ಬುಧವಾರ, ಏಪ್ರಿಲ್ 30, 2025
Homeಮಿಸ್ ಮಾಡಬೇಡಿಅಪಘಾತದಲ್ಲಿ ಪತ್ನಿ ಸಾವು : ಕನಸಿನ ಮನೆಗೆ ಪತ್ನಿಯೊಂದಿಗೆ ಗೃಹ ಪ್ರವೇಶ !

ಅಪಘಾತದಲ್ಲಿ ಪತ್ನಿ ಸಾವು : ಕನಸಿನ ಮನೆಗೆ ಪತ್ನಿಯೊಂದಿಗೆ ಗೃಹ ಪ್ರವೇಶ !

- Advertisement -

ಕೊಪ್ಪಳ : ಆ ದಂಪತಿಗಳಿಗೆ ಸುಂದರ ಮನೆಯೊಂದನ್ನು ಕಟ್ಟಿಸಬೇಕೆಂಬ ಕನಸಿತ್ತು. ಕನಸಿನ ಮನೆಯ ಭೂಮಿ ಪೂಜೆ ನೆರವೇರಿಸಿದ್ದರು. ಮನೆಯ ಗೃಹ ಪ್ರವೇಶಕ್ಕೂ ಮುನ್ನ ಪತ್ನಿ ಅಪಘಾತದಲ್ಲಿ ಮೃತಟ್ಟಿದ್ರು. ಆದ್ರೀಗ ಪತ್ನಿಯೊಂದಿಗೆ ಪತಿ ಮಹಾಶಯ ಕನಸಿನ ಸೌಧದ ಗೃಹ ಪ್ರವೇಶ ನೆರವೇರಿಸಿದ್ದಾರೆ !

ಜಗತ್ತಿನ ಬೆಲೆಕಟ್ಟಲಾಗದ್ದು ಅಂದ್ರೆ ಅದು ಪವಿತ್ರ ಪ್ರೀತಿ. ಅಂತಹ ಪ್ರೀತಿಗೆ ಶರಣಾಗವರು ಇಲ್ಲ. ಪ್ರೀತಿಯ ಹೆಸರು ಬಂದ್ರೆ ಸಾಕು ತಟ್ಟನೆ ನೆನಪಾಗುವುದು ತಾಜ್ ಮಹಲ್. ಶಹಜಹಾನ್ ತನ್ನ ಪ್ರೀತಿಯ ಮಡದಿಯ ನೆನೆಪಿಗಾಗಿ ಕಟ್ಟಿಸಿದ ತಾಜ್ ಮಹಲ್ ಇಂದು ವಿಶ್ವವಿಖ್ಯಾತಿಯನ್ನು ಪಡೆದುಕೊಂಡಿದೆ.

ಆದ್ರೀಗ ಕೊಪ್ಪಳದ ಉದ್ಯಮಿಯೋರ್ವರು ತನ್ನ ಪತ್ನಿಯ ಕನಸಿನ ಮನೆಯೊಂದನ್ನು ನಿರ್ಮಿಸಿ, ಮನೆಯೊಳಗೆ ತಮ್ಮಿಂದ ಅಗಲಿರುವ ಪತ್ನಿಯನ್ನೇ ಹೋಲುವ ಪುತ್ಥಳಿಯನ್ನು ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ.

 ಕೊಪ್ಪಳದ ಸಮೀಪದ ಭಾಗ್ಯನಗರದಲ್ಲಿನ ಉದ್ಯಮಿ ಶ್ರೀನಿವಾಸ್ ಗುಪ್ತಾರ ನೂತನ ಮನೆಯಲ್ಲಿ ವಿಶೇಷವಾದ ಪ್ರತಿಮೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಈ ಪ್ರತಿಮೆ ಬೇರೆಯಾರದ್ದೂ ಅಲ್ಲ. ಸ್ವತಃ ಶ್ರೀನಿವಾಸ ಗುಪ್ತಾ ಅವರ ಪತ್ನಿ ಕೆವಿಎನ್ ಮಾಧವಿ ಅವರದ್ದು.

ಕೆವಿಎನ್ ಮಾಧವಿ ಅವರಿಗೆ ತಮ್ಮ ಕನಸಿನ ಮನೆಯೊಂದನ್ನು ಕಟ್ಟಬೇಕೆಂದು ಆಸೆ ಇತ್ತು. ಅದರಂತೆ ಅವರು ಮನೆಯ ಭೂಮಿ ಪೂಜೆ ನೆರವೇರಿಸಿ, ಮನೆ ನಿರ್ಮಾಣ ಸಹ ಆರಂಭ ಮಾಡಿದ್ದರು. ಆದರೆ 2017ರ ಜುಲೈ 5 ರಂದು ತಿರುಪತಿಗೆ ಹೋಗುವ ವೇಳೆಯಲ್ಲಿ ಕೋಲಾರದ ಬಳಿ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

ಪತ್ನಿಯ ಸಾವು ಶ್ರೀನಿವಾಸ್ ಅವರಿಗೆ ಆಘಾತನ್ನು ತಂದಿತ್ತು. ಹೀಗಾಗಿ ಕೆಲಸವನ್ನು ಶ್ರೀನಿವಾಸ್ ಗುಪ್ತಾ ಮನೆ ನಿರ್ಮಾಣದ ಕಾರ್ಯವನ್ನು ಸ್ಥಗಿತಗೊಳಿಸಿದ್ದರು. ಆದರೆ ಪತ್ನಿಯ ಕನಸಿನ ಸೌಧವನ್ನು ಮಕ್ಕಳ ಒತ್ತಾಯಕ್ಕೆ ಮಣಿದು ಪುನರಾರಂಭಿಸಿದರು.

ಕನಸಿನ ಮನೆ ನಿರ್ಮಾಣವಾಗವ ವೇಳೆಯಲ್ಲಿ ಪತ್ನಿ ಜೊತೆಗಿಲ್ಲ ಅನ್ನವ ಕೊರಗು ಶ್ರೀನಿವಾಸ ಗುಪ್ತಾ ಅವರನ್ನು ಸದಾ ಕಾಡುತ್ತಲೇ ಇತ್ತು. ಮನೆಯ ಆರ್ಕಿಟೆಕ್ಟ್ ರಂಘಣ್ಣನವರ್ ಮೇಣದ ಪ್ರತಿಮೆ ಮಾಡಿಸಲು ಸಲಹೆ ನೀಡಿದರು. ಅದರಂತೆ ಬೆಂಗಳೂರಿನ ಶ್ರೀಧರಮೂರ್ತಿ ಅವರ ಗೊಂಬೆ ಮನೆಗೆ ಹೋದರು. ಆದರೆ ಮೇಣದ ಪ್ರತಿಮೆ ಬದಲಾಗಿ ಸಿಲಿಕಾನ್ ಪ್ರತಿಮೆ ಮಾಡಿಸಲು ಸಲಹೆ ನೀಡಿದರು.

ಅದರಂತೆ ಶ್ರೀಧರಮೂರ್ತಿ ಸಿಲಿಕಾನ್ ಮೆಟಿರಿಯಲ್ ನಲ್ಲಿ ಮಾಧವಿ ಅವರ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಅಗಸ್ಟ್ 8 ರಂದು ಶ್ರೀನಿವಾಸ್ ಗುಪ್ತಾ ಅವರು ನೂತನ ಮನೆಯ ಗೃಹ ಪ್ರವೇಶ ನೆರವೇರಿಸಿದ್ದಾರೆ. ಗೃಹ ಪ್ರವೇಶದಲ್ಲಿ ಪತ್ನಿ ಕೆವಿಎನ್ ಮಾಧವಿಯ ಅವರ ಸಿಲಿಕಾನ್ ಪ್ರತಿಮೆ ಗಮನ ಸೆಳೆಯುತ್ತಿದೆ.

ಶ್ರೀಧರ ಮೂರ್ತಿ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ  ಶ್ರಮವಹಿಸಿ ಸಿಲಿಕಾನ್ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ. ಪ್ರತಿಮೆಗೆ ಜೀವ ಇಲ್ಲ ಎನ್ನುವುದನ್ನು ಒಂದು ಬಿಟ್ಟರೆ ಥೇಟ್ ಮಾಧವಿ ಅವರೇ ಮನೆಯಲ್ಲಿ ಕುಳಿತಿರುವಂತೆ ಭಾಸವಾಗುತ್ತಿದೆ. ಮಾಧವಿ ಅವರ ಸಿಲಿಕಾನ್ ಪ್ರತಿಮೆಯನ್ನು ಮನೆಯ ಹಾಲ್ ನಲ್ಲಿಟ್ಟಿದ್ದು, ಯಾರಾದರೂ ಮನೆಗೆ ಬಂದರೆ ಇವರನ್ನು ಮಾತನಾಡಿಸದೆ ಇರಲಾರರು.

ಈ ಪ್ರತಿಮೆಯಲ್ಲಿ ಮಾಧವಿ ಅವರ ಉಡುತ್ತಿದ್ದ ಸೀರೆಯನ್ನೇ ಉಡಿಸಲಾಗಿದ್ದು, ಅವರು ತೊಡುತ್ತಿದ್ದ ಬಂಗಾರದ ಆಭರಣಗಳನ್ನು ಅವರ ಮೈಮೇಲೆ ಹಾಕಲಾಗಿದೆ. ಜೊತೆಗೆ ಅವರಂತೆಯೇ ಹೇರ್ ಸ್ಟೈಲ್ ಸಹ ಮಾಡಲಾಗಿದೆ. ಈ ಪ್ರತಿಮೆಯ ದೇಹದ ಭಾಗಗಳು ಫ್ಲೆಕ್ಸಿಬಲ್ ಆಗಿದ್ದು, ಮೇಕಪ್, ಸೀರೆ ಬದಲಾವಣೆ, ಹೆರ್ ಸ್ಟೈಲ್ ಸಹ ಚೇಂಜ್ ಮಾಡಬಹುದಾಗಿದ್ದು, ಎಲ್ಲಿಗೆ ಬೇಕಾದರೂ ಸಹ ಕ್ಯಾರಿ ಮಾಡಬಹುದಾಗಿದೆ.

ಇದೀಗ ಮಾಧವಿ ಅವರ ಹೆಣ್ಣು ಮಕ್ಕಳಿಬ್ಬರಿಗೆ ತಾಯಿ ಇಲ್ಲಾ ಅನ್ನೋ ಕೊರಗು ನೀಗಿದಂತಾಗಿದೆ. ಸದಾ ಕಾಲ ತಾಯಿಯ ಪ್ರತಿಮೆಯ ಪಕ್ಕದಲ್ಲಿಯೇ ಕುಳಿತು ಖಷಿ ಪಡುತ್ತಿದ್ದಾರೆ. ಇಷ್ಟು ದಿನ ಸೆಲೆಬ್ರಿಟಿಗಳ ಪ್ರತಿಮೆಗಳನ್ನು ನೋಡಿದ್ದೇವೆ. ಆದ್ರೀಗ ಉದ್ಯಮಿ ಶ್ರೀನಿವಾಸ ಗುಪ್ತ ಅವರು ನಿರ್ಮಿಸಿರುವ ಪ್ರತಿಮೆ ದೇಶದ ಗಮನಸೆಳೆದಿದೆ. ಆದರೆ ಪ್ರತಿಮೆ ನಿರ್ಮಾಣದ ವೆಚ್ಚದ ಗುಟ್ಟನ್ನು ಅವರು ಬಿಟ್ಟುಕೊಡುತ್ತಿಲ್ಲ. ಕೇಳಿದ್ರೆ ಪ್ರೀತಿಗೆ ಬೆಲೆ ಕಟ್ಟೋದಕ್ಕೆ ಸಾಧ್ಯವಿಲ್ಲ. ಎಷ್ಟು ವ್ಯಯಿಸಿದ್ರೂ ಕಡಿಮೆಯೇ ಅನ್ನುತ್ತಿದ್ದಾರೆ.

ಒಟ್ಟಿನಲ್ಲಿ ಪತ್ನಿಯ ಕನಸಿನ ಮನೆಯಲ್ಲಿ ತಮ್ಮ ಕನಸಿನ ರಾಣಿಯ ಪ್ರತಿಮೆ ಇಡುವ ಮೂಲಕ ಶ್ರೀನಿವಾಸ್ ಗುಪ್ತಾ ತಮ್ಮ ಪತ್ನಿ ಮೇಲಿನ ಪ್ರೀತಿಯನ್ನು ತೋರಿಸಿಕೊಟ್ಟಿದ್ದಾರೆ. ಇವರ ಪ್ರೀತಿಗೆ ನಮ್ಮದೊಂದು ಹ್ಯಾಟ್ಸ್ ಆಫ್.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular