Duplicate Gold Loan : ನಕಲಿ ಚಿನ್ನಕ್ಕೆ 72 ಲಕ್ಷ ಸಾಲ ಕೊಟ್ಟ ಕೆನರಾ ಬ್ಯಾಂಕ್…!!!

ರಾಮನಗರ : ಚಿನ್ನ ಪರೀಕ್ಷಕನ ಸಹಾಯ ಪಡೆದು ನಕಲಿ ಚಿನ್ನ ಅಡವಿಟ್ಟು ಬರೋಬ್ಬರಿ 72 ಲಕ್ಷ ರೂ. ಸಾಲ ಪಡೆದು ವಂಚಿಸಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ನಡೆದಿದೆ.

ಕನಕಪುರ ತಾಲೂಕಿನ ಹೊನ್ನಿಗನಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ 352 ಖಾತೆಗಳ ಪೈಕಿ 271 ಖಾತೆಗಳಲ್ಲಿ ಅರ್ಧದಷ್ಟು ನಕಲಿ ಚಿನ್ನಹಾಗೂ 81 ಖಾತೆಗಳಲ್ಲಿ ಸಂಪೂರ್ಣವಾಗಿ ನಕಲಿ ಚಿನ್ನವನ್ನೇ ಅಡವಿರಿಸಿ ಬರೋಬ್ಬರಿ 72.50 ರೂ. ಹಣವನ್ನು ಪಡೆದು ಬ್ಯಾಂಕಿಗೆ ವಂಚಿಸಲಾಗಿದೆ.

ಬ್ಯಾಂಕಿನಲ್ಲಿ ಚಿನ್ನವನ್ನು ಪರೀಕ್ಷೆ ಮಾಡುತ್ತಿದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ರಾಜಣ್ಣ (52 ವರ್ಷ) ಎಂಬಾತನ ಮೇಲೆ ಬ್ಯಾಂಕ್‌ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ನಂಬಿಕೆಯನ್ನು ಇರಿಸಿಕೊಂಡಿದ್ದರು. ರಾಜಣ್ಣ ಚಿನ್ನ ಪರೀಕ್ಷೆ ಮಾಡಿದ ಸಿಬ್ಬಂದಿ ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಬ್ಯಾಂಕ್‌ ಶಾಖೆಯಲ್ಲಿ ನಕಲಿ ಚಿನ್ನದ ಆಭರಣ ಅಡವಿಟ್ಟು ಸಾಲ ನೀಡುತ್ತಿರುವ ಕುರಿತು ಮಾಹಿತಿ ಪಡೆದ ಕೆನರಾ ಬ್ಯಾಂಕ್‌ನ ಸಹಾಯಕ ಜನರಲ್‌ ಮ್ಯಾನೇಜರ್‌ ಸಾತನೂರು ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರು ಚಿನ್ನ ಪರೀಕ್ಷೆ ನಡೆಸುತ್ತಿದ್ದ ರಾಜಣ್ಣನನ್ನು ಬಂಧಿಸಿದ್ದಾರೆ. ಅಲ್ಲದೇ ಕೃತ್ಯದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್‌ ಶಾಖೆಯ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಸೇರಿದಂತೆ ಒಟ್ಟು ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ : ಉಡುಪಿ : ಬ್ಯಾಂಕಿನಲ್ಲಿದ್ದ ಗ್ರಾಹಕನ ಕೈಯಿಂದ 1.90 ಲಕ್ಷ ರೂಪಾಯಿ ಹಣ ಕಸಿದು ಪರಾರಿ

ರಾಜಣ್ಣ ಹಲವು ವರ್ಷಗಳಿಂದಲೂ ಬ್ಯಾಂಕಿನಲ್ಲಿ ಚಿನ್ನ ಪರೀಕ್ಷೆ ಮಾಡುತ್ತಿದ್ದ. ಬ್ಯಾಂಕ್‌ ಸಿಬ್ಬಂಧಿಗಳು ಸಂಪೂರ್ಣವಾಗಿ ರಾಜಣ್ಣನನ್ನು ನಂಬಿದ್ದರು. ಆದರೆ ರಾಜಣ್ಣ ಇದನ್ನೇ ಬಂಡವಾಳ ಮಾಡಿಕೊಂಡು ಜನರಿಂದ ನಕಲಿ ಚಿನ್ನವನ್ನು ಅಡವಿರಿಸಿಕೊಂಡು ವಂಚನೆ ಮಾಡಿದ್ದಾರೆ. ಇದೀಗ ಪೊಲೀಸರು ಬ್ಯಾಂಕ್‌ ಅಧಿಕಾರಿಗಳನ್ನೂ ಕೂಡ ತನಿಖೆಗೆ ಒಳಪಡಿಸಿದ್ದಾರೆ. ಅಲ್ಲದೇ ನಕಲಿ ಚಿನ್ನ ಅಡವಿಟ್ಟವರ ಮಾಹಿತಿ ಯನ್ನು ಪಡೆದು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Comments are closed.