ಕೊರೊನಾ ರೋಗಿ ಸಾವು : ಅಂಬುಲೆನ್ಸ್‌ಗೆ ಬೆಂಕಿ, ವೈದ್ಯರ ಮೇಲೆ ಹಲ್ಲೆ

0

ಬೆಳಗಾವಿ : ಕೊರೊನಾ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದರಿಂದ ಕೆರಳಿದ ಕೊರೊನಾ ಸೋಂಕಿತ ವ್ಯಕ್ತಿಯ ಸಂಬಂಧಿಕರು ಆಸ್ಪತ್ರೆಯ ಮುಂಭಾಗದಲ್ಲಿ ನಿಂತಿದ್ದ ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಬೀಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಐಸಿಯುನಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ರೊಚ್ಚಿಗೆದ್ದ ಮೃತನ ಸಂಬಂಧಿಕರು ಕೊರೊನಾ ವಾರ್ಡಿನ ಮುಂದೆ ನಿಂತಿದ್ದ ಅಂಬುಲೆನ್ಸ್‌ಗೆ ಬೆಂಕಿ ಹಚ್ಚಿ ಆಸ್ಪತ್ರೆ ಮುಂಭಾಗದಲ್ಲಿದ್ದ ಪೊಲೀಸ್ ವಾಹನ ಮತ್ತು ಕಾರುಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

ಈ ವೇಳೆ ಹತ್ತಾರು ಜನರಿಂದ ಗುಂಪು ಐಸಿಯೂ ವಾರ್ಡಿಗೆ ನುಗ್ಗಿ ವಾರ್ಡಿನಲ್ಲಿದ್ದ ವೈದ್ಯರು ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದೆ. ಆದರೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಆದರೆ ಆಗ ತಾನೇ ಅಥಣಿಯಿಂದ ಕೊರೊನಾ ರೋಗಿಯನ್ನು ಕರೆತಂದ ಆಸ್ಪತ್ರೆ ಮುಂಭಾಗ ನಿಂತಿದ್ದ ಅಂಬುಲೆನ್ಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಅಂಬುಲೆನ್ಸ್ ಚಾಲಕ ಮತ್ತು ನರ್ಸ್ ಆಸ್ಪತ್ರೆಯೊಳಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಸದ್ಯಕ್ಕೆ ಸ್ಥಳಕ್ಕೆ ಪೊಲೀಸರು ಮತ್ತು ಆಗ್ನಿಶಾಮಕ ದಳ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿ ಎಂ.ಜಿ.ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ, ಪೊಲೀಸ್ ಕಮೀಷನರ್ ತ್ಯಾಗರಾಜ್, ಜಿಪಿಂ ಸಿಇಒ ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.