ದುರ್ಗಾಂಬಾ ಬಸ್ ನಿರ್ಲಕ್ಷ್ಯಕ್ಕೆ ಬಲಿಯಾದನಾ ಯುವಕ ? ಕಣ್ಣೀರು ತರಿಸುತ್ತಿದೆ ನೊಂದ ತಾಯಿಯ ನೋವಿನ ಪತ್ರ

0

ಉಡುಪಿ : ಆತ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ. ತನ್ನೂರಿಗೆ ಬಸ್ಸಿನಲ್ಲಿ ಹೊರಟಿದ್ದ ಆತನಿಗೆ ಮಾರ್ಗ ಮಧ್ಯದಲ್ಲಿ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಬಸ್ ಸಿಬ್ಬಂಧಿಗಳಿಗೆ ವಿಷಯ ತಿಳಿಸಿದ್ದ. ಆದರೆ ಬಸ್ ಸಿಬ್ಬಂಧಿಗಳು ತೋರಿದ ನಿರ್ಲಕ್ಷ್ಯಕ್ಕೆ ಯುವಕ ಪ್ರಾಣಪಕ್ಷಿಯೇ ಹಾರಿ ಹೋಗಿದೆ. ಮಗನ ಸಾವಿನ ಕುರಿತು ತಾಯಿ ಜಿಲ್ಲಾಧಿಕಾರಿಗಳಿಗೆ ಬರೆದಿರೋ ಕಣ್ಣೀರ ಪತ್ರ ಇದೀಗ ಎಲ್ಲರ ಕಣ್ಣಲ್ಲೂ ಕಂಬನಿ ಮಿಡಿಯುವಂತೆ ಮಾಡಿದೆ.

ಮುದ್ದು ಮುದ್ದಾಗಿರೋ ಇತನ ಹೆಸರು ಸುಹಾಸ್ ಎಸ್.ಮಯ್ಯ. 22 ವರ್ಷದ ಸುಹಾಸ್ ಉಡುಪಿ ಜಿಲ್ಲೆಯ ಕುಂದಾಪುರದ ನಿವಾಸಿ. ಬೆಂಗಳೂರಿನ ರಾಜನುಕುಂಟೆಯಲ್ಲಿರೋ ಪ್ರೆಸಿಡೆನ್ಸ್ ಯೂನಿರ್ವಸಿಟಿಯಲ್ಲಿ 4ನೇ ವರ್ಷದ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ. ಸುಹಾಸ್ ಮಯ್ಯ, ಮಾರ್ಚ್ 7ರಂದು ಬೆಂಗಳೂರಿನಿಂದ ತನ್ನೂರಾಗಿರೋ ಕುಂದಾಪುರಕ್ಕೆ ದುರ್ಗಾಂಬಾ ಬಸ್ಸಿನಲ್ಲಿ ಹೊರಟಿದ್ದ. ರಾತ್ರಿ 12.20ರ ಸುಮಾರಿಗೆ ಮಾರ್ಗಮಧ್ಯದಲ್ಲಿ ಬಸ್ ಹೋಟೆಲ್ ಮುಂಭಾಗದಲ್ಲಿ ಬಸ್ ನಿಂತಿತ್ತು. ಹೋಟೆಲೊಂದರಿಂದ ಸುಹಾಸ್ ಚಹಾ ಕುಡಿದು ಮಿನರಲ್ ವಾಟರ್ ಬಾಟಲಿ ತೆಗೆದುಕೊಂಡು ಬಸ್ಸನ್ನೇರಿದ್ದ. ಅಲ್ಲಿಯವರೆಗೂ ಚೆನ್ನಾಗಿಯೇ ಇದ್ದ ಸುಹಾಸ್ ಗೆ ಬಂಟ್ವಾಳ ಬಳಿ ಬರುತ್ತಿದ್ದಂತೆಯೇ ಮಾರ್ಗಮಧ್ಯದಲ್ಲಿ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಬಸ್ಸಿನ ನಿರ್ವಾಹಕನ ಬಳಿ ತನಗೆ ಎದೆನೋವು ಕಾಣಿಸಿಕೊಂಡಿದೆ ಸಹಾಯ ಮಾಡಿ ಅಂತಾ ಸುಹಾಸ್ ಎರಡೆರಡು ಬಾರಿ ಮನವಿ ಮಾಡಿದ್ದ. ಆದರೆ ಬಸ್ಸಿನ ನಿರ್ವಾಹಕರು ಮಾತ್ರ ಸುಹಾಸ್ ನೆರವಿಗೆ ದಾವಿಸಲೇ ಇಲ್ಲಾ.

