ಯಕ್ಷಗಾನದಲ್ಲಿ ಭಗತ ಸಿಂಗ್ ! ಕುತೂಹಲ ಹುಟ್ಟಿಸಿದೆ ಕ್ರಾಂತಿ ಸೂರ್ಯ ಭಗತಸಿಂಹ

0

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರನಾಗಿ, ಯಾವುದೇ ಧರ್ಮ ಸಂಘರ್ಷ ಬಯಸದೆ, ಭಾರತ ಮಾತೆಯ ಬಂಧನ ವಿಮುಕ್ತಿಗಾಗಿ ತನ್ನ 23ನೇ ವಯಸ್ಸಿನಲ್ಲೇ ಹುತಾತ್ಮರಾದ ಭಗತ್ ಸಿಂಗ್ ಇಂದಿಗೂ ಅಜರಾಮರ. ಸ್ವಾತಂತ್ರ್ಯ ಹೋರಾಟಗಾರರಾಗಿ ತನ್ನ ಜೀವನವನ್ನೇ ದೇಶ ಸೇವೆಗಾಗಿ ಮುಡಿಪಾಗಿಟ್ಟ ವೀರಪುತ್ರನ ಬದುಕು ಯಕ್ಷಗಾನದ ಪ್ರಸಂಗವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬಡಗುತಿಟ್ಟಿನ ಯಕ್ಷರಂಗ ಮಂಚದಲ್ಲಿ ಭಗತಸಿಂಹ ಘರ್ಜನೆ ಕಲಾರಸಿಕರನ್ನು ರೋಮಾಂಚನಗೊಳಿಸಲಿದೆ.

ಖ್ಯಾತ ಪ್ರಸಂಗಕರ್ತ, ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ರಚನೆ ಮತ್ತು ಪರಿಕಲ್ಪನೆಯಲ್ಲಿ ಮೂಡಿಬಂದಿರುವ 27ನೇ ಯಕ್ಷಕೃತಿಯೇ “ಕ್ರಾಂತಿ ಸೂರ್ಯ ಭಗತಸಿಂಹ”. ಯಕ್ಷ ಸುಮನಸ ವ್ಯವಸಾಯ ಕಲಾರಂಗ (ರಿ) ಕೋಟ ಇವರ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷ ಸುಮನಸ ಕಲಾವಿದರು ಹಾಗೂ ಪಾತ್ರೋಚಿತ ಆಹ್ವಾನಿತ ಕಲಾವಿದರಿಂದ ಕ್ರಾಂತಿ ಸೂರ್ಯ -ಭಗತ ಸಿಂಹ ಯಕ್ಷಗಾನ ಪ್ರಪ್ರಥ ಪ್ರದರ್ಶನವಾಗಿ ರಂಗಾರ್ಪಣೆಯಾಗಲಿದೆ.

ಬ್ರಿಟಿಷ್ ಭಾರತಾಧಿಪತ್ಯದ ಕಾಲಘಟ್ಟದ ಸಂಕೀರ್ಣ ಕಥಾವಸ್ತುವನ್ನು ಸಮಗ್ರ ಅಧ್ಯಯನ ಪೂರ್ಣತೆಯಿಂದ ಯಕ್ಷಗಾನ ರಂಗಭೂಮಿಗೆ ಸಮ್ಮತವಾಗುವಂತೆ ಚೇತೋಹಾರಿ ಚಾರಿತ್ರಿಕ ಪ್ರಸಂಗವಾಗಿ ರೂಪಿಸಲಾಗಿದೆ. ಭಗತಸಿಂಗರ ಬಾಲ್ಯ, ತಾರುಣ್ಯ, ಯೌವ್ವನದ ದೇಶಭಕ್ತಿಯ ರೋಚಕ ಕಥನವನ್ನು ಯಕ್ಷಗಾನೀಯವಾಗಿ ರೂಪಾಂತರಗೊಳಿಸಲಾಗಿದೆ. ರಾಷ್ಟ್ರಪ್ರೇಮಿ ಭಗತ್ ಸಿಂಗರ ಕುರಿತು ಪ್ರಕಟವಾದ ಹಲವು ಸಾಹಿತ್ಯ ಕೃತಿಗಳ ಅಧ್ಯಯನದಿಂದ ನಿರ್ಮಾಣವಾದ ಈ ಐತಿಹಾಸಿಕ ಯಕ್ಷಗಾನ ಪ್ರಸಂಗ ನಾಲ್ಕು ಗಂಟೆಯ ಕಾಲಮತಿಯಲ್ಲಿ ಬಡಗುತಿಟ್ಟಿನ ಶೈಲಿಯಲ್ಲಿ ಮೂಡಿಬರಲಿದೆ.

