ ಸೂರ್ಯವಂಶಿ ಅಮೋಘ ಸಾಧನೆಗೈದಿದ್ದಾರೆ. ತಮ್ಮ ಟಿ 20 ಚೊಚ್ಚಲ ಪಂದ್ಯದಲ್ಲೇ ವೇಗದ ಶತಕ ಗಳಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರಿಸಿದ್ದಾರೆ.
14 ವರ್ಷ ಪ್ರಾಯದ ವೈಭವ್ ಸೂರ್ಯವಂಶಿ ಕೇವಲ 32 ಎಸೆತಗಳಲ್ಲಿ ಸ್ಫೋಟಕ ಶತಕ ದಾಖಲಿಸಿದ್ದಾರೆ. ಈ ಮೂಲಕ ಭಾರತೀಯ ಬ್ಯಾಟ್ಸಮನ್ ಗಳಿಸಿದ 2ನೇ ಅತೀ ವೇಗದ ಶತಕ ಇದಾಗಿದೆ. ಐಪಿಎಲ್ನಲ್ಲಿಯೂ ಆಡಿದ್ದ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಸೆಂಚೂರಿ ನಿರ್ಮಿಸಿದ್ದರು.
ಪ್ರಪ್ರಥಮ ಓವರ್ನಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ಶುರು ಮಾಡಿದ ವೈಭವ್ ಕೇವಲ 14 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದ್ದರು. ಇದಾದ ಬಳಿಕ ಕೇವಲ 32 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಸಾಧನೆಗೈದಿದ್ದಾರೆ. 15 ಸಿಕ್ಸರ್ ಹಾಗೂ 11 ಬೌಂಡರಿಗಳನ್ನು ಬಾರಿಸಿದ ವೈಭವ್ ಒಟ್ಟೂ 42 ಎಸೆತಗಳಲ್ಲಿ 144 ರನ್ ಬಾರಿಸಿದ್ದಾರೆ.
ಈ ಮೂಲಕ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಸೆಂಚುರಿ ಸಿಡಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ದಾಖಲಿಸಿದ್ದಾರೆ. ಮಾತ್ರವಲ್ಲದೇ ಟಿ20 ಪಂದ್ಯದಲ್ಲಿ ಅತೀ ವೇಗದ ಸೆಂಚುರಿ ಬಾರಿಸಿದ ಅತೀ ಕಡಿಮೆ ವಯಸ್ಸಿನ ಆಟಗಾರ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆರ್‌ಸಿಬಿಗೆ ಕೆಎಲ್ ರಾಹುಲ್ ಫಿಕ್ಸ್: ಕನ್ನಡಿಗನ ಖರೀದಿಗೆ ಮುಂದಾಯ್ತು ಆರ್‌ಸಿಬಿ
2018ರಲ್ಲಿ ರಿಷಬ್ ಪಂತ್ ದೆಹಲಿ ತಂಡದ ಪರ ಆಡಿ ಹಿಮಾಚಲ ಪ್ರದೇಶದ ತಂಡದ ವಿರುದ್ಧ 32 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಟಿ 20 ಪಂದ್ಯಾವಳಿಯಲ್ಲಿ ವೇಗದ ಶತಕ ದಾಖಲಿಸಿದವರ ಪಟ್ಟಿಯಲ್ಲಿ ಅಭಿಷೇಕ್ ಶರ್ಮಾ ಮತ್ತು ಊರ್ವಿಲ್ ಪಟೇಲ್ ಪ್ರಸ್ತುತ ಅಗ್ರ ಸ್ಥಾನದಲ್ಲಿದ್ದಾರೆ. ಇವರು 28 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ



