ಮೈಸೂರು : ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಸಾಲದಕ್ಕೆ ಈಗಾಗಲೇ ಸಾಕಷ್ಟು ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಶೈಕ್ಷಣಿಕ ಚಟುವಟಿಕೆಗಳ ಆರಂಭವೇ ಗೊಂದಲಕ್ಕೆ ಸಿಲುಕಿದೆ. ಸಚಿವರು ಶಾಲಾರಂಭದ ಕುರಿತು ಜನಪ್ರತಿನಿಧಿಗಳಿಂದ ಮಾಹಿತಿ ಕೊರಿದ್ದಾರೆ. ಆದ್ರೀಗ ಶಾಲಾರಂಭಕ್ಕೂ ಮುನ್ನ ಶಿಕ್ಷಕರಿಗೆ ಕೊರೊನಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದ್ದು, ಕೊರೊನಾ ನೆಗೆಟಿವ್ ವರದಿ ಬಂದರೆ ಮಾತ್ರವೇ ಶಾಲೆಗೆ ಹೋಗಲು ಅವಕಾಶ ಕಲ್ಪಿಸಲಾಗುತ್ತಿದೆ.

ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಇನ್ನು ಆರಂಭಗೊಂಡಿಲ್ಲ. ಜೂನ್ ನಲ್ಲಿ ಆರಂಭ ಬೇಕಾಗಿದ್ದ ಶೈಕ್ಷಣಿಕ ವರ್ಷ 4 ತಿಂಗಳು ಕಳೆದರು ಆರಂಭಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಇನ್ನೊಂದೆಡೆ ಹೆಚ್ಚುತ್ತಿರುವ ಕೊರೊನಾ ಸೋಂಕಿನಿಂದಾಗಿ ಶಾಲೆಗಳು ಆರಂಭವಾಗೋದು ಗ್ಯಾರಂಟಿ ಅಂತಾ ಹೇಳೋದಕ್ಕೆ ಸಾಧ್ಯವಿಲ್ಲ. ಆದರೂ ಶಿಕ್ಷಣ ಇಲಾಖೆ ಮಾತ್ರ ಕಸರತ್ತು ನಡೆಸುತ್ತಲೇ ಇದೆ. ವಿದ್ಯಾಗಮ ಯೋಜನೆಯ ಬೆನ್ನಲ್ಲೇ ಇದೀಗ ಶಿಕ್ಷಕರಿಗೆ ಕೊರೊನಾ ಟೆಸ್ಟ್ ಮಾಡಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುತ್ತಿದ್ದು, ಶಿಕ್ಷಕರು ಕೂಡ ಕೊರೊನಾ ವೈರಸ್ ಸೋಂಕಿನ ವಿರುದ್ದ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಹಲವು ಜಿಲ್ಲೆಗಳಲ್ಲಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲೀಗ ಮೈಸೂರು ಜಿಲ್ಲೆಯಲ್ಲಿ ರುವ ಸುಮಾರು 15,000 ಶಿಕ್ಷಕರಿಗೆ ಕೊರೊನಾ ಟೆಸ್ಟ್ ಮಾಡಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ. ಕೊರೊನಾ ಟೆಸ್ಟ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ್ರೆ ಮಾತ್ರವೇ ಶಾಲೆಗೆ ಎಂಟ್ರಿ ನೀಡಲಾಗುತ್ತಿದೆ. ಇಷ್ಟು ದಿನ ಕೊರೊನಾ ಸೋಂಕಿನ ವಿರುದ್ದ ಹೋರಾಟ ನಡೆಸುತ್ತಿದ್ದ ಶಿಕ್ಷಕರಿಗೆ ಇದೀಗ ಕೊರೊನಾ ಭಯ ಶುರುವಾಗಿದೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 3,000 ಕ್ಕೂ ಅಧಿಕ ಶಾಲೆಗಳಿದ್ದು, ಈ ಪೈಕಿ ಖಾಸಗಿ ಶಾಲೆಗಳು ಸೇರಿದಂತೆ ಎಲ್ಲಾ ಶಿಕ್ಷಕರಿಗೆ ಕೊರೊನಾ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಶಿಕ್ಷಕರಿಗೆ ಮಾತ್ರವಲ್ಲ ಅಗತ್ಯಬಿದ್ದರೆ ಶಿಕ್ಷಕರ ಕುಟುಂಬಸ್ಥರನ್ನೂ ಕೊರೊನಾ ತಪಾಸಣೆಗೆ ಒಳಪಡಿಸ ಲಾಗುತ್ತಿದೆ.

ಈಗಾಗಲೇ ವಲಯವಾರು ಶಿಕ್ಷಕರನ್ನು ಆಂಟಿಜನ್ ಟೆಸ್ಟ್ ಮೂಲಕ ಆರೋಗ್ಯ ಸಿಬ್ಬಂದಿಗಳು ಕೊರೊನಾ ಟೆಸ್ಟ್ ಮಾಡಿಸುತ್ತಿ ದ್ದಾರೆ. ಶಾಲಾರಂಭಕ್ಕೂ ಮುನ್ನವೇ ಶಿಕ್ಷಕರನ್ನು ಕೊರೊನಾ ತಪಾಸಣೆಗೆ ಒಳಪಡಿಸುವ ಮೂಲಕ ಪೋಷಕರು ಹಾಗೂ ಶಿಕ್ಷಕರನ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡಲಾಗುತ್ತಿದೆ. ಆದರೆ ಎಷ್ಟು ಶಿಕ್ಷಕರು ಕೊರೊನಾ ಟೆಸ್ಟ್ ಪಾಸಾಗುತ್ತಾರೆ ಅನ್ನೋದು ಮಾತ್ರ ಕುತೂಹಲ ಮೂಡಿಸಿದೆ.

ಮೈಸೂರು ಮಾತ್ರವಲ್ಲದೇ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಶಿಕ್ಷಕರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸುವ ಕುರಿತು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಈ ಮೂಲಕ ಶೈಕ್ಷಣಿಕ ಚಟುವಟಿಕೆ ಆರಂಭಿಸುವ ಲೆಕ್ಕಾಚಾರದಲ್ಲಿ ಶಿಕ್ಷಣ ಇಲಾಖೆಯಿದ್ರೆ, ಶಿಕ್ಷಕರು, ಪೋಷಕರು, ಮಕ್ಕಳು ಹಾಗೂ ಶಿಕ್ಷಕರ ಕುಟುಂಬಸ್ಥರು ಮಾತ್ರವೇ ಕೊರೊನಾ ಭಯದಲ್ಲಿಯೇ ಮುಳುಗಿದ್ದಾರೆ.