ಉಡುಪಿ : ಕೊರೊನಾ ಹೆಮ್ಮಾರಿ ವಿಶ್ವವನ್ನೇ ನಡುಗಿಸುತ್ತಿದೆ. ಕೊರೊನಾ ಹೆಸರು ಕೇಳಿದ್ರೆ ಸಾಕು ಜನರು ಬಹುದೂರ ಓಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಗಳೇ ಕಡಿದು ಹೋಗುವ ಸ್ಥಿತಿಗೆ ಜನರನ್ನು ಕೊರೊನಾ ತಂದು ನಿಲ್ಲಿಸಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರೀಯೆ ನಡೆಸುವುದಕ್ಕೂ ಸಮಸ್ಯೆ ಎದುರಾಗಿದೆ.
ಇಂತಹ ಸಂಕಷ್ಟದ ಕಾಲದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜಾ ಡಾ.ಜಿ.ಶಂಕರ್ ಮಾದರಿ ಕಾರ್ಯವೊಂದಕ್ಕೆ ಮುನ್ನುಡಿ ಬರೆದಿದ್ದಾರೆ. ಮೊಗವೀರ ಸಮಾಜದ ಸುಮಾರು 110 ಯುವಕರ ತಂಡ ಜಿಲ್ಲೆಯಲ್ಲಿ ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಆಗಿ ಸಿದ್ದಪಡಿಸಿದ್ದು, ಕೊರೊನಾ ಹೆಮ್ಮಾರಿಯ ವಿರುದ್ದ ತೊಡೆತಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಒಂದೆಡೆ ಕೊರೊನಾ ಸೋಂಕು ಹರಡದಂತೆ ತಡೆಯುವುದು, ಇನ್ನೊಂದೆಡೆ ಕೊರೊನಾ ಸೋಂಕಿತರ ಶುಶ್ರೂಷೆ ಮಾಡುವುದು ಜಿಲ್ಲಾಡಳಿತಕ್ಕೆ ಸಂಕಷ್ಟವನ್ನು ತಂದೊಡ್ಡಿದೆ. ಅದ್ರಲ್ಲೂ ಕರಾವಳಿ ಜಿಲ್ಲೆಗಳು ಕೊರೊನಾ ವೈರಸ್ ಸೋಂಕಿನ ವಿಚಾರದಲ್ಲಿ ರೆಡ್ ಝೋನ್ ನಲ್ಲಿ ಗುರುತಿಸಿಕೊಂಡಿದ್ದು, ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿದೆ. ಇಂತಹ ಸಂದರ್ಭದಲ್ಲಿಯೇ ಆರೋಗ್ಯ ಸಿಬ್ಬಂದಿಗಳ ಕೊರತೆ ಎದುರಾಗಿದೆ. ಇದನ್ನು ಮನಗಂಡ ನಾಡೋಜಾ ಜಿ.ಶಂಕರ್ ಮೊಗವೀರ ಯುವ ಪಡೆಯನ್ನು ಕೊರೊನಾ ವಾರಿಯರ್ಸ್ ಆಗಿ ಸಿದ್ದ ಪಡಿಸಿದ್ದಾರೆ.

ಡಾ.ಜಿ.ಶಂಕರ್ ಅವರ ನೇತೃತ್ವದಲ್ಲಿ ಮೊಗವೀರ ಯುವ ಸಂಘಟನೆಯ 100 ಮಂದಿಯ ತಂಡ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಉಡುಪಿ ಜಿಲ್ಲೆಯಲ್ಲಿ ಸೇವೆಗೆ ಧುಮುಕಿದ್ದಾರೆ. ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಕಾಲದಲ್ಲಿಯೂ ಜಗ್ಗದೇ ಜಿಲ್ಲಾಡಳಿತದೊಂದಿಗೆ ಫ್ರಂಟ್ ಲೈನ್ ವಾರಿಯರ್ಸ್ ಸೇವೆಗೆ ಇಳಿದಿದೆ.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಫ್ರಂಟ್ ಲೈನ್ ವಾರಿಯರ್ಸ್ ಸೇವೆ ಆರಂಭಗೊಂಡಿದ್ದು, ಕೊರೊನಾ ಸೋಂಕಿತರನ್ನು ಅಂಬ್ಯುಲೆನ್ಸ್ ಗೆ ಸ್ಥಳಾಂತರ ಮಾಡುವುದು. ರೋಗಿಗಳು ಮೃತಪಟ್ಟರೆ ಅವರನ್ನು ಜಿಲ್ಲಾಡಳಿತದ ಮಾರ್ಗದರ್ಶನದೊಂದಿಗೆ ಅವರವರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಕೈಗೊಳ್ಳುವುದು ಸೇರಿದಂತೆ ಹಲವು ಕಾರ್ಯವನ್ನು ಈಗಾಗಲೇ ನಿರ್ವಹಿಸುತ್ತಿದ್ದಾರೆ.

ಮೊಗವೀರ ಯುವಕರ ಫ್ರಂಟ್ ಲೈನ್ ತಂಡಕ್ಕೆ ಉಡುಪಿ ಜಿಲ್ಲಾಡಳಿತ ಸುರಕ್ಷತಾ ತರಬೇತಿಯನ್ನು ನೀಡಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು. ಕೊರೊನಾ ಸೋಂತರನ್ನು ಆಸ್ಪತ್ರೆಗಳಿಗೆ ಸಾಗಿಸುವಾಗ ಯಾವ ಮಾನದಂಡಗಳನ್ನು ಅನುಸರಿಸಬೇಕು.

ಒಂದೊಮ್ಮೆ ಕೊರೊನಾ ಸೋಂಕಿತರು ಮೃತಪಟ್ಟರೆ ಅವರನ್ನು ಸರಕಾರದ ಮಾರ್ಗಸೂಚಿಯ ಅನ್ವಯ ಹೇಗೆ ಅಂತ್ಯಕ್ರೀಯೆ ನೆರವೇರಿಸಬೇಕು ಅನ್ನುವ ಕುರಿತು ಸಂಪೂರ್ಣ ತರಬೇತಿಯನ್ನು ನೀಡಲಾಗಿದ್ದು, ಉಡುಪಿ ಜಿಲ್ಲಾಡಳಿತದ ಮಾರ್ಗದರ್ಶನದಂತೆಯೇ ಫ್ರಂಟ್ ಲೈನ್ ವಾರಿಯರ್ಸ್ ತಂಡ ಕಾರ್ಯನಿರ್ವಹಿಸುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಮೃತದೇಹಗಳನ್ನು ಸ್ವೀಕರಿಸಲು ಕುಟುಂಬಸ್ಥರು ಹಿಂಜರಿಯುತ್ತಿದ್ದರು. ಜಿಲ್ಲಾಡಳಿತಕ್ಕೆ ಮೃತದೇಹದ ವಿಲೇವಾರಿ ಮಾಡುವುದು ದುಸ್ಥರವಾಗಿತ್ತು. ಇದನ್ನು ಜಿಲ್ಲಾಧಿಕಾರಿಗಳ ಮೂಲಕ ತಿಳಿದ ನಾಡೋಜಾ ಜಿ.ಶಂಕರ್ ಅವರು ಉಡುಪಿ ಜಿಲ್ಲೆ ಮುಂದುವರಿದ ಜಿಲ್ಲೆ. ವ್ಯಕ್ತಿ ಜೀವಿತ ಅವಧಿಯಲ್ಲಿ ಇತರರಿಗೆ ಸಹಕಾರಿಯಾಗಿರುತ್ತಾನೆ. ಇಂತಹ ಸ್ಥಿತಿಯಲ್ಲಿ ಕೊರೊನಾ ಮೃತಪಟ್ಟವರಿಗೆ ಸೂಕ್ತ ರೀತಿಯಲ್ಲಿ ಅಂತ್ಯಕ್ರೀಯೆ ನಡೆಸಬೇಕೆಂಬ ಉದ್ದೇಶವನ್ನು ತನ್ನ ಬಳಿ ಹೇಳಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮೊಗವೀರ ಯುವ ಸಂಘಟನೆಯ 24 ಘಟಕಗಳ ಸಭೆಯನ್ನು ನಡೆಸಿ, ಅವರ ಸಹಕಾರದೊಂದಿಗೆ ತಂಡವನ್ನು ರಚಿಸಲಾಗಿದೆ. ಕೋವಿಡ್ ಅಧಿಕಾರಿಯಾಗಿರುವ ಡಾ.ಪ್ರೇಮಾನಂದ್ ಅವರಿಂದ ತಂಡಕ್ಕೆ ತರಬೇತಿಯನ್ನು ನೀಡಲಾಗಿದೆ. ಜಾತಿ, ಧರ್ಮದ ಬೇಧವಿಲ್ಲದೇ ತಂಡ ಕಾರ್ಯನಿರ್ವಹಿತ್ತಿದೆ. ನಾಡೋಜಾ ಜಿ.ಶಂಕರ್ ಅವರು ತಂಡಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ಕೊರೊನಾ ವಾರಿಯರ್ಸ್ ಗಳನ್ನು ಹುರಿದುಂಬಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅಲ್ಲದೇ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ನಮಗೆ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ. ಇಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷರು, 24 ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ ಎನ್ನುತ್ತಾರೆ ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶಿವರಾಮ್ ಕೆ.ಎಂ.

ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೊಗವೀರ ಯುವ ಪಡೆ ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಉಡುಪಿ ಹಾಗೂ ಕುಂದಾಪುರ ತಾಲೂಕಿನಲ್ಲಿ ಎರಡು ತಂಡಗಳು ಸಕ್ರೀಯವಾಗಿ ಕೊರೊನಾ ಮಹಾಮಾರಿಯ ವಿರುದ್ದ ತೊಡೆತಟ್ಟಿ ಹೋರಾಟ ನಡೆಸುತ್ತಿದ್ದಾರೆ. ಮೊಗವೀರ ಮಹಾಜನ ಮಂಡಳಿ ಉಚ್ಚಿಲದ ಇದರ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್ ಅವರು ಉಡುಪಿ ತಂಡದ ಸಂಚಾಲಕರಾಗಿ ಹಾಗೂ ಮೊಗವೀರ ಯುವ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶಿವರಾಮ್ ಕೆ.ಎಂ. ಅವರು ಜಿಲ್ಲಾ ಸಂಚಾಲರಾಗಿ ಹಾಗೂ ಕುಂದಾಪುರ ತಂಡದ ಸಂಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

ನಾಡೋಜಾ ಡಾ.ಜಿ.ಶಂಕರ್ ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಕಿಟ್ ಗಳನ್ನು ವಿತರಿಸುವ ಕಾರ್ಯವನ್ನು ಮಾಡಿದ್ದರು. ನಂತರ ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳಿಗೆ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಕೊರೊನಾ ರಕ್ಷಣ ಪರಿಕರಗಳನ್ನು ವಿತರಿಸಿದ್ದಾರೆ.

ಮಾತ್ರವಲ್ಲ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕೋವಿಡ್ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಮಸ್ಯೆ ಎದುರಾಗಿರುವುದನ್ನು ಮನಗಂಡು ಆಸ್ಪತ್ರೆಗಳಿಗೆ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ವೆಂಟಿಲೇಟರ್ ಗಳನ್ನು ಈಗಾಗಲೇ ಅವಳಿ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವ ಕಾರ್ಯವನ್ನು ಮಾಡಿದ್ದಾರೆ.

ಒಂದಿಲ್ಲೊಂದು ಮಾದರಿ ಕಾರ್ಯಗಳ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಜಿ.ಶಂಕರ್ ಈ ಹಿಂದೆ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಸುಮಾರು 2 ಲಕ್ಷ ಯೂನಿಟ್ ರಕ್ತವನ್ನು ಸಂಗ್ರಹಿಸಿ ಉಡುಪಿ ಜಿಲ್ಲೆಗೆ ರಕ್ತದಾನಿಗಳ ಜಿಲ್ಲೆಯೆಂಬ ಖ್ಯಾತಿಯನ್ನು ತಂದುಕೊಟ್ಟಿದ್ರು.

ಇದೀಗ ಕೊರೊನಾ ವೈರಸ್ ಸೋಂಕಿನ ವಿರುದ್ದ ಹೋರಾಟಕ್ಕೆ ಯುವಕರನ್ನು ಸಜ್ಜುಗೊಳಿಸಿದ್ದಾರೆ. ಸಂಕಷ್ಟದ ಕಾಲದಲ್ಲಿಯೂ ಜೀವದ ಹಂಗನ್ನು ತೊರೆದು ಜನರ ಸೇವೆಗೆ ಇಳಿದಿರುವ ಮೊಗವೀರ ಯುವಕರ ಕಾರ್ಯ ನಿಜಕ್ಕೂ ಇತರರಿಗೆ ಮಾದರಿಯಾಗಿದೆ.