ಪ್ರಸಾದ್ ಬಿಲ್ಲವ ಮಣೂರು, ಶಮಂತ್ ಕುಮಾರ್ ಕೆ.ಎಸ್. ಅವರ ವಿಶೇಷ ಸಂಯೋಜನೆ, ಮೊಗೆಬೆಟ್ಟು ರಂಗ ನಿರ್ದೇಶನದ ಈ ಪ್ರಸಂಗ ಪ್ರಯೋಗ ಕಲಾಭಿಮಾನಿಗಳಿಗೆ, ದೇಶಾಭಿಮಾನಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಉಡುಗೊರೆಯಾಗಲಿದೆ. ಭಗತ್ ಸಿಂಗ್ ಪಾತ್ರದಲ್ಲಿ ಯಕ್ಷರಂಗದ ಕೋಲ್ಮಿಂಚು ಹೆನ್ನಾಬೈಲ್ ವಿಶ್ವನಾಥ್ ಪೂಜಾರಿ, ಚಂದ್ರಶೇಖರ ಆಜಾದ್ ಪಾತ್ರದಲ್ಲಿ ಸರ್ವಪಾತ್ರ ಪ್ರವೀಣ ಸುಜಯೀಂದ್ರ ಹಂದೆ ಕೋಟ ಕಾಣಿಸಿಕೊಳ್ಳಲಿದ್ದಾರೆ. ಬ್ರಿಟಿಷ್ ಅಧಿಕಾರಿಯಾಗಿ ರಂಗದ ಮೋಡಿಗಾರ ರಾಘವೇಂದ್ರ ಮೊಗವೀರ ಪೇತ್ರಿ ಅಭಿನಯಿಸಲಿದ್ದಾರೆ.

ಐತಿಹಾಸಿಕ ಪಾತ್ರಗಳಾದ ಸುಖದೇವ, ರಾಜಗುರು, ರಾಮಪ್ರಸಾದ್ ಬಿಸ್ಮಿಲ್ಲಾ, ಕಿಶನಸಿಂಗ, ವಿದ್ಯಾವತಿ ಕೌರ್, ಅರ್ಜುನ್ ಸಿಂಗ್, ಸ್ಕಾಟ್, ಶಿವಶರ್ಮ, ಸ್ಯಾಂಡರ್, ಅಶ್ವಕುಲ್ಲಾ ಖಾನ್, ಪ್ರಾಣನಾಥ ಮೆಹ್ತಾ ಪಾತ್ರಗಳಲ್ಲಿ ಶ್ರೀಕಾಂತ ಭಟ್, ಸ್ಪೂರ್ತಿ ಟಿ.ವಿ.ಎಸ್, ವೆಂಕಟೇಶ ಕ್ರಮಧಾರಿ, ಮಹೇಂದ್ರ ಆಚಾರ್, ಪ್ರಸಾದ ಬಿಲ್ಲವ, ಶಮಂತ ಕುಮಾರ್, ವಿಘ್ನೇಶ್, ರಾಮಚಂದ್ರ ಐತಾಳ್, ಶರತ್ ಪಡುಕೆರೆ, ವೇದಾಂತ್, ಶಿವರಾಜ್, ಆದರ್ಶ ಮೊದಲಾದ ಹಿರಿ – ಕಿರಿಯ ಪ್ರತಿಭಾವಂತ ಕಲಾವಿದರು ರಂಗವೇರುವರು.

ಹಿಮ್ಮೇಳದಲ್ಲಿ ಹೆರಂಜಾಲು ಗೋಪಾಲ ಗಾಣಿಗ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ರಾಘವೇಂದ್ರ ಹೆಗಡೆ, ಕೋಟ ಶಿವಾನಂದ ಭಾಗವಹಿಸುವರು.

ಒಟ್ಟಿನಲ್ಲಿ ಕ್ರಾಂತಿ ಸೂರ್ಯ – ಭಗತಸಿಂಹ ಯಕ್ಷಗಾನ ಪ್ರಸಂದ ವೀಕ್ಷಣೆಗೆ ಅಪಾರ ಅಭಿಮಾನಿಗಳು ತುಂಬು ನಿರೀಕ್ಷೆಯಲ್ಲಿ ಕಾತರಿಸುತ್ತಿದ್ದಾರೆ.

Leave A Reply

Your email address will not be published.