ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ನಿಷ್ಕ್ರೀಯಗೊಳಿಸಿದ್ದು ಹೇಗೆ ಗೊತ್ತಾ ?

0

ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಂದು ಆತಂಕಕ್ಕೆ ಕಾರಣವಾಗಿತ್ತು. ವಿಮಾನ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ಸುಧಾರಿತ ಬಾಂಬ್ ಪತ್ತೆಯಾಗಿತ್ತು. ಬಾಂಬ್ ನಿಷ್ಕ್ರೀಯದಳದ ಅಧಿಕಾರಿಗಳು ಕೊನೆಗೂ ಬಾಂಬ್ ನಿಷ್ಕ್ರೀಯಗೊಳಿಸಿದ್ದಾರೆ. ಆದ್ರೆ ಬಾಂಬ್ ನಿಷ್ಕ್ರೀಯಗೊಳಿಸೋ ಕಾರ್ಯ ಭಾರೀ ಆತಂಕವನ್ನು ಸೃಷ್ಟಿಸಿತ್ತು.

ಕಚ್ಚಾ ಬಾಂಬ್ ಪತ್ತೆಯಾಗುತ್ತಲೇ ಲ್ಯಾಪ್ ಟಾಪ್ ಬ್ಯಾಗಿನಲ್ಲಿದ್ದ ಕಚ್ಚಾ ಬಾಂಬ್ ನ್ನು ಕಂಟ್ರೋಲ್ ಎಕ್ಸ್ ಪೋಸಿವ್ ಡಿಫ್ಯೂಸ್ ಮಿಷನ್ ಒಳಗೆ ಹಾಕಲಾಯಿತು. ಬ್ಯಾಗನ್ನು ಮಿಷನ್ ಇದ್ದ ವಾಹನವನ್ನು ವಿವಿಐಪಿ ಕಾರು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಅದರ ಬಳಿ ಜನ ಹೋಗದಂತೆ ಎಚ್ಚರಿಕೆ ವಹಿಸಲಾಯಿತು. ನಂತರ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳಗಳು, ಮೆಟಲ್ ಡಿಟೆಕ್ಟರ್‍ಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದವು.

ಯಾವುದೇ ಅನಾಹುತಗಳು ಸಂಭವಿಸದಂತೆ ಮಂಗಳೂರು ಪೊಲೀಸರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. ವಿಮಾನ ನಿಲ್ದಾಣದ ಮಾರ್ಗದ ರಸ್ತೆಗಳ ಸಂಚಾರವನ್ನು ಬಂದ್ ಮಾಡಿ, ವಾಹನಗಳನ್ನು ಬದಲಿ ರಸ್ತೆಯಲ್ಲಿ ಕಳುಹಿಸಿದರು. ಬ್ಯಾಗ್‍ನಲ್ಲಿದ್ದುದು ಸ್ಫೋಟಕವೋ ಅಥವಾ ಬೇರೆ ವಸ್ತುವೋ ಎಂಬ ಬಗ್ಗೆ ಸಾಕಷ್ಟು ಗೊಂದಲಗಳು ಆರಂಭದಲ್ಲಿ ಕಾಡಿದವು. ಆದರೆ ಸಿಐಎಸ್‍ಎಫ್ ಸಿಬ್ಬಂದಿಗಳ ಪ್ರಕಾರ ಅದು ಸಜೀವ ಬಾಂಬ್ ಎನ್ನುವುದನ್ನು ಖಚಿತ ಪಡಿಸಿದ್ದರು. ನಂತರ ಬಾಂಬ್ ನಿಷ್ಕ್ರಿಯ ದಳದ ತಪಾಸಣೆಯ ಬಳಿಕ ಸಜೀವ ಬಾಂಬ್ ಎಂದು ಖಚಿತಪಟ್ಟಿದೆ.

