Accused remanded in judicial custody : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ : ಆರೋಪಿಗಳಿಗೆ ಆ.11ರವರೆಗೆ ನ್ಯಾಯಾಂಗ ಬಂಧನ

ದಕ್ಷಿಣ ಕನ್ನಡ : Accused remanded in judicial custody : ದಕ್ಷಿಣ ಕನ್ನಡ : ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿರುವ ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಇಂದು ಆರೋಪಿಗಳಾದ ಮೊಹಮ್ಮದ್​ ಶಫೀಕ್​ ಹಾಗೂ ಜಾಕೀರ್​ನನ್ನು ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಎಸಿಜೆಎಂ ಕೋರ್ಟ್​ಗೆ ಹಾಜರುಪಡಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳನ್ನು ಆಗಸ್ಟ್​ 11ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಿ ಆದೇಶ ಹೊರಡಿಸಿದೆ.


ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸಖತ್​ ಅಲರ್ಟ್​ ಆಗಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ಇಲಾಖೆ ಐದು ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿದೆ. ಎಸ್​ಡಿಪಿಐ ಕಾರ್ಯಕರ್ತರು ಸೇರಿದಂತೆ ಒಟ್ಟು 27 ಮಂದಿಯನ್ನು ಪೊಲೀಸರು ಈವರೆಗೆ ವಶಕ್ಕೆ ಪಡೆದುಕೊಂಡಿದ್ದಾರೆ. ಇವರಲ್ಲಿ ಇಬ್ಬರ ಮೇಲೆ ಗುಮಾನಿ ಹೆಚ್ಚಾದ ಹಿನ್ನೆಲೆಯಲ್ಲಿ ಮೊಹಮ್ಮದ್​ ಶಫೀಕ್​ ಹಾಗೂ ಜಾಕೀರ್​ನನ್ನು ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದರು.


ವಿಪರ್ಯಾಸ ಅಂದರೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮೊಹಮ್ಮದ್​ ಶಫೀಕ್​ ತಂದೆ ಇಬ್ರಾಹಿಂ ಕೊಲೆಯಾದ ಪ್ರವೀಣ್​ ನೆಟ್ಟಾರು ಕೋಳಿ ಅಂಗಡಿಯಲ್ಲಿ ಮೂರು ತಿಂಗಳುಗಳ ಕಾಲ ಕೆಲಸ ಮಾಡಿದ್ದರು ಎನ್ನಲಾಗಿದೆ. ಟೆಲಿಗ್ರಾಂನಲ್ಲಿ ವಿದೇಶಿ ವ್ಯಕ್ತಿಗಳ ಜೊತೆ ಸಂಪರ್ಕ ಸಾಧಿಸಿದ್ದ ಶಫೀಕ್​​ ಪ್ರವೀಣ್​ ನೆಟ್ಟಾರು ಹತ್ಯೆಗೆ ಮಾಸ್ಟರ್​ ಪ್ಲಾನ್​ ರೂಪಿಸಿದ್ದಾನೆ ಎಂಬ ಗುಮಾನಿ ಇದೆ.


ಇನ್ನು ಮತ್ತೊಬ್ಬ ಬಂಧಿತ ಆರೋಪಿ ಜಾಕೀರ್​​ ಕೊಲೆಯಾಗುವ ದಿನದಂದು ಪ್ರವೀಣ್​ ನೆಟ್ಟಾರು ಚಲನವಲನಗಳ ಮೇಲೆ ಗಮನವಿಟ್ಟಿದ್ದ ಎನ್ನಲಾಗಿದೆ. ಪ್ರವೀಣ್​ ಕೊಲೆಯಾಗುವ ಕೆಲವೇ ನಿಮಿಷಗಳ ಮೂಲಕ ಚಿಕನ್​ ಅಂಗಡಿಯ ಆಸುಪಾಸಿನಲ್ಲಿ ಕಾಣಿಸಿಕೊಂಡಿದ್ದ ಜಾಕೀರ್​​ ಪ್ರವೀಣ್​ ಚಲನವಲನಗಳ ಮಾಹಿತಿಯನ್ನು ಹಂತಕರಿಗೆ ನೀಡಿರುವ ಸಾಧ್ಯತೆಯಿದೆ. ಜಾಕೀರ್​​ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.


ಬಂಧನಕ್ಕೊಳಗಾಗಿರುವ ಜಾಕೀರ್​ ಹಾಗೂ ಶಫೀಕ್​ ಇಬ್ಬರೂ ನೇರವಾಗಿ ಪ್ರವೀಣ್​ ಹತ್ಯೆಯಲ್ಲಿ ಭಾಗಿಯಾದವರಲ್ಲ. ಇನ್ನೂ ಈ ಕೊಲೆಯನ್ನು ಮಾಡಿದ್ದು ಯಾರು ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಆರೋಪಿಗಳು ಕೇರಳದ ನಂಬರ್​ ಪ್ಲೇಟ್​ ಹೊಂದಿದ್ದ ಬೈಕ್​ನಲ್ಲಿ ಬಂದಿದ್ದರು ಎನ್ನಲಾಗಿದ್ದು ಹೀಗಾಗಿ ಮಂಗಳೂರು ಪೊಲೀಸರು ಕೇರಳಕ್ಕೂ ತೆರಳಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನು ಓದಿ : B.Y Vijayendra : ಮೃತ ಪ್ರವೀಣ್​ ನೆಟ್ಟಾರು ನಿವಾಸಕ್ಕೆ ಬಿ.ವೈ ವಿಜಯೇಂದ್ರ ಭೇಟಿ : ಕುಟುಂಬಸ್ಥರಿಗೆ ಸಾಂತ್ವನ

ಇದನ್ನೂ ಓದಿ : CT Ravi : ಪಿಎಫ್​​ಐ ಸಂಘಟನೆ ಬ್ಯಾನ್​ ಮಾಡ್ತೇವೆ, ಯಾರೂ ಸಮೂಹ ಸನ್ನಿಗೆ ಒಳಗಾಗದಿರಿ : ಕಾರ್ಯಕರ್ತರಲ್ಲಿ ಸಿ.ಟಿ ರವಿ ಮನವಿ

Praveen Nettaru murder case: Accused remanded in judicial custody till August 11

Comments are closed.