SSLC ಫಲಿತಾಂಶ : ಪ್ರತಿಷ್ಟಿತ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ಸತತ ಶೇ.100, ಆಂಗ್ಲ‌ ಮಾಧ್ಯಮಕ್ಕೆ ಶೇ.99 ಫಲಿತಾಂಶ

0

ಮೂಡಬಿದಿರೆ : ಜೈನಕಾಶಿ ಮೂಡಬಿದಿರೆಯ ಆಳ್ವಾಸ್ ಪ್ರತಿಷ್ಟಾನದ ವತಿಯಿಂದ ನಡೆಸಲ್ಪಡುವ ಆಳ್ವಾಸ್ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ ಮಾಡಿದೆ.

ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಶೇಕಡಾ 100 ಫಲಿತಾಂಶ ದಾಖಲಿಸಿದ್ರೆ, ಆಳ್ವಾಸ್ ಆಂಗ್ಲ‌ ಮಾಧ್ಯಮ ಶಾಲೆ ಶೇಕಡಾ 99 ಫಲಿತಾಂಶ ಪಡೆದುಕೊಂಡಿದೆ. ಕನ್ನಡ ಮಾಧ್ಯಮ ಪ್ರೌಢಶಾಲೆಯ 4ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಪ್ರಕೃತಿ ಪ್ರಿಯ ಮತ್ತು ಸಮ್ಮೇದ್ ಮಹಾವೀರ ಅವರು ತಲಾ 622 ಅಂಕಗಳನ್ನು ಪಡೆದುಕೊಂಡಿದ್ರೆ ಕಾವ್ಯ ಪಿ ಹಳ್ಳಿ ಮತ್ತು ಶ್ರಾವ್ಯ ತಲಾ 621 ಅಂಕ ಪಡೆದಿದ್ದಾರೆ. ಇನ್ನು ಸಾಕ್ಷಿ ರಾಜ್ ಕುಂಬಾರ್ ಹಾಗೂ ರಕ್ಷಿತಾ ದಾನಲಿಂಗ್ ತಲಾ 620 ಅಂಕಗಳಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿಯೇ ಮಾದರಿ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ‌ ಕಳೆದ 12 ವರ್ಷಗಳಿಂದಲೂ ಶೇ.100 ಫಲಿತಾಂಶವನ್ನು ದಾಖಲಿಸುತ್ತಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸುತ್ತಾ ಬಂದಿರುವ ಕನ್ನಡ ಮಾಧ್ಯಮ ಪ್ರೌಢಶಾಲೆ ಈ‌ ಬಾರಿಯೂ ಉತ್ತಮ‌ ಸಾಧನೆ ಮಾಡಿದೆ. ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಎಲ್ಲಾ 160 ವಿದ್ಯಾರ್ಥಿಗಳೂ ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿದ್ದು, ಆಂಗ್ಲ ಭಾಷೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳಿಸಿದ್ದಾರೆ.

ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 537 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ಈ ಪೈಕಿ 531 ಮಂದಿ ವಿದ್ಯಾರ್ಥಿಗಳು ಉತೀರ್ಣರಾಗಿದ್ದು ಶೇ 99 ಫಲಿತಾಂಶ ದಾಖಲಾಗಿದೆ. ಆನಂದ ಪಾಟೀಲ್ ಮತ್ತು ರೇಶ್ಮಾ ಎಂ. ಪೂಜಾರಿ ತಲಾ 620 ಅಂಕಗಳೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ. ಉಚಿತ ದತ್ತು ಶಿಕ್ಷಣ ಯೋಜನೆಯಡಿ ಶಿಕ್ಷಣ ಪಡೆದ ಶ್ರೀನಿವಾಸ ಸುಡುಗಾಡು ಸಿದ್ಧ (615 ಅಂಕ) ಕಾವ್ಯ ಕುಡುಬಿ 612 ಅಂಕ ಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದಾರೆ. ಎರಡೂ ವಿಭಾಗಗಳಲ್ಲಿ 91 ವಿದ್ಯಾರ್ಥಿಗಳು 600ಕ್ಕೂ ಮೇಲ್ಪಟ್ಟು ಅಂಕ ಗಳಿಸಿದ್ದಾರೆ.

ವಿಷಯವಾರು ಪರೀಕ್ಷೆಗಳಲ್ಲಿ 365 ವಿದ್ಯಾರ್ಥಿಗಳೂ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಇಂತಹ ಸಾಧನೆ ರಾಜ್ಯದಲ್ಲೇ ಶಿಕ್ಷಣ ಸಂಸ್ಥೆಯೊಂದರ ಗಮನಾರ್ಹ ಸಾಧನೆಯಾಗಿದೆ ಎಂದು ಡಾ. ಮೋಹನ ಆಳ್ವ ಸಂತಸ ವ್ಯಕ್ತ ಪಡಿಸಿದ್ದಾರೆ. ಆಳ್ವಾಸ್ ಪ್ರೌಢಶಾಲೆಯ ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿ, ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಬಿ, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ವಿಜಯ ಟಿ ಮೂರ್ತಿ, ಪಿ.ಆರ್. ಒ. ಡಾ. ಪದ್ಮನಾಭ ಶೆಣೈ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.