ಸೇಲಂ : ಆಕೆ ತನ್ನ ಮದುವೆಗಾಗಿ 300 ಕಿ.ಮೀ. ದೂರಕ್ಕೆ ಪ್ರಯಾಣಿಸಿದ್ದಳು. ತನ್ನೂರು ತಲುಪುತ್ತಿದ್ದಂತೆಯೇ ವಧುವಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕ್ವಾರಂಟೈನ್ ಗೆ ಕಳುಹಿಸಬೇಕಾ ಇಲ್ಲಾ ಮದುವೆ ಮಾಡಿಸಬೇಕಾ ಅನ್ನೋ ಗೊಂದಲ ಉಂಟಾಗಿತ್ತು. ಆದ್ರೆ ಆತಂಕದ ನಡುವಲ್ಲೇ ತಮಿಳುನಾಡಿ ಸೇಲಂ ನಲ್ಲಿ ಕೊರೊನಾ ಸೋಂಕಿತಳ ವಿವಾಹ ಮಹೋತ್ಸವ ನಡೆದಿದೆ.

ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಕೆಗೆ ಹಲವು ತಿಂಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ತನ್ನೂರು ಸೇರೋದಕ್ಕೆ ಸಾಧ್ಯವಾಗಿರಲಿಲ್ಲ. ಲಾಕ್ ಡೌನ್ ಸಡಿಲವಾಗುತ್ತಲೇ ವಧು 300 ಕಿ.ಮೀ. ಪ್ರಯಾಣ ಬೆಳೆಸಿ ಮೂರು ಜಿಲ್ಲೆಗಳನ್ನು ದಾಟಿಕೊಂಡು ತನ್ನೂರು ಸೇರಿದ್ದಾಳೆ.

ಆದರೆ ಊರಿಗೆ ತೆರಳುತ್ತಿದ್ದಂತೆಯೇ ಸರಕಾರದ ಮಾರ್ಗಸೂಚಿಯಂತೆ ಅಧಿಕಾರಿಗಳು ಆಕೆಯ ಗಂಟಲು ದ್ರವದ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಪರೀಕ್ಷಾ ವರದಿ ವಧು ಹಾಗೂ ಪೋಷಕರಿಗೆ ಆತಂಕವನ್ನು ತಂದೊಡ್ಡಿತ್ತು. ವಧುವಿಗೆ ಕೊರೊನಾ ಸೋಂಕು ತಗುಲಿರುವ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದರು.

ಕೊರೊನಾ ಸೋಂಕು ತಗುಲಿದ್ದರು ಕೂಡ ವಧುವಿಗೆ ಯಾವುದೇ ರೀತಿಯಲ್ಲಿಯೂ ರೋಗ ಲಕ್ಷಣಗಳು ಕಂಡುಬಂದಿರಲಿಲ್ಲ. ಹೀಗಾಗಿ ಪೋಷಕರು ಮದುವೆ ಮಾಡುಸೋದಕ್ಕೆ ಅನುಮತಿ ನೀಡಲು ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು. ಆರೋಗ್ಯಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಹಲವು ಷರತ್ತುಗಳಿಗೆ ಒಳಪಟ್ಟು ಮದುವೆ ಮಾಡಿಸೋದಕ್ಕೆ ಅನುಮತಿಯನ್ನು ನೀಡಿದ್ದರು.

ಗಂಗವಳ್ಳಿಯ ವರನ ಮನೆಯಲ್ಲಿ ಸರಳವಾಗಿ ಮದುವೆ ಸಮಾರಂಭವನ್ನು ನೆರವೇರಿಸಲಾಯಿತು. ಮದುವೆ ಮುಗಿಯುತ್ತಿದ್ದಂತೆಯೇ ವಧು, ವರ ಹಾಗೂ ಮದುವೆಯಲ್ಲಿ ಪಾಲ್ಗೊಂಡಿರುವ 28 ಆಪ್ತ ಸಂಬಂಧಿಕರನ್ನು ಕ್ವಾರಂಟೈನ್ ಒಳಪಡಿಸಲಾಗಿದೆ. ಕಠಿಣ ಸಾಮಾಜಿಕ ಅಂತರ ಶಿಸ್ತನ್ನ ಅನುಸರಿಸಿ ಕುಟುಂಬ ಸದಸ್ಯರು ಮದುವೆ ಕಾರ್ಯ ನೆರವೇರಿಸಿದ್ದಾರೆ. ಮದುವೆಯಾದ ಕೂಡಲೇ, ದಂಪತಿಗಳು ಸೇರಿದಂತೆ ಇವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.

ಇನ್ನು ಸಮಾರಂಭಕ್ಕೆ ಹಾಜರಾದವರು ತಾವು ಎಲ್ಲಾ ಸೂಚನೆಗಳನ್ನು ಪಾಲಿಸುತ್ತೇವೆ ಮತ್ತು ಯಾವುದೇ ಉಲ್ಲಂಘನೆಯ ಮಾಡುವುದಿಲ್ಲ ಎಂದು ಲಿಖಿತ ಹೇಳಿಕೆ ಪಡೆದುಕೊಂಡು ಮಾನವೀಯತೆಯ ಆಧಾರದ ಮೇಲೆ ಮದುವೆಗೆ ಅವಕಾಶ ನೀಡಲಾಗಿದೆ ಎಂದು ಎಂದು ಸೇಲಂ ಕಲೆಕ್ಟರ್ ಎಸ್.ಎ.ರಾಮನ್ ಅವರು ತಿಳಿಸಿದ್ದಾರೆ.
.