ಚಿಕ್ಕಮಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಮದುವೆ ಸಮಾರಂಭಗಳಿಗೆ ನಿರ್ಬಂಧ ಹೇರಿದೆ. ಆದರೆ ಇಲ್ಲೊಬ್ಬ ಭೂಪ ಸರಳ ಮದುವೆಗೆ ಅನುಮತಿ ಪಡೆದು ಅದ್ದೂರಿ ಮದುವೆಗೆ ಮುಂದಾಗಿದ್ದಾನೆ. ಅಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆಯೇ ವಧುವನ್ನು ಮಂಟಪದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ.
ಚಿಕ್ಕಮಗಳೂರು ಕಡೂರು ಕರಿಕಲ್ಲಳ್ಳಿ ಗ್ರಾಮದಲ್ಲಿ ಅದ್ಧೂರಿ ಮದುವೆಯನ್ನು ಆಯೋಜಿಸಲಾಗಿತ್ತು. 10 ಜನರಿಗೆ ಮಾತ್ರ ಅವಕಾಶ ಅನ್ನುವ ನಿಬಂಧನೆಯೊಂದಿಗೆ ಈ ಮದುವೆಗೆ ಅನುಮತಿ ನೀಡಲಾಗಿತ್ತು. ಆದರೆ ಯಾವಾಗ ಮದುವೆ ಮನೆಯಲ್ಲಿ 400 ಜನರನ್ನು ಸೇರಿಸಿದ್ದಾರೆ ಅನ್ನುವ ಸುದ್ದಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ತಲುಪಿತೋ, ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದರೆ ಅಧಿಕಾರಿಗಳೇ ಒಂದು ಕ್ಷಣ ದಂಗಾಗಿದ್ದಾರೆ. ಮದುವೆ ಮನೆಗಷ್ಟೇ ಚಪ್ಪರ ಸೀಮಿತವಾಗಿರುತ್ತೆ ಅಂತಾ ಅಧಿಕಾರಿಗಳು ಅಂದುಕೊಂಡಿದ್ರೆ, ವರ ಮಾತ್ರ ಅರ್ಧ ಗ್ರಾಮಕ್ಕೆ ಚಪ್ಪರ ಹಾಕಿಸಿದ್ದ. ಇನ್ನು ಅಧಿಕಾರಿಗಳು ಬರುತ್ತಿರುವ ಮಾಹಿತಿ ಸಿಗುತ್ತಿದ್ದಂತೆ ಸೇರಿದ್ದ ಜನ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಇದರೊಂದಿಗೆ ವೇದಿಕೆಯಲ್ಲಿದ್ದ ವರ ವಧುವನ್ನು ಬಿಟ್ಟು ಕಾಲ್ಕಿತ್ತಿದ್ದಾನೆ. ಯಾರಪ್ಪ ಮದುವೆ ಗಂಡು ಎಂದು ಅಧಿಕಾರಿಗಳು ಹುಡುಕಿದ್ರೆ, ವರ ಮಾತ್ರ ಪರಾರಿಯಾಗಿದ್ದ.
ಕೊರೊನಾ ಹಾಟ್ ಸ್ಪಾಟ್ ಆಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹ ಮದುವೆ ಸಮಾರಂಭಗಳಿಂದಲೇ ಸೋಂಕು ಹೆಚ್ಚು ವ್ಯಾಪಿಸುತ್ತಿದೆ. ಸರಳ ಮದುವೆಗೆ ಅವಕಾಶ ಕಲ್ಪಿಸಿದ್ದರೂ ಅದ್ದೂರಿ ಮದುವೆ ನಡೆಸಲು ಹೋದ ವರನಿಗೆ ಅಧಿಕಾರಿಗಳು ತಕ್ಕ ಪಾಠ ಕಲಿಸಿದ್ದಾರೆ.