ಮಂಗಳೂರು : ಅಕ್ರಮ ಮರಳುಗಾರಿಕೆ ಜಾಲ ಬೇಧಿಸಿದ ಪೊಲೀಸರು
Illegal Sand Transport: ನದಿಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಖದೀಮರ ತಂಡವನ್ನು ಹಿಡಿಯುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಸಿಆರ್ಝಡ್ ವ್ಯಾಪ್ತಿಯ ನೇತ್ರಾವತಿ ಗುರುಪುರ ನದಿ ಸಂಗಮದಲ್ಲಿರುವ ಅಳಿವೆ ಬಾಗಿಲು ಪ್ರದೇಶದಲ್ಲಿ ಈ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿತ್ತು. ಸೂಕ್ತ ಮಾಹಿತಿ ಆಧರಿಸಿ ಯಶಸ್ವಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ನದಿಯಿಂದ ಅಕ್ರಮವಾಗಿ ಮರಳನ್ನು ಸಂಗ್ರಹಿಸುತ್ತಿದ್ದ ದುಷ್ಕರ್ಮಿಗಳು ತಡರಾತ್ರಿ ಸಮುದ್ರ ಮಾರ್ಗವಾಗಿ ದೋಣಿ ಮುಖಾಂತರ ಕೇರಳಕ್ಕೆ ಈ ಮರಳನ್ನು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಇಲ್ಲಿ ಮೀನುಗಾರಿಕೆಗೆ ಬರುತ್ತಿದ್ದ ಮೀನುಗಾರರಿಗೆ ಈ ವಿಚಾರ ತಿಳಿದ ಬಳಿಕ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ತಮ್ಮ ಮೊಬೈಲ್ಗಳಲ್ಲಿ ವಿಡಿಯೋ ಮಾಡಿಕೊಂಡಿದ್ದರು ಎನ್ನಲಾಗಿದೆ.
10ಕ್ಕೂ ಅಧಿಕ ಯಾಂತ್ರೀಕೃತ ಬೋಟ್ಗಳನ್ನು ಬಳಕೆ ಮಾಡಿ ರಾಶಿ ರಾಶಿ ಮರಳನ್ನು ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಸಮುದ್ರ ಮಾರ್ಗದ ಮೂಲಕ ನಡೆಯುತ್ತಿದ್ದ ಈ ಮರಳು ಮಾಫಿಯಾ ವಿಚಾರ ಪೊಲೀಸರ ಗಮನಕ್ಕೂ ಬಂದಿದೆ. ರಸ್ತೆ ಮಾರ್ಗದ ಮೂಲಕವೂ ಮರಳು ಸಾಗಾಟ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಮಂಗಳೂರು ಕಮಿಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಸ್ತೆ ಮೂಲಕ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಿದ್ದಾರೆ. ಈ ಸಂಬಂಧ ಸಮಗ್ರ ತನಿಖೆಗೆ ಮುಂದಾಗಿರುವ ಪೊಲೀಸರು ಈ ಅಕ್ರಮದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ?ಎಂಬುದರ ಬಗ್ಗೆ ಆಳವಾದ ತನಿಖೆಗೆ ಇಳಿದಿದ್ದಾರೆ. ಪೊಲೀಸರ ಈ ತನಿಖೆಯಿಂದ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ದುಷ್ಕರ್ಮಿಗಳಿಗೆ ನಡುಕ ಶುರುವಾಗಿದೆ.
ಇದನ್ನೂ ಓದಿ: ಬಂಟ್ವಾಳದ ಮಹಿಳೆಯನ್ನು ಡಿಜಿಟಲ್ ಅರೆಸ್ಟ್ ಮಾಡಿ ₹1.16 ಕೋಟಿ ವಂಚಿಸಿದ ಖದೀಮರು..!



