Vinaykulkarni: ಕೊನೆಗೂ ಜೈಲಿನಿಂದ ಹೊರಬಂದ ಮಾಜಿ ಸಚಿವ: ತಿಲಕವಿಟ್ಟು ಸ್ವಾಗತಿಸಿದ ಕಾಂಗ್ರೆಸ್ ಶಾಸಕಿ!

ಬೆಳಗಾವಿ : ಕೊಲೆ ಪ್ರಕರಣದಡಿಯಲ್ಲಿ ಜೈಲು ಸೇರಿದ ಮಾಜಿ ಸಚಿವ ವಿನಯ್ ಕುಲಕರ್ಣಿ ಕೊನೆಗೂ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಕಾರಾಗೃಹದಿಂದ ಹೊರಬಂ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಲಕವಿಟ್ಟು, ರಾಖಿ ಕಟ್ಟಿ ಸ್ವಾಗತಕೋರಿದ್ದಾರೆ.

ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ವಿನಯ್ ಕುಲಕರ್ಣಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದರು. ಜಾಮೀನಿನ ಮೇಲೆ ಬಿಡುಗಡೆಗೊಂಡ ವಿನಯ್ ಕುಲಕರ್ಣಿ ಸ್ವಾಗತಕ್ಕೆ ಕೊರೋನಾ ನಿಯಮ ಮರೆತು ನೂರಾರು ಕಾರ್ಯಕರ್ತರು ಆಗಮಿಸಿದ್ದು, ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದ್ದಾರೆ.

ಕಳೆದ 9 ತಿಂಗಳಿನಿಂದ  ಜೈಲಿನಲ್ಲಿದ್ದ ವಿನಯ್ ಕುಲಕರ್ಣಿ ಜಾಮೀನಿಗಾಗಿ ಶತ ಪ್ರಯತ್ನ ಮಾಡಿದ್ದು, ಕೊನೆಗೆ ಸುಪ್ರೀಂ ಕೋರ್ಟ್ ಹಾಗೂ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ.

ಸ್ಥಳೀಯ ನ್ಯಾಯಾಲಯಕ್ಕೆ ಶ್ಯೂರಿಟಿ ನೀಡುವುದು, ಸಾಕ್ಷಿಗಳ ಮೇಲೆ ಪ್ರಭಾವ ಬೀರದೇ ಇರುವುದು, ಧಾರವಾಡಕ್ಕೆ ಭೇಟಿ ನೀಡಬಾರದು ಎಂಬುದನ್ನು ಸೇರಿದಂತೆ ಹಲವು ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. ಬಿಡುಗಡೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಕುಲಕರ್ಣಿ, ರೈತ ಕುಟುಂಬದಲ್ಲಿ ಹುಟ್ಟಿ ವಿದ್ಯಾರ್ಥಿ ನಾಯಕನಾಗಿ ಬೆಳೆದು ಇಲ್ಲಿಯವರೆಗೆ ಬಂದಿದ್ದೇನೆ. ನನ್ನ ಜನರಿಗಾಗಿ ಯಾವ ಹೋರಾಟಕ್ಕೂ ಸಿದ್ಧ. ಬದುಕು ತುಂಬಾ ಬದಲಾಗಿದೆ. ಜೈಲಿನಲ್ಲಿ ಕೂತು ಓದುವುದನ್ನು ರೂಢಿಸಿಕೊಂಡು ಹಲವು ವಿಚಾರ ತಿಳಿದುಕೊಂಡಿದ್ದೇನೆ ಎಂದಿದ್ದಾರೆ.

Comments are closed.