Human Sacrifice: ಸತ್ತ ಅಪ್ಪನನ್ನು ಬದುಕಿಸಲು 2 ತಿಂಗಳ ಹಸುಗೂಸನ್ನೇ ಬಲಿ ಕೊಡಲು ಮುಂದಾದ ಮಹಿಳೆ.. ಆಮೇಲೆ ನಡೆದಿದ್ದೇ ಬೇರೆ..

ದೆಹಲಿ: Human Sacrifice: 21ನೇ ಶತಮಾನಕ್ಕೆ ಕಾಲಿಟ್ಟರೂ ನಮ್ಮ ದೇಶದಿಂದ ಮೂಢನಂಬಿಕೆಗಳು ಪೂರ್ತಿಯಾಗಿ ಅಳಿಸಿಹೋಗಿಲ್ಲ. ದೇಶ ಎಷ್ಟೇ ಅಭಿವೃದ್ಧಿ ಹೊಂದುತ್ತಿದ್ದರೂ ಕೆಲವರ ಮನಸ್ಥಿತಿಗಳು ಇನ್ನೂ ಮೂಢನಂಬಿಕೆಯ ಪರಿಧಿಯನ್ನು ದಾಟಿ ಹೋಗುತ್ತಿಲ್ಲ. ಹಳ್ಳಿ ಜನರು ಮುಗ್ಧರು .. ಏನೋ ತಿಳಿಯದೇ ತಪ್ಪು ಮಾಡುತ್ತಾರೆ ಅಂದುಕೊಳ್ಳಬಹುದು. ಆದರೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದ ಘಟನೆಯೊಂದು ನಿಜಕ್ಕೂ ಬೆಚ್ಚಿಬೀಳಿಸುವಂತಿದೆ.

ಸತ್ತುಹೋಗಿರುವ ತನ್ನ ತಂದೆಯನ್ನು ಬದುಕಿಸಲು 2 ತಿಂಗಳ ಹಸುಗೂಸನ್ನೇ ನರಬಲಿಕೊಡಲು ಮಹಿಳೆಯೊಬ್ಬಳು ಯತ್ನಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಆದರೆ ಮಗುವಿನ ಅಪಹರಣ ಪ್ರಕರಣವನ್ನು ಭೇದಿಸಿದ ಪೊಲೀಸರು ಸಮಯಕ್ಕೆ ಸರಿಯಾಗಿ ಬಂದು ಮಗುವನ್ನು ರಕ್ಷಿಸಿ ಮಹಿಳೆಯನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ತಾನು ತನ್ನ ಸತ್ತಿರುವ ತಂದೆಯನ್ನು ಬದುಕಿಸುವ ಆಸೆಯಿಂದ ಮಗುವನ್ನು ಅಪಹರಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: Crime News: ಎರಡನೇ ಪತ್ನಿಯನ್ನು ಜೈಲಿಗಟ್ಟಲು ತನ್ನ ಮಗಳನ್ನೇ ಬಲಿ ಕೊಟ್ಟ ಪಾಪಿ ತಂದೆ

ಪ್ರಕರಣದ ಹಿನ್ನೆಲೆ:
ಕಳೆದ ಗುರುವಾರ(ನ.10) ದೆಹಲಿಯ ಗರ್ಹಿ ಪ್ರದೇಶದಿಂದ ಸಂಜೆ 4 ಗಂಟೆ ವೇಳೆಗೆ 2 ತಿಂಗಳ ಹಸುಗೂಸು ಅಪಹರಣಕ್ಕೊಳಗಾಗಿತ್ತು. ಮಗುವಿನ ಹೆತ್ತವರು ಅಮರ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಕೇವಲ 24 ಗಂಟೆಯೊಳಗೆ ಮಗುವನ್ನು ಪತ್ತೆಹಚ್ಚಿ ಹೆತ್ತವರಿಗೆ ಒಪ್ಪಿಸಿದ್ದಾರೆ. ಕೋಟ್ಲಾ ಮುಬಾರಕ್ ಪುರ ಪ್ರದೇಶದಲ್ಲಿ ಅಪಹರಣಕ್ಕೊಳಗಾಗಿದ್ದ ಮಗು ಪತ್ತೆಯಾಗಿತ್ತು.

ವಿಚಾರಣೆ ವೇಳೆ ಬಾಯ್ಬಿಟ್ಟ ಮಹಿಳೆ:
ಕಳೆದ ಅಕ್ಟೋಬರ್ ನಲ್ಲಿ ತನ್ನ ತಂದೆ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರದ ವೇಳೆಗೆ ಗಂಡು ಮಗುವಿನ ನರಬಲಿಯಿಂದ ತಂದೆಗೆ ಮತ್ತೆ ಜೀವ ಕೊಡಿಸಬಹುದು ಎಂದು ತಿಳಿದುಬಂತು. ಹೀಗಾಗಿ ಮಗುವನ್ನು ಅಪಹರಿಸಿದ್ದಾಗಿ ಆರೋಪಿ ಮಹಿಳೆ ಶ್ವೇತಾ ಬಾಯ್ಬಿಟ್ಟಿದ್ದಾಳೆ.

ತನಿಖೆ ವೇಳೆ ಕಂಡುಬಂದ ಸತ್ಯ ಏನು..?
ದೆಹಲಿ ಆಗ್ನೇಯ ಪೊಲೀಸ್ ಆಯುಕ್ತ ಇಶಾ ಪಾಂಡೆ ಹೇಳಿರುವ ಪ್ರಕಾರ, ಮಹಿಳೆ ಶ್ವೇತಾ ತನ್ನ ಸತ್ತ ಅಪ್ಪನನ್ನು ಬದುಕಿಸಲು ನಿರ್ಧರಿಸಿದಂತೆ ಅದೇ ಪ್ರದೇಶದಲ್ಲಿ ಗಂಡುಮಗುವಿನ ಹುಡುಕಾಟದಲ್ಲಿ ತೊಡಗಿದ್ದಾಳೆ. ಇದೇ ಪ್ರಯುಕ್ತ ಸಫ್ದರ್ಜಂಗ್ ಆಸ್ಪತ್ರೆಯ ಬಾಣಂತಿಯರ ವಾರ್ಡ್ ಗೆ ತೆರಳಿ ತನ್ನನ್ನು ತಾನು ಮಕ್ಕಳು ಹಾಗೂ ಬಾಣಂತಿಯರ ಸೇವೆ ಮಾಡುವ ಎನ್ ಜಿಒ ಕಾರ್ಯಕರ್ತೆ ಎಂದು ಪರಿಚಯಿಸಿಕೊಂಡಿದ್ದಾಳೆ. ಬಳಿಕ ಗಂಡು ಮಗುವಿನ ಮನೆಯವರ ಜೊತೆ ಆತ್ಮೀಯ ಒಡನಾಟ ಬೆಳೆಸಿಕೊಂಡು ಸಮಯ ನೋಡಿ ಮಗುವನ್ನು ಅಪಹರಿಸಿದ್ದಾಳೆ.

ಇದನ್ನೂ ಓದಿ: Mandya News : ಈಜಲು ತೆರಳಿದ್ದ ರಾಷ್ಟೀಯ ಮಟ್ಟದ ಸೈಕ್ಲಿಂಗ್‌ ಕ್ರೀಡಾಪಟು ಸಾವು

ಅಮರ್ ಕಾಲೋನಿ ಠಾಣೆಯಲ್ಲಿ ಹೆತ್ತವರು ತಮ್ಮ ಮಗುವನ್ನು ಅಪರಿಚಿತ ಮಹಿಳೆ ಅಪಹರಿಸಿದ್ದಾಗಿ ದೂರು ನೀಡಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ಭೇಟಿಯಾದ ಶ್ವೇತಾ ಜೊತೆಗಿನ ಭೇಟಿಯನ್ನು ಪೊಲೀಸರಿಗೆ ವಿವರಿಸಿದ್ದು, ತಾಯಿಗೆ ಹಾಗೂ ಮಗುವಿಗೆ ಉಚಿತ ಔಷಧಿ ನೀಡುವ ನೆಪದಲ್ಲಿ ಮನೆಗೆ ಬಂದಿದ್ದ ಆಕೆಯೇ ಮಗುವನ್ನು ಅಪಹರಿಸಿದ್ದಾಗಿ ಹೇಳಿದ್ದಾರೆ. ಅಪಹರಣಕ್ಕೊಳಗಾದ ಮೊದಲ ದಿನ ಅಂದರೆ ಬುಧವಾರದಂದು ಆಕೆ ಮಗುವಿನ ತಪಾಸಣೆ ನೆಪದಲ್ಲಿ ಮಮ್ರಾಜ್ ಮೊಹಲ್ಲಾದಲ್ಲಿರುವ ಮನೆಗೆ ಭೇಟಿ ನೀಡಿದ್ದಾಳೆ. ಅದಾದ ಬಳಿಕ ಗುರುವಾರದಂದು ಕೂಡಾ ಮನೆಗೆ ಬಂದಿದ್ದ ಆಕೆ ಮಗುವಿನ ತಾಯಿಯನ್ನು ಮಾತಿನಲ್ಲೇ ಮೋಡಿ ಮಾಡಿ ಮಗುವನ್ನು ಹೊರಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾಳೆ. ಅದಕ್ಕೆ ಒಪ್ಪಿದ ತಾಯಿ ತನ್ನ ಸಂಬಂಧಿ ರೀತುವನ್ನು ಮಗುವಿನ ಜೊತೆ ಕಳಿಸಿಕೊಟ್ಟಿದ್ದಾರೆ. ದಾರಿ ಮಧ್ಯದಲ್ಲಿ ರೀತುವಿಗೆ ಅಮಲು ಬರುವ ತಂಪು ಪಾನೀಯ ಕುಡಿಸಿದ್ದು, ಗರ್ಹಿ ಪ್ರದೇಶಕ್ಕೆ ಬರುತ್ತಿದ್ದಂತೆ ಮಗುವನ್ನು ಸ್ವಿಫ್ಟ್ ಕಾರಿನಲ್ಲಿ ಅಪಹರಿಸಿ ಪರಾರಿಯಾಗಿದ್ದಾಳೆ. ಅಲ್ಲದೇ ರೀತುವನ್ನು ಉತ್ತರ ಪ್ರದೇಶದ ಘಜಿಯಾಬಾದ್ ಬಳಿ ಕಾರಿನಿಂದ ಹೊರಗೆ ಎಸೆದು ಹೋಗಿದ್ದಾಳೆ. ಆಕೆಗೆ ಪ್ರಜ್ಞೆ ಬಂದ ಬಳಿಕ ಮಗುವಿನ ಹೆತ್ತವರಿಗೆ ಅಪಹರಣದ ಮಾಹಿತಿ ನೀಡಿದ್ದಾಳೆ ಎಂದು ಡಿಸಿಪಿ ಇಶಾ ಪಾಂಡೆ ಪ್ರಕರಣದ ಇಂಚಿಂಚೂ ಮಾಹಿತಿ ನೀಡಿದ್ದಾರೆ.

Human Sacrifice: Woman kidnaps 2-month-old for ‘human sacrifice’ for ‘reviving’ dead father, arrested

Comments are closed.