ಮಕ್ಕಳನ್ನೇ ಕಾಡುತ್ತಿದೆ ಕೊರೊನಾ ಹೆಮ್ಮಾರಿ : ಎಸ್ಎಸ್ಎಲ್ ಸಿ, ಪಿಯುಸಿ‌ ತರಗತಿಗಳು ಬಂದ್ ..!!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಅದ್ರಲ್ಲೂ ಮಕ್ಕಳಲ್ಲಿಯೇ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ತರಗತಿಗಳು ