ಭಾರತದಲ್ಲಿ ಕೊರೊನಾ ಬಿಗ್ ಬ್ಲಾಸ್ಟ್ : 24 ಗಂಟೆಯಲ್ಲಿ 3.14 ಲಕ್ಷ ಮಂದಿಗೆ ಸೋಂಕು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಯ ಅವಧಿಯಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಾವನ್ನಪ್ಪಿದವರ ಸಂಖ್ಯೆ 2 ಸಾವಿರ ದಾಟಿದೆ.

ಕಳೆದ ಕೆಲ ದಿನಗಳಿಂದಲೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಇಷ್ಟು ದಿನ ನಿತ್ಯವೂ 2 ಲಕ್ಷದಷ್ಟು ಕೊರೊನಾ ಸೋಂಕು ದೃಢಪಡುತ್ತಿತ್ತು. ಆದ್ರೀಗ ಸೋಂಕಿತರ ಸಂಖ್ಯೆ ಯಲ್ಲಿ ಭಾರೀ ಏರಿಕೆಯಾಗಿದೆ. ಇಂದು ಒಂದೇ ದಿನ 3,14,835 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ 3,14,835 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 1,59,30,965ಕ್ಕೆ ಏರಿಕೆಯಾಗಿದೆ. ಒಂದಡೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 2,104 ಮಂದಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 1.84,657ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿನ ಆರ್ಭಟ ಹೆಚ್ಚುತ್ತಿದ್ದಂತೆಯೇ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು 22,91,428 ಸಕ್ರೀಯ ಪ್ರಕರಣ ಗಳಿವೆ. ಇನ್ನು 24 ಗಂಟೆಗಳಲ್ಲಿ 1,78,841 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೆ ದೇಶದಲ್ಲಿ ಒಟ್ಟು 1,34,54,880 ಮಂದಿ ಚೇತರಿಕೆಯನ್ನು ಕಂಡಿದ್ದಾರೆ.

Comments are closed.