ಮೊಬೈಲ್ ಚಟದ ಸಂಶಯ: ಮಗನ ಹುಟ್ಟುಹಬ್ಬದಂದೇ ಹೆಂಡತಿಯ ಕತ್ತು ಹಿಸುಕಿ ಕೊಂದ ಪತಿ!
Crime News | Chikkamagaluru Crime News: ಬೀರೂರು: ಪ್ರೀತಿಸಿ ಮದುವೆಯಾಗಿ 12 ವರ್ಷಗಳ ಕಾಲ ಸುಖವಾಗಿದ್ದ ಸಂಸಾರದಲ್ಲಿ ‘ಅನುಮಾನ’ ಎಂಬ ಮಹಾಮಾರಿ ನುಗ್ಗಿದ ಪರಿಣಾಮ, ಹೆಂಡತಿಯ ಕೊಲೆಯಲ್ಲಿ ಅಂತ್ಯಗೊಂಡಿದೆ. ತನ್ನ ಪತ್ನಿ ಮೊಬೈಲ್‌ನಲ್ಲಿ ಬೇರೆ ಪುರುಷರೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂಬ ಸಂಶಯದಿಂದ ಪತಿ ಅವಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ:
ಅಜ್ಜಂಪುರ ತಾಲೂಕಿನ ಬುರುಡೆಕಟ್ಟೆ ಮೂಲದ ರಂಗನಾಥ್ ಮತ್ತು ಮಮತಾ (32) ಎಂಬುವವರು 12 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಏಳು ವರ್ಷಗಳಿಂದ ಈ ದಂಪತಿ ಬೀರೂರಿನ ಚೌಡೇಶ್ವರಿ ಬಡಾವಣೆಯಲ್ಲಿ ವಾಸವಿದ್ದರು. ರಂಗನಾಥ್ ಗಾರೆ ಕೆಲಸ ಮಾಡುತ್ತಿದ್ದರೆ, ಮಮತಾ ಅಡಿಕೆ ಸುಲಿಯುವ ಹಾಗೂ ಮದುವೆ ಮಂಟಪಗಳಲ್ಲಿ ಕೆಲಸ ಮಾಡುವ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದರು.
ಮಗನ ಹುಟ್ಟುಹಬ್ಬದ ದಿನವೇ ನಡೆದ ದುರಂತ:
ಫೆಬ್ರವರಿ 4ರಂದು ಮನೆಯಲ್ಲಿ ಮಗನ ಹುಟ್ಟುಹಬ್ಬದ ಸಿದ್ಧತೆಗಳು ನಡೆಯುತ್ತಿದ್ದವು. ಸಂಭ್ರಮದ ವಾತಾವರಣ ಇರಬೇಕಾದ ಮನೆಯಲ್ಲಿ ಸಂಶಯದ ಕಿಚ್ಚು ಹತ್ತಿಕೊಂಡಿತ್ತು. ಮಮತಾ ಸದಾ ಮೊಬೈಲ್‌ನಲ್ಲಿ ಬ್ಯುಸಿಯಾಗಿರುತ್ತಾಳೆ, ಅವಳು ಬೇರೆ ಪುರುಷರೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಸಂಶಯ ರಂಗನಾಥನನ್ನು ಕಾಡುತ್ತಿತ್ತು. ಅದೇ ಸಂಜೆ ಮಮತಾ ಮೊಬೈಲ್ ಬಳಸುತ್ತಿದ್ದುದನ್ನು ಕಂಡ ರಂಗನಾಥ್ ನಿಯಂತ್ರಣ ತಪ್ಪಿ ಜಗಳ ಆರಂಭಿಸಿದ್ದಾನೆ.
ಮಕ್ಕಳ ಮುಂದೆಯೇ ಜಗಳ ವಿಕೋಪಕ್ಕೆ ಹೋಗಿದ್ದು, ಆಕ್ರೋಶಗೊಂಡ ರಂಗನಾಥ್ ಮಮತಾಳನ್ನು ನೆಲಕ್ಕೆ ತಳ್ಳಿ, ವೇಲ್‌ನಿಂದ ಕತ್ತು ಬಿಗಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಪೊಲೀಸರ ಹಾದಿ ತಪ್ಪಿಸಲು ಯತ್ನ:
ಹತ್ಯೆ ಮಾಡಿದ ನಂತರವೂ ಯಾವುದೇ ಪಶ್ಚಾತ್ತಾಪವಿಲ್ಲದೆ ರಾತ್ರಿಯಿಡೀ ಹೆಂಡತಿಯ ಶವ ಮತ್ತು ಮಕ್ಕಳ ಜೊತೆಯೇ ಕಾಲ ಕಳೆದಿದ್ದ ಹಂತಕ, ಮರುದಿನ ಬೆಳಿಗ್ಗೆ ಪೊಲೀಸ್ ಠಾಣೆಗೆ ಹೋಗಿ ನಾಟಕವಾಡಿದ್ದಾನೆ. “ನನ್ನ ಹೆಂಡತಿ ರಾತ್ರಿ ಚೆನ್ನಾಗಿದ್ದಳು, ಆದರೆ ಬೆಳಿಗ್ಗೆ ಎದ್ದೇಳುತ್ತಿಲ್ಲ” ಎಂದು ಪೊಲೀಸರಿಗೆ ಸುಳ್ಳು ಹೇಳಿ ನಂಬಿಸಲು ಪ್ರಯತ್ನಿಸಿದ್ದಾನೆ.
SSLC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಮಾರ್ಚ್ 18 ರಿಂದ ಪರೀಕ್ಷೆ ಆರಂಭ- ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಆದರೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಮಮತಾಳ ಕುತ್ತಿಗೆಯ ಮೇಲಿದ್ದ ಗುರುತುಗಳನ್ನು ಕಂಡು ಸಂಶಯ ಬಂದಿದೆ. ತೀವ್ರ ವಿಚಾರಣೆಗೆ ಒಳಪಡಿಸಿದಾಗ ರಂಗನಾಥ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಅನಾಥರಾದ ಮಕ್ಕಳು:
ತಂದೆಯ ಸಂಶಯ ಹಾಗೂ ತಾಯಿಯ ಹತ್ಯೆಯಿಂದಾಗಿ ಇಬ್ಬರು ಮುಗ್ಧ ಮಕ್ಕಳು ಈಗ ಅನಾಥರಾಗಿದ್ದಾರೆ. ತಾಯಿ ಮಣ್ಣು ಪಾಲಾದರೆ, ತಂದೆ ಜೈಲು ಪಾಲಾಗಿದ್ದಾನೆ. ಮಗನ ಹುಟ್ಟುಹಬ್ಬದಂದೇ ತಾಯಿಯ ಪ್ರಾಣ ಪಕ್ಷಿ ಹಾರಿಹೋಗಿರುವುದು ಸ್ಥಳೀಯರಲ್ಲಿ ತೀವ್ರ ಆಕ್ರೋಶ ಹಾಗೂ ವಿಷಾದಕ್ಕೆ ಕಾರಣವಾಗಿದೆ.



