ಶಿರೂರು ಮಠಕ್ಕೆ ಕೊನೆಗೂ ಅನಿರುದ್ಧ್ ಸರಳತ್ತಾಯ ಪೀಠಾಧಿಪತಿ : ಮೆಚ್ಚಲೇಬೇಕು ಸೋದೆ ಮಠದ ಶ್ರೀಗಳ ತಾಕತ್ತು

ಉಡುಪಿ : ಪೊಡವಿಗೊಡೆಯನ ನಾಡಲ್ಲಿರುವ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠಕ್ಕೆ ನೂತನ ಪೀಠಾಧಿಪತಿಯ ನೇಮಕವಾಗಿದೆ. ವಿವಾದ, ವಿರೋಧದ ನಡುವಲ್ಲೇ ಸೋದೆ ಶ್ರೀಗಳು ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದ ನಿಡ್ಲೆ ಮೂಲದ ಅನಿರುದ್ಧ್ ಸರಳತ್ತಾಯ ಅವರನ್ನು ಪೀಠಾಧಿಪತಿಯನ್ನಾಗಿ ನೇಮಿಸಲಾಗಿದೆ.

ಶೀರೂರು ಮಠದ ಲಕ್ಷ್ಮೀವರ ತೀರ್ಥರ ಸಂಶಯಾಸ್ಪದ ಸಾವಿನ್ನ ಬೆನ್ನಲ್ಲೇ ಶಿರೂರು ಮಠದ ಕಾರ್ಯಕಲಾಪಗಳನ್ನು ನಡೆಸುತ್ತಿದ್ದ ಶಿರೂರು ದ್ವಂದ ಮಠವಾಗಿರುವ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಶಿರೂರು ಮಠಕ್ಕೆ ನೂತನ ಪೀಠಾಧಿಪತಿಯನ್ನು ನೇಮಕ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋದೆ ಮೂಲ ಮಠದಲ್ಲಿ ಮೇ 11 ರಿಂದ ಮೂರು ದಿನಗಳ ಕಾಲ ಶಿಷ್ಯ ಸ್ವೀಕಾರ ಕಾರ್ಯ ನಡೆಯಲಿದೆ.

ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಸಾವಿನ ಬಳಿಕ ಮಠದಲ್ಲಿ ಹಲವು ವಿವಾದಗಳು ಹುಟ್ಟಿಕೊಂಡಿದ್ದವು. ಆಸ್ತಿ ವಿವಾದ ಸೇರಿದಂತೆ ಹಲವು ವಿವಾದಗಳು ನ್ಯಾಯಾಲಯದ ಅಂಗಳದಲ್ಲಿದೆ. ನೂತನ ಪೀಠಾಧಿಪತಿಯ ನೇಮಕ ವಿಚಾರದಲ್ಲಿಯೂ ಅಪಸ್ವರ ಕೇಳಿಬಂದಿತ್ತು. ಆದ್ರೂ ಸೋದೆ ಶ್ರೀಗಳು ಗಟ್ಟಿ ಧೈರ್ಯ ಮಾಡಿ ಶಿರೂರು ಮಠಕ್ಕೆ ನೂತನ ಪೀಠಾಧಿಪತಿಯನ್ನು ನೇಮಕ ಮಾಡಿದ್ದಾರೆ.

ಅಷ್ಟಕ್ಕೂ ಶಿರೂರು ಮಠದ ಪೀಠಾಧಿಪತಿಯಾಗಿರುವ ಅನಿರುದ್ದ ಸರಳತ್ತಾಯ ಅವರು ಸೋದೆ ಮಠದ ಪ್ರಧಾನ ವೈಧಿಕರಾಗಿರುವ ಉದಯ ಸರಳತ್ತಾಯರ ಪುತ್ರ. ಕೇವಲ ಸೋದೆ ಮಠದ ವೈಧಿಕರ ಮಗ ಅನ್ನೋ ಕಾರಣಕ್ಕೆ ಪೀಠಾಧಿಪತಿಯನ್ನಾಗಿ ಸೋದೆ ಶ್ರೀಗಳು ನೇಮಕ ಮಾಡಿಲ್ಲ. ಬದಲಾಗಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬದ 16 ವರ್ಷದ ವಟುವಾಗಿರುವ ಅನಿರುದ್ದ ಸರಳತ್ತಾಯರು ಉಡುಪಿಯ ವಿದ್ಯೋದಯ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ ಸಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಅನಿರುದ್ದ ಸರಳತ್ತಾಯರ ಜಾತಕದಲ್ಲಿ ಸನ್ಯಾನ ಯೋಗವಿದ್ದು, ಇದನ್ನು ಗಮನಿಸಿರುವ ಸೋದೆ ಮಠಾಧೀಶರು ಪೀಠಾಧೀಶರನ್ನಾಗಿ ನೇಮಕ ಮಾಡಿದ್ದಾರೆ.

ಒಟ್ಟಿನಲ್ಲಿ ಶಿರೂರು ಮಠಕ್ಕೆ ನೂತನ ಪೀಠಾಧೀಶರ ನೇಮಕದ ನಂತರವಾದ್ರೂ ಮಠದ ಅಂಗಳದಲ್ಲಿನ ವಿವಾದಗಳು ಬಗೆ ಹರಿಯುತ್ತಾ. ಇಲ್ಲಾ ಮುಂದೆ ಮತ್ತಷ್ಟು ವಿವಾದಗಳು ಹುಟ್ಟಿಕೊಳ್ಳುತ್ತವೆಯೋ ಅನ್ನೋದನ್ನು ಕಾದುನೋಡಬೇಕಿದೆ.

Comments are closed.