ನ್ಯಾಯ ಸಿಗುವ ಮುನ್ನ ಮಣಿಪುರದ ಅತ್ಯಾಚಾರ ಸಂತ್ರಸ್ತೆ ಸಾವು: ಎರಡು ವರ್ಷಗಳ ಬಳಿಕ ಕಣ್ಮುಚ್ಚಿದ ಕುಕಿ ಯುವತಿ
Manipur Kuki Woman Dies: ಇಂಫಾಲ: ಮಣಿಪುರದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಭೀಕರ ಜನಾಂಗೀಯ ಸಂಘರ್ಷದ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಕುಕಿ ಸಮುದಾಯದ 22 ವರ್ಷದ ಯುವತಿಯೊಬ್ಬರು, ಚಿಕಿತ್ಸೆ ಫಲಿಸದೆ ಶನಿವಾರ (ಜನವರಿ 10, 2026) ಕೊನೆಯುಸಿರೆಳೆದಿದ್ದಾರೆ. ಆಕೆ ಅನುಭವಿಸಿದ ದೈಹಿಕ ಗಾಯಗಳು ಮತ್ತು ಮಾನಸಿಕ ಆಘಾತವೇ ಸಾವಿಗೆ ಪ್ರಮುಖ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿನ್ನೆಲೆ:
ಮೇ 2023 ರಲ್ಲಿ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ, ಇಂಫಾಲದ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈ ಯುವತಿಯನ್ನು ಗುಂಪೊಂದು ಅಪಹರಿಸಿತ್ತು. ಸಶಸ್ತ್ರಧಾರಿಗಳು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಹೇಗೋ ಅಲ್ಲಿಂದ ತಪ್ಪಿಸಿಕೊಂಡಿದ್ದ ಯುವತಿ, ತರಕಾರಿ ಆಟೋವೊಂದರಲ್ಲಿ ಅಡಗಿ ಕುಳಿತು ಪ್ರಾಣ ಉಳಿಸಿಕೊಂಡಿದ್ದರು.
ನ್ಯಾಯಕ್ಕಾಗಿ ಕಾದಿದ್ದ ಸಂತ್ರಸ್ತೆ:
ಜುಲೈ 2023 ರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಂತ್ರಸ್ತೆ, “ನನ್ನನ್ನು ಬಿಳಿ ಬಣ್ಣದ ಕಾರಿನಲ್ಲಿ ಅಪಹರಿಸಿ, ರಾತ್ರಿಯಿಡೀ ಚಿತ್ರಹಿಂಸೆ ನೀಡಲಾಯಿತು. ಕುಡಿಯಲು ನೀರನ್ನೂ ನೀಡದೆ ಕಾಮಪಿಶಾಚಿಗಳು ಅಟ್ಟಹಾಸ ಮೆರೆದಿದ್ದರು” ಎಂದು ಕಣ್ಣೀರಿಟ್ಟಿದ್ದರು. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದ ಕಾರಣ ಘಟನೆ ನಡೆದ ಎರಡು ತಿಂಗಳ ನಂತರವಷ್ಟೇ ಆಕೆಗೆ ಪೊಲೀಸ್ ದೂರು ದಾಖಲಿಸಲು ಸಾಧ್ಯವಾಗಿತ್ತು.
ಅಟಲ್ ಪೆನ್ಷನ್ ಯೋಜನೆ: ₹1,000 ರಿಂದ ₹5,000 ದವರೆಗೆ ಪೆನ್ಶನ್ ಬರಲು ಹೀಗೆ ಮಾಡಿ
ಚಿಕಿತ್ಸೆ ಫಲಿಸದ ನೋವು:
ಇಂಡಿಜಿನಸ್ ಟ್ರೈಬಲ್ ಲೀಡರ್ಸ್ ಫೋರಂ (ITLF) ಈ ಬಗ್ಗೆ ಮಾಹಿತಿ ನೀಡಿ, “ಗುವಾಹಟಿಯ ಆಸ್ಪತ್ರೆಯಲ್ಲಿ ಆಕೆಗೆ ದೀರ್ಘಕಾಲದವರೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅತ್ಯಾಚಾರದ ವೇಳೆ ಉಂಟಾದ ತೀವ್ರತರವಾದ ಆಂತರಿಕ ಗಾಯಗಳು ಮತ್ತು ಗರ್ಭಕೋಶದ ಸೋಂಕಿನಿಂದ ಆಕೆ ಬಳಲುತ್ತಿದ್ದರು. ಕೊನೆಗೂ ನ್ಯಾಯಕ್ಕಾಗಿ ಕಾಯುತ್ತಲೇ ಆಕೆ ಮೃತಪಟ್ಟಿದ್ದಾರೆ” ಎಂದು ತಿಳಿಸಿದೆ.
ಕುಟುಂಬದ ಆಕ್ರೋಶ:
“ನನ್ನ ಮಗಳು ಅತ್ಯಂತ ಚಟುವಟಿಕೆಯಿಂದ ಕೂಡಿದ್ದ ಹುಡುಗಿ. ಆದರೆ ಆ ಘಟನೆಯ ನಂತರ ಆಕೆಯ ನಗು ಮಾಯವಾಗಿತ್ತು. ಆಕೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಸಾಯುವ ಮುನ್ನ ಆಕೆಗೆ ನ್ಯಾಯ ಸಿಗಲಿಲ್ಲ ಎನ್ನುವುದೇ ನಮಗೆ ದೊಡ್ಡ ಸಂಕಟ,” ಎಂದು ಮೃತಳ ತಾಯಿ ಹೇಳಿದ್ದಾರೆ. ಮಣಿಪುರದಲ್ಲಿ ಇನ್ನೂ ಕಿಚ್ಚು ಆರಿಲ್ಲದ ಈ ಸಂದರ್ಭದಲ್ಲಿ, ಈ ಸಾವು ಕುಕಿ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂತ್ರಸ್ತೆಯ ಗೌರವಾರ್ಥವಾಗಿ ಚುರಾಚಂದಪುರದಲ್ಲಿ ಕ್ಯಾಂಡಲ್ ಲೈಟ್ ಮೆರವಣಿಗೆಯನ್ನು ಆಯೋಜಿಸಲಾಗಿದೆ.