ಬಂಟ್ವಾಳದಿಂದ ಮಂಗಳೂರಿಗೆ ಬರೋ ಮಾರ್ಗಮಧ್ಯದಲ್ಲಿಯೇ ಹಲವು ಆಸ್ಪತ್ರೆಗಳಿದ್ದವು. ಯಾವುದಾದರೂ ಆಸ್ಪತ್ರೆಗೆ ಬಸ್ಸಿನ ಸಿಬ್ಬಂಧಿಗಳು ದಾಖಲು ಮಾಡಬಹುದಿತ್ತು. ಇತ್ತ ಸುಹಾಸ್ ನಿಗೆ ತಾಯಿ ಕರೆ ಮಾಡಿದ್ದಾರೆ. ಆದರೆ ಸುಹಾಸ್ ಕರೆಯನ್ನು ಸ್ವೀಕರಿಸಲಿಲ್ಲ. ಎಷ್ಟು ಬಾರಿ ಕರೆ ಮಾಡಿದ್ರೂ ಮೊಬೈಲ್ ರಿಸೀವ್ ಆಗದೇ ಇದ್ದಾಗ ತಾಯಿ ಗಾಬರಿಗೊಂಡಿದ್ದರು. ಕೂಡಲೇ ಸುಹಾಸ್ ಟಿಕೆಟ್ ಬುಕ್ ಮಾಡಿದ್ದ ಆಫೀಸ್ ಗೆ ಬೆಳಗ್ಗೆ 6.30ಕ್ಕೆ ಕರೆ ಮಾಡಿದ್ರೆ ಸರಿಯಾದ ರೆಸ್ಪಾನ್ಸ್ ಸಿಗಲಿಲ್ಲ. ಅಲ್ಲದೇ ಬಸ್ ಮಾರ್ಗ ಮಧ್ಯದಲ್ಲಿದೆ ಅಂತಷ್ಟೇ ಹೇಳಿ ಬುಕ್ಕಿಂಗ್ ಆಫೀಸ್ ಸಿಬ್ಬಂಧಿ ಕರೆ ಕಟ್ ಮಾಡಿದ್ರು. ಇಷ್ಟಕ್ಕೆ ಸುಮ್ಮನಾಗದೆ ಬುಕ್ಕಿಂಗ್ ಆಫೀಸ್ ಗೆ ಮರಳಿ ಕರೆ ಮಾಡಿ, ಬಸ್ಸಿನ ನಿರ್ವಾಹಕರ ನಂಬರ್ ಆದ್ರೂ ಕೊಡಿ ಅಂತಾ ಗೋಗರೆದಿದ್ರು. ನಿರ್ವಾಹಕರ ಮೊಬೈಲ್ ಸಂಖ್ಯೆಯನ್ನೂ ಕೊಡಲಿಲ್ಲ. ಆದರೆ ಬೆಳಗ್ಗೆ 6.50ರ ಸುಮಾರಿಗೆ ಕಾಲ್ ಮಾಡಿದ್ದ ಬುಕ್ಕಿಂಗ್ ಆಫೀಸ್ ಸಿಬ್ಬಂಧಿ ಬಸ್ ಇದೀಗ ಕೋಟೇಶ್ವರ ಬಳಿಯಲ್ಲಿದೆ ಅಂತಾ ಹೇಳಿದ್ದಾರೆ.