ಲ್ಯಾಪ್‍ಟಾಪ್ ಬ್ಯಾಗ್‍ನಲ್ಲಿದ್ದ ಬಾಂಬ್ ಸ್ಫೋಟಗೊಂಡರೆ ಸುಮಾರು ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಲ್ಲವೂ ಧ್ವಂಸವಾಗುತ್ತಿತ್ತು. ಒಂದು ವೇಳೆ ಟಿಕೆಟ್ ಕೌಂಟರ್ ಬಳಿ ಇದ್ದ ಬಾಂಬ್ ಸ್ಫೋಟಗೊಂಡಿದ್ದರೆ ಮಂಗಳೂರು ವಿಮಾನ ನಿಲ್ದಾಣ ಸಂಪೂರ್ಣವಾಗಿ ಭಸ್ಮವಾಗುತ್ತಿತ್ತು. ಹೀಗಾಗಿ ಬಾರೀ ಪ್ರಮಾಣದ ಅನಾಹುತ ಸಂಭವಿಸೋ ಸಾಧ್ಯತೆಯಿತ್ತು.

ಬಾಂಬ್ ಇರಿಸಿದ್ದ ಕಂಟ್ರೋಲ್ ಎಕ್ಸ್‍ಪೊಸಿವ್ ಡಿಫ್ಯೂಸ್ ಮಿಷನ್ ನನ್ನು ಆರಂಭದಲ್ಲಿ ಸಮುದ್ರ ಕಿನಾರೆಯಲ್ಲಿ ಸ್ಪೋಟಿಸೋ ಪ್ಲಾನ್ ರೂಪಿಸಲಾಗಿತ್ತಾದ್ರೂ, ಅಂತಿಮವಾಗಿ ವಿಮಾನ ನಿಲ್ದಾಣದಿಂದ ಕೆಂಜಾರು ಮೈದಾನಕ್ಕೆ ಕೊಂಡೊಯ್ಯಲಾಯಿತು. ಮಿಷನ್ ಕೊಂಡೊಯ್ಯುವಾಗ ಯಾವುದೇ ರೀತಿಯಲ್ಲಿಯೂ ಸ್ಪೋಟ ಸಂಭವಿಸದಂತೆ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗಿತ್ತು. ಬಾಂಬ್ ನಲ್ಲಿದ್ದ ಟೈಮರ್ ಸಂಪರ್ಕ ಸಂಪೂರ್ಣವಾಗಿ ಸ್ಥಗಿತವಾಗಿತ್ತು.

ಕೆಂಜಾರು ಮೈದಾನದಲ್ಲಿ ಮರಳಿನ ಚೀಲಗಳನ್ನು ಜೋಡಿಸಿ ಅದರ ನಡುವಲ್ಲಿ ಬಾಂಬ್ ಇರಿಸಲಾಗಿತ್ತು. ಟೈಮರ್ ಸಂಪರ್ಕ ಕಡಿತವಾಗಿದ್ದರಿಂದಾಗಿ ಬಾಂಬ್ ಗೆ ವೈಯರ್ ಸಂಪರ್ಕವನ್ನು ಮಾಡಿ ಬಾಂಬ್ ಸ್ಪೋಟಿಸಲಾಗಿತ್ತು.

ಈ ವೇಳೆಯಲ್ಲಿ ಸಾರ್ವಜನಿಕರು ಹಾಗೂ ಪೊಲೀಸರು ಕುತೂಹಲದಿಂದ ಬಾಂಬ್ ನಿಷ್ಕ್ರೀಯ ದಳದ ಕಾರ್ಯಾಚರಣೆಯನ್ನು ವೀಕ್ಷಿಸಿದರು. ಅಂತಿಮವಾಗಿ ಬಾಂಬ್ ಸ್ಪೋಟಿಸೋ ಮೂಲಕ ಎಲ್ಲರ ಆತಂಕ ದೂರವಾಗಿತ್ತು.

ಚಿತ್ರಗಳು : ಅಪುಲ್ ಇರಾ

Leave A Reply

Your email address will not be published.