ರಾಜ್ಯದಲ್ಲಿ ಬದಲಾಗಲಿದೆಯಾ ಶಾಲಾ ಆರಂಭದ ಸಮಯ? ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಆಗ್ರಹ
ರಾಜ್ಯದಲ್ಲಿ ಅತಿಯಾಗಿ ಮಳೆ ಸಂಭವಿಸುತ್ತಿದ್ದ ಸಂದರ್ಭದಲ್ಲಿ ರಜೆ ಪಡೆದುಕೊಂಡಿದ್ದ ಶಾಲಾ ವಿದ್ಯಾರ್ಥಿಗಳಿಗೆ ಇದೀಗ ಕೊರೆಯುವ ಚಳಿ ಕೂಡ ವರದಾನವಾಗಿ ಸಂಭವಿಸುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಈ ಸಂಬಂಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಪತ್ರ ಬರೆದಿದ್ದು ರಾಜ್ಯಾದ್ಯಂತ ಶಾಲೆಗಳ ಆರಂಭದ ಸಮಯ ಬದಲಿಸುವಂತೆ ಮನವಿ ಮಾಡಿದೆ.
ರಾಜ್ಯದಲ್ಲಿ ಚಳಿಗಾಳಿಯ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ಅನಿವಾರ್ಯತೆಯಿದೆ. ಆದ್ದರಿಂದ ರಾಜ್ಯದಲ್ಲಿ ಶಾಲೆಗಳ ಆರಂಭದ ಸಮಯ ಬದಲಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮನವಿ ಮಾಡಿದೆ.
ಪತ್ರದಲ್ಲೇನಿದೆ ?
ರಾಜ್ಯದಲ್ಲಿ ಪ್ರಸ್ತುತ ಚಳಿಗಾಳಿ ಮಿತಿಮೀರಿದೆ. ಮಕ್ಕಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಹಲವು ಕಡೆಗಳಲ್ಲಿ ಬೆಳಗ್ಗೆ 8 ರಿಂದ 8:30ರ ವೇಳೆಗೆ ಶಾಲೆಗಳು ಆರಂಭಗೊಳ್ಳುತ್ತದೆ. ತಾಪಮಾನ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಎಲ್ಕೆಜಿಯಿಂದ ಪಿಯುಸಿವರೆಗೆ ಶಾಲೆಯ ಆರಂಭದ ಸಮಯವನ್ನು 9:30ಕ್ಕೆ ಬದಲಾಯಿಸಬೇಕು ಎಂದು ಮನವಿ ಮಾಡಲಾಗಿದೆ. ತೀವ್ರವಾದ ಚಳಿಯಿಂದಾಗಿ ಶೀತ, ಜ್ವರ ಹಾಗೂ ಉಸಿರಾಟದ ಸಮಸ್ಯೆ ಎದುರಾಗುವ ಸಮಸ್ಯೆ ಇರುವುದರಿಂದ ಈ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸುಂಬೆ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಶಾಲಾ ಮುಖ್ಯಶಿಕ್ಷಕರಿಗೆ ಸಂಕಷ್ಟ ತಂದ ಮೊಟ್ಟೆ : ಸಾಲುತ್ತಿಲ್ಲ ರಾಜ್ಯ ಸರ್ಕಾರದ ಅನುದಾನ
ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ತೀವ್ರ ಚಳಿಯಿದ್ದು ಕನಿಷ್ಠ ತಾಪಮಾನ 9 ಡಿಗ್ರಿಯವರೆಗೂ ದಾಖಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಈ ಪರಿಸ್ಥಿತಿಯಲ್ಲಿ ಬೆಳಗ್ಗೆ ಬೇಗನೇ ಎದ್ದು ಶಾಲೆಗೆ ತಯಾರಾಗುವುದು ಮಕ್ಕಳ ಆರೋಗ್ಯದ ದೃಷ್ಠಿಯಿಂದ ಸೂಕ್ತವಲ್ಲ. ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಶೈಕ್ಷಣಿಕ ಇಲಾಖೆಗೆ ಮನವಿ ಮಾಡಲಾಗಿದೆ. ಈ ಸಂಬಂಧ ಆಯೋಗದ ಮನವಿಗೆ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.