ಮಗ ಇನ್ನೇನು ಕುಂದಾಪುರದಲ್ಲಿ ಇಳಿಯುತ್ತಾನೆ, ಮನೆಗೆ ಬರ್ತಾನೆ ಅನ್ನೋ ನಿರೀಕ್ಷೆಯಲ್ಲಿದ್ದ ತಾಯಿಗೆ ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿಯಲ್ಲಿ ಮಗ ಬಸ್ಸಿನಲ್ಲಿ ಸಿಕ್ಕಿದ್ದು ಶವವಾಗಿ. ಮಗನ ದುಸ್ಥಿತಿಯನ್ನು ಕಂಡ ತಾಯಿ ಕಣ್ಣೀರು ಸುರಿಸಿದ್ರೂ ಬಸ್ ಸಿಬ್ಬಂಧಿಗಳಿಗೆ ತಮ್ಮ ತಪ್ಪಿನ ಅರಿವಾಗಲೇ ಇಲ್ಲಾ. ಕೊನೆಗೆ ಸಾರಿ ಅಂತಾ ಹೇಳಿ ಮಗನ ಶವವನ್ನು ಹೆತ್ತವರಿಗೆ ಒಪ್ಪಿಸಿದ್ರು. ಒಂದೊಮ್ಮೆ ಸುಹಾಸ್ ತನಗೆ ಎದೆನೋವಿದೆ ಅಂತಾ ಹೇಳಿದಾಗ ಬಸ್ ಸಿಬ್ಬಂಧಿ ಕೊಂಚ ಮಾನವೀಯತೆಯೆ ನೆಲೆಯಲ್ಲಿ ಯೋಚಿಸಿ ಆಸ್ಪತ್ರೆಗೆ ದಾಖಲಿಸಿದ್ದರೆ ಸುಹಾಸ್ ಬದುಕಿ ಉಳಿಯುತ್ತಿದ್ದ. ಆದರೆ ಖಾಸಗಿ ಬಸ್ಸಿನವರ ನಿರ್ಲಕ್ಷ್ಯ ಇದೀಗ ಪ್ರತಿಭಾವಂತನೋರ್ವನನ್ನು ಬಲಿ ಪಡೆದಿದೆ. ಮಗನನ್ನು ಕಳೆದುಕೊಂಡಿರೋ ಹೆತ್ತ ತಾಯಿ ಅಸಹಾಯಕವಾಗಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಕಣ್ಣೀರ ಪತ್ರ ಬರೆದಿದ್ದಾರೆ.

ತಾಯಿಯ ಕಣ್ಣೀರ ಪತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಂಬಿನಿ ಮಿಡಿಯುತ್ತಿದ್ದಾರೆ.ಇನ್ನೊಂದೆಡೆ ಜಿಲ್ಲಾಧಿಕಾರಿಗಳೂ ಕೂಡ ಪತ್ರಕ್ಕೆ ಸ್ಪಂಧಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ದೂರು ಕೊಟ್ರೆ ಕಾನೂನು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ಕರಾವಳಿ ಭಾಗದಲ್ಲಿ ಖಾಸಗಿ ಬಸ್ ಗಳ ಲಾಭಿ ಜೋರಾಗಿದೆ. ನಿತ್ಯವೂ ಬೆಂಗಳೂರು -ಮಂಗಳೂರು- ಉಡುಪಿ -ಕುಂದಾಪುರ ಮಾರ್ಗವಾಗಿ ನೂರಾರು ಖಾಸಗಿ ಬಸ್ ಗಳು ಸಂಚರಿಸುತ್ತಿವೆ. ಟಿಕೆಟ್ ಗೆ ಸಾವಿರಾರು ರೂಪಾಯಿ ಹಣ ಪಡೆಯೋ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಹೆತ್ತ ತಾಯಿ ಅಷ್ಟು ಬಾರಿ ಕರೆ ಮಾಡಿದ್ರೂ ಮಾನವೀಯತೆಯನ್ನೇ ಮರೆತ ಬಸ್ಸಿನ ಸಿಬ್ಬಂಧಿ, ಟಿಕೆಟ್ ಬುಕ್ಕಿಂಗ್ ಸಿಬ್ಬಂಧಿ ಹಾಗೂ ಬಸ್ಸಿನ ಮಾಲೀಕರ ವಿರುದ್ದ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಪ್ರಯಾಣಿಕರ ಜೀವದ ಜೊತೆಗೆ ಚೆಲ್ಲಾಟವಾಡೋ ಖಾಸಗಿ ಬಸ್ ಮಾಲೀಕರಿಗೆ ಬಿಸಿ ಮುಟ್ಟಿಸದೇ ಇದ್ರೆ ಮುಂದೊಂದು ದಿನ ಬಾರೀ ಅನಾಹುತವೇ ಸಂಭವಿಸೋ ಸಾಧ್ಯತೆಯಿದೆ. ಸುಹಾಸ್ ಸಾವಿನ ಪ್ರಕರಣದ ಕುರಿತು ತನಿಖೆ ನಡೆಯಬೇಕಿದೆ. ಈ ನಿಟ್ಟಿನಲ್ಲಿ ದಕ್ಷ, ಪ್ರಾಮಾಣಿಕ ಜಿಲ್ಲಾಧಿಕಾರಿಗಳಾಗಿರೋ ಜಗದೀಶ್ ಅವರು ಸುಹಾಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದಿಟ್ಟ ಕ್ರಮವನ್ನು ಕೈಗೊಳ್ಳುವಂತೆ ಜನ ಮನವಿ ಮಾಡಿದ್ದಾರೆ.

Leave A Reply

Your email address will not be published.