ಮಾಸ್ಕ್ ಹಾಕದಿದ್ದಕ್ಕೆ ದಂಡಕಟ್ಟಿ ರಶೀದಿ ಕೇಳಿದ್ದೇ ತಪ್ಪಾಯ್ತು : ಮಾಜಿ ಸೈನಿಕನನ್ನು ಥಳಿಸಿದ ಪೊಲೀಸರು

ದಾವಣಗೆರೆ : ಅವರು 22 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.‌ ಪತ್ನಿಯ ಜೊತೆಗೆ ಬೈಕಲ್ಲಿ ಬರುವಾಗ ಮಾಸ್ಕ್ ಧರಿಸಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ಅಡ್ಡಗಟ್ಟಿ ಫೈನ್ ಹಾಕಿದ್ದಾರೆ. ಆದರೆ ರಶೀದಿ ನೀಡುವಂತೆ ಕೇಳಿದ ಮಾಜಿ ಸೈನಿಕನಿಗೆ ಪೊಲೀಸಸರು ಹಲ್ಲೆ ನಡೆಸಿದ್ದಾರೆ‌.

ದಾವಣಗೆರೆ ನಿವಾಸಿಯಾಗಿರುವ ಬಿ.ಎಸ್‌.ವೀರಪ್ಪ ಎಂಬವರೇ ಪೊಲೀಸರಿಂದ ಹಲ್ಲೆಗೆ ಒಳಗಾದ ಮಾಜಿ ಸೈನಿಕರು 1996 ರಿಂದ 2018ರವರೆಗೆ ಬರೋಬ್ಬರಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.

ಆನಗೋಡು ಬಳಿ ಪತ್ನಿ ಜೊತೆ ಬೈಕ್​ನಲ್ಲಿ ಬರುವಾಗ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ನಿಂಗನಗೌಡ ಮತ್ತು ನಾಲ್ವರು ಕಾನ್ ಸ್ಟೇಬಲ್​ಗಳು ಗಸ್ತಿನಲ್ಲಿದ್ದರು. ಈ ವೇಳೆ ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ತಡೆದು ಫೈನ್ ಹಾಕಿದರು. ಇದಾದ ಬಳಿಕ ರಶೀದಿ ನೀಡುವಂತೆ ಕೇಳಿದ್ದಕ್ಕೆ ಕೋಪಗೊಂಡ ಪೊಲೀಸ್ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ತಾನು ನಿವೃತ್ತ ಸೈನಿಕ ಎಂದು ಹೇಳಿದರೂ ಕೇಳದೆ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆಂದು ನಿವೃತ್ತ ಸೈನಿಕ ಬಿ.ಎಸ್.ವೀರಪ್ಪ ಆರೋಪಿಸಿದ್ದಾರೆ. ಸದ್ಯ‌ ವೀರಪ್ಪ ಅವರನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ‌ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

Comments are closed.