ಹೊಸ ದಾಖಲೆ ಬರೆದ ರಾಜಾ ರವಿವರ್ಮ ಕಲಾಕೃತಿ! ಅತ್ಯಂತ ದುಬಾರಿ ಕಲಾಕೃತಿ ಮನ್ನಣೆ ಪಡೆದ ಯಶೋದಾ-ಕೃಷ್ಣ
ಭಾರತೀಯ ಚಿತ್ರಕಲೆಗೆ ಹೊಸ ಆಯಾಮ ನೀಡಿದ ರಾಜಾ ರವಿವರ್ಮರ (Raja Ravi Varma paintings) ಕುಂಚದಲ್ಲಿ ಅರಳಿದ ಕಲಾಕೃತಿಗಳಿಗೆ ಮಾರು ಹೋಗದವರಿಲ್ಲ. ಯುರೋಪಿಯನ್ ಶೈಲಿಯ ರಿಯಲಿಸಂ ಹಾಗೂ ತೈಲವರ್ಣ ತಂತ್ರಜ್ಞಾನವನ್ನು ಭಾರತೀಯ ಸಾಂಪ್ರದಾಯದೊಂದಿಗೆ ಬೆರೆಸಿ ಚಿತ್ರಿಸಿದ ಕಲಾಕೃತಿಗಳು ಇಂದಿಗೂ ಭಾರತೀಯ ಕಲಾ ಇತಿಹಾಸಕ್ಕೆ ಹೊಸ ಶ್ರೀಮಂತಿಕೆಯನ್ನೇ ನೀಡಿದೆ. ಇದೀಗ ಈ ಮಾತಿಗೆ ಸಾಕ್ಷಿ ಎಂಬಂತೆ ಭಾರತದ ಖ್ಯಾತ ಕಲಾವಿದ ರಾಜಾ ರವಿವರ್ಮ ಅವರ ಕುಂಚದಲ್ಲಿ ಅರಳಿದ ಅಪರೂಪದ ಕಲಾಕೃತಿಯೊಂದು ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಹೌದು..! ನ್ಯೂಯಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ ರವಿವರ್ಮ ಅವರ ‘ಯಶೋದಾ ಮತ್ತು ಕೃಷ್ಣ’ ಪೇಂಟಿಂಗ್ ಬರೋಬ್ಬರಿ 18 ಮಿಲಿಯನ್ ಡಾಲರ್ ಅಂದರೆ ಸುಮಾರು 150 ಕೋಟಿ ರೂಪಾಯಿ ಮೊತ್ತಕ್ಕೆ ಮಾರಾಟವಾಗುವ ಮೂಲಕ ಭಾರತೀಯ ಕಲಾ ಇತಿಹಾಸದಲ್ಲೇ ಅತ್ಯಂತ ದುಬಾರಿ ಕಲಾಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಭಾರತದಲ್ಲಿ ರಿಯಲ್ ಮೀ ( Realme 16 5G) ಅಬ್ಬರ : ಅತೀ ಕಡಿಮೆ ಬೆಲೆ, ದೀರ್ಘಾವದಿ ಬ್ಯಾಟರಿ
ತಾಯಿ ಯಶೋದೆಯು ಬಾಲಕೃಷ್ಣನನ್ನು ಪ್ರೀತಿಯಿಂದ ಅಪ್ಪಿಕೊಂಡಿರುವ ಈ ಚಿತ್ರವು ರವಿವರ್ಮ ಅವರ ಅತ್ಯಂತ ಶ್ರೇಷ್ಠ ಕಲಾಕೃತಿಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಇಂದಿಗೂ ಎಲ್ಲರ ಮನೆಗಳಲ್ಲಿ ಇರುವ ಲಕ್ಷ್ಮೀ, ಸರಸ್ವತಿ ಸೇರಿದಂತೆ ವಿವಿಧ ದೇವತೆಗಳ ಚಿತ್ರಗಳು ರಾಜಾ ರವಿವರ್ಮರ ಕಲ್ಪನೆಯಲ್ಲಿ ಮೂಡಿಬಂದವುಗಳು ಎಂದು ಹೇಳಲಾಗುತ್ತದೆ. ಜನಸಾಮಾನ್ಯರಿಗೂ ಚಿತ್ರಕಲೆಯ ಸೌಂದರ್ಯ ಸವಿಯುವ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ರಾಜಾ ರವಿವರ್ಮ ಪ್ರೆಸ್ ಮೂಲಕ ಅಗ್ಗದ ದರದಲ್ಲಿ ಇಂತಹ ಚಿತ್ರಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ಇತಿಹಾಸ ಹೇಳಿದೆ.
ಅದೇನೆ ಇರಲಿ..! ಭಾರತೀಯ ಮೂಲದ ಕಲಾಕೃತಿಯೊಂದು ನ್ಯೂಯಾರ್ಕ್‌ನಲ್ಲಿ ಅತ್ಯಂತ ದುಬಾರಿ ದರಕ್ಕೆ ಹರಾಜುಗೊಂಡಿದೆ ಎಂದರೆ, ಭಾರತೀಯ ಕಲಾ ಶ್ರೀಮಂತಿಕೆಯ ಕಂಪು ಸಂಪೂರ್ಣ ಜಗತ್ತಿಗೆ ವ್ಯಾಪಿಸಿದೆ. ಭಾರತೀಯ ಕಲೆಯನ್ನು ಜಗತ್ತು ಮೆಚ್ಚಿಕೊಂಡಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.



