ಬ್ರಹ್ಮಾವರದ ಮಹಿಳೆಗೆ ₹1.20 ಲಕ್ಷರೂ. ಆನ್ಲೈನ್ ವಂಚನೆ : ಈ ಕರೆ ಸ್ವೀಕರಿಸೋ ಮುನ್ನ ಹುಷಾರ್

ಬ್ರಹ್ಮಾವರ (Brahmavara) : ತಾನು ಬ್ಯಾಂಕ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿಯ ಮಾತನ್ನು ನಂಬಿದ್ದ ಮಹಿಳೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಬರೋಬ್ಬರಿ ₹1.20 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರದ ನಿವಾಸಿಯಾಗಿರುವ ಶೈಲಜಾ ಅವರೇ ಆನ್ಲೈನ್ ವಂಚನೆಗೆ ಒಳಗಾದವರು. ಜುಲೈ 11 ರಂದು ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Brahmavara : ವಂಚನೆ ನಡೆದಿದ್ದು ಹೇಗೆ ?
ಶೈಲಜಾ ಅವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತಮ್ಮನ್ನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು, ಶೈಲಜಾ ಅವರ RBL ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ ಎಂದು ತಿಳಿಸಿದ್ದಾರೆ.
ನಿಮ್ಮ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಲು, ಒಂದು QR ಕೋಡ್ ಅನ್ನು ಸ್ಕ್ಯಾನ್ ಮಾಡುವಂತೆ ಸೂಚಿಸಿದ್ದಾರೆ.
ಶೈಲಜಾ ಅವರು ಆ QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ತಕ್ಷಣ, ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹1.20 ಲಕ್ಷ ಹಣ ಕಡಿತಗೊಂಡಿದೆ.
ಹಣ ಕಡಿತಗೊಂಡ ನಂತರ, ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಶೈಲಜಾ ಅವರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇಂತಹ ಆನ್ಲೈನ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ?
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆಗಳು ಹೆಚ್ಚುತ್ತಿವೆ. ಇಂತಹ ವಂಚನೆಗಳಿಂದ ದೂರವಿರಲು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಅನುಸರಿಸಿ:
ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ: ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಪಿನ್, OTP, CVV, ಆಧಾರ್ ಸಂಖ್ಯೆ, ಪಾನ್ ಸಂಖ್ಯೆ ಅಥವಾ ಯಾವುದೇ ವೈಯಕ್ತಿಕ ಅಥವಾ ಆರ್ಥಿಕ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ.
ಫೋನ್ ಕರೆ, SMS ಅಥವಾ ಇಮೇಲ್ ಮೂಲಕ ಹಂಚಿಕೊಳ್ಳಬೇಡಿ. ನೆನಪಿಡಿ, ಬ್ಯಾಂಕ್ ಅಧಿಕಾರಿಗಳು ಅಥವಾ ಆರ್ಬಿಐ ಎಂದಿಗೂ ಈ ಮಾಹಿತಿಯನ್ನು ಕೇಳುವುದಿಲ್ಲ.
ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ/ಸ್ಕ್ಯಾನ್ ಮಾಡಬೇಡಿ:
ಅಪರಿಚಿತ ಮೂಲಗಳಿಂದ ಬರುವ ಲಿಂಕ್ಗಳು, QR ಕೋಡ್ಗಳು ಅಥವಾ ಸಂದೇಶಗಳಲ್ಲಿನ ಅಟ್ಯಾಚ್ಮೆಂಟ್ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಸ್ಕ್ಯಾನ್ ಮಾಡಬೇಡಿ. ಇವು ಫಿಶಿಂಗ್ ಅಥವಾ ಮಾಲ್ವೇರ್ ದಾಳಿಗೆ ಕಾರಣವಾಗಬಹುದು.
ಅಧಿಕೃತ ಮೂಲಗಳನ್ನು ಸಂಪರ್ಕಿಸಿ:
ನಿಮ್ಮ ಬ್ಯಾಂಕ್ ಖಾತೆ ಅಥವಾ ಯಾವುದೇ ಹಣಕಾಸು ವ್ಯವಹಾರಗಳ ಬಗ್ಗೆ ಸಂದೇಹಗಳಿದ್ದರೆ, ನೇರವಾಗಿ ನಿಮ್ಮ ಬ್ಯಾಂಕಿನ ಅಧಿಕೃತ ಶಾಖೆಗೆ ಭೇಟಿ ನೀಡಿ ಅಥವಾ ಅಧಿಕೃತ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಿರಿ.
ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ:
ಅಪರಿಚಿತ ವ್ಯಕ್ತಿಗಳು ಹಣಕಾಸಿನ ವಿಚಾರದಲ್ಲಿ ಆತುರದಿಂದ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿದರೆ, ಎಚ್ಚರಿಕೆ ವಹಿಸಿ. ಯಾವುದೇ ಆಮಿಷಗಳಿಗೆ ಅಥವಾ ಬೆದರಿಕೆಗಳಿಗೆ ಒಳಗಾಗಬೇಡಿ.
ಸೈಬರ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರು ಹೆಚ್ಚು ಜಾಗರೂಕರಾಗಿರುವುದು ಅನಿವಾರ್ಯವಾಗಿದೆ.
Brahmavara 1.20 lakh for a woman from Online fraud Be careful before accepting this call in Kannada News



