ಜವಾಬ್ದಾರಿ ಮರೆತ ಆಡಳಿತ ಪಕ್ಷ, ಬೇಜವಾಬ್ದಾರಿಯಾದ ವಿರೋಧ ಪಕ್ಷ. ಇಬ್ಬರ ನಡುವೆ ‘ಹೈರಾಣಾದ್ರು ಅಧಿಕಾರಿಗಳು’

0

ಮಂಗಳೂರು : ಕರಾವಳಿ ಜಿಲ್ಲೆಗಳನ್ನು ಕೊರೊನಾ ತತ್ತರಿಸುವಂತೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕೊರೊನಾ ಹೆಚ್ಚುತ್ತಿದ್ದರೂ, ಜನಪ್ರತಿನಿಧಿಗಳ ವರ್ತನೆ ಸಾರ್ವಜನಿಕರಿಗೆ ಬೇಸರ ತರಿಸಿದೆ. ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕೆ ಆಡಳಿತ ಯಂತ್ರವನ್ನು ಬಳಕೆ ಮಾಡುತ್ತಿದ್ರೆ, ಪ್ರತಿಪಕ್ಷ ಕಾಂಗ್ರೆಸ್ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದಲೂ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಾಗಲೇ ಕೊರೊನಾ ಸೋಂಕಿಗೆ 5 ಮಂದಿ ಬಲಿಯಾಗಿದ್ದು, 40ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ವ್ಯಾಪಿಸಿದೆ. ಮಹಾಮಾರಿಯ ನಿಯಂತ್ರಣಕ್ಕೆ ಶ್ರಮಿಸಬೇಕಾಗಿದ್ದ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ. ಅದ್ರಲ್ಲೂ ಆಡಳಿತ ಪಕ್ಷ ಬಿಜೆಪಿ ನಾಯಕರು ಅಧಿಕಾರಿಗಳಿಗೆ ಒತ್ತಡ ಹಾಕಿ ತಮ್ಮ ಕೆಲಸ ಮಾತ್ರ ಮಾಡಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.

ಈ ನಡುವೆ ವಿರೋಧ ಪಕ್ಷ ಕಾಂಗ್ರೆಸ್ ಕೂಡ ಅಷ್ಟೇ ಬೇಜವಾಬ್ದಾರಿಯಿಂದ ವರ್ತಿಸಿದೆ ಎನ್ನುತ್ತಾರೆ ಜಿಲ್ಲೆಯ ನಾಗರೀಕರು. ಕೊರೊನಾ ನಿಯಂತ್ರಣ ಮಾಡುವಲ್ಲಿ ಆಡಳಿತ ಪಕ್ಷ ಎಡವಿದೆ. ಜಿಲ್ಲೆಯ ಜನರ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡದೆ ಕಾಂಗ್ರೆಸ್ ಬೇಜವಾಬ್ದಾರಿ ಮೆರೆದಿದೆ. ಜಿಲ್ಲೆಯ ವಿರೋಧ ಪಕ್ಷದ ಏಕೈಕ ಶಾಸಕ ಯು.ಟಿ.ಖಾದರ್ ಮುಖ್ಯ ವಿಷಯಗಳನ್ನು ಬಿಟ್ಟು ಪ್ರಚಾರ ತಂತ್ರದ ವಿಷಯಗಳಿಗೆ ಒತ್ತು ನೀಡಿದ್ದಾರೆನ್ನುವ ಆರೋಪವೂ ಇದೆ.

ಮಾತ್ರವಲ್ಲ ಕೊರೊನಾ ಸ್ಪ್ರೆಡ್ಡರ್ ಆಗಿರುವ ಫಸ್ಟ್ ನ್ಯೂರೋ ಆಸ್ಪತ್ರೆಯ ವಿಚಾರವಾಗಿ ತುಟಿಬಿಚ್ಚದ ವಿರೋಧ ಪಕ್ಷದ ಶಾಸಕ ಯು.ಟಿ.ಖಾದರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ವಿಷಯಗಳಿಗೆ ಮಾತ್ರ ಒತ್ತು ನೀಡುತ್ತಿದ್ದಾರೆ. ಇನ್ನು ವಿದೇಶಿಗರನ್ನು ಕರೆತರುವಲ್ಲಿಯೂ ಅಧಿಕಾರಿಗಳಲ್ಲಿ ಗೊಂದಲ ಮೂಡಿಸುವಲ್ಲಿ ಶಾಸಕರ ನಡೆ ಸರಿಯಾಗಿರಲಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಇನ್ನು ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆಯೂ ಜನತೆ ಮುನಿಸಿಕೊಂಡಿದ್ದಾರೆ. ಪ್ರಮುಖವಾಗಿ ಕೊರೊನಾ ನಿಯಂತ್ರಿಸಬೇಕಾದ ಜನಪ್ರತಿನಿಧಗಳು ಅಧಿಕಾರಿಗಳನ್ನ ತಮ್ಮ ಕೆಲಸ ಮಾಡಲು ಉಪಯೋಗಿಸಿದ್ದಾರೆಯೇ ಹೊರತು ಆಡಳಿತ ಯಂತ್ರದ ಬಗ್ಗೆ ಗಮನಹರಿಸದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರೋ ಕೋಟ ಶ್ರೀನಿವಾಸ ಪೂಜಾರಿ ಅವರು ಆಡಳಿತ ಯಂತ್ರವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಉಸ್ತುವಾರಿ ಸಚಿವರು ಶಾಸಕರು, ಸಂಸದರ ತಾಳಕ್ಕೆ ಕುಣಿಯುತ್ತಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ದಕ್ಷ ಪ್ರಮಾಣಿಕ ಅಧಿಕಾರಿಗಳಿದ್ದಾರೆ. ಕೊರೊನಾ ನಿಯಂತ್ರಿಸುವ ತಾಕತ್ತು ಅಧಿಕಾರಿಗಳಿಗಿದೆ. ಆದರೆ ಜನಪ್ರತಿನಿಧಿಗಳು ಅಧಿಕಾರಿಗಳ ಕೈಕಟ್ಟಿ ಕೂರಿಸಿದ್ದಾರೆನ್ನುವ ಆರೋಪವೂ ಇದೆ. ಒಟ್ಟಿನಲ್ಲಿ ಜನಪ್ರತಿನಿಧಿಗಳ ಬೇಜಾಬ್ದಾರಿಯಿಂದ ಅಧಿಕಾರಿಗಳು ಮಾತ್ರ ಹೈರಾಣಾಗಿರೋದು ಮಾತ್ರ ಸುಳ್ಳಲ್ಲ.

Leave A Reply

Your email address will not be published.