ಹನಿಟ್ರ್ಯಾಪ್ ಜಾಲ: 100ಕ್ಕೂ ಹೆಚ್ಚು ಜನರ ಖಾಸಗಿ ವಿಡಿಯೋ ಚಿತ್ರೀಕರಿಸಿದ್ದ ದಂಪತಿ ಸೆರೆ
Crime News: ಹೈದರಾಬಾದ್: ಸೋಷಿಯಲ್ ಮೀಡಿಯಾ ಮೂಲಕ ಜನರನ್ನು ಪುಸಲಾಯಿಸಿ, ಅವರ ಖಾಸಗಿ ಕ್ಷಣಗಳನ್ನು ಗುಪ್ತ ಕ್ಯಾಮೆರಾದಲ್ಲಿ ಸೆರೆಹಿಡಿದು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ದಂಪತಿಯನ್ನು ಕರೀಮನಗರ ಗ್ರಾಮಾಂತರ ಪೊಲೀಸರು ಬುಧವಾರ (ಜನವರಿ 14) ಬಂಧಿಸಿದ್ದಾರೆ. ಮೂಲತಃ ಮಂಚೇರಿಯಲ್ ಮೂಲದ ಈ ದಂಪತಿ ಕಳೆದ ಕೆಲವು ಸಮಯದಿಂದ ಕರೀಮನಗರದಲ್ಲಿ ವಾಸವಾಗಿದ್ದರು.
ಸಾಲದ ಸುಳಿಗೆ ಸಿಲುಕಿ ಸಂಚು:
ಪೊಲೀಸ್ ತನಿಖೆಯ ಪ್ರಕಾರ, ಪತಿಗೆ ಮಾರ್ಬಲ್ ಮತ್ತು ಇಂಟೀರಿಯರ್ ಡೆಕೋರೇಶನ್ ವ್ಯವಹಾರದಲ್ಲಿ ಭಾರಿ ನಷ್ಟವಾಗಿತ್ತು. ತಾವು ವಾಸವಿದ್ದ ಫ್ಲಾಟ್ನ ಇಎಂಐ (EMI) ಪಾವತಿಸಲು ಹಣವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಈ ದಂಪತಿ, ಸುಲಭವಾಗಿ ಹಣ ಸಂಪಾದಿಸಲು ಈ ಅಡ್ಡದಾರಿ ಹಿಡಿದಿದ್ದರು. ಯೋಜನೆಯಂತೆ ಪತ್ನಿಯ ಅರೆನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಜನರನ್ನು ಆಕರ್ಷಿಸುತ್ತಿದ್ದರು.
ಶಿವಮೊಗ್ಗದಲ್ಲಿ ‘ಲಾಂಗ್’ ಹಿಡಿದು ಕಳ್ಳರ ಅಟ್ಟಹಾಸ: ಒಂದೇ ರಾತ್ರಿ 15 ಲಕ್ಷದ ಚಿನ್ನಾಭರಣ ದೋಚಿದ ಕಿಡಿಗೇಡಿಗಳು
ಬ್ಲ್ಯಾಕ್ಮೇಲ್ ತಂತ್ರ:
ಪತ್ನಿಯ ಫೋಟೋ ನೋಡಿ ಆಕರ್ಷಿತರಾಗಿ ಬರುತ್ತಿದ್ದ ಗ್ರಾಹಕರೊಂದಿಗೆ ಆಕೆ ಖಾಸಗಿಯಾಗಿ ಇರುವಂತೆ ಪತಿ ವ್ಯವಸ್ಥೆ ಮಾಡುತ್ತಿದ್ದ. ರೂಮಿನಲ್ಲಿ ಅಳವಡಿಸಲಾಗಿದ್ದ ಗುಪ್ತ ಕ್ಯಾಮೆರಾಗಳ ಮೂಲಕ ಇಬ್ಬರ ಆಪ್ತ ಕ್ಷಣಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ಪತಿ, ನಂತರ ಆ ವಿಡಿಯೋಗಳನ್ನು ತೋರಿಸಿ ಸಂತ್ರಸ್ತರಿಂದ ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ನೀಡದಿದ್ದರೆ ವಿಡಿಯೋಗಳನ್ನು ಇಂಟರ್ನೆಟ್ನಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ ಈ ದಂಪತಿ, ಇಲ್ಲಿಯವರೆಗೆ ಸುಮಾರು 100ಕ್ಕೂ ಹೆಚ್ಚು ಜನರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.
ಈ ಕೃತ್ಯದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ದಂಪತಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.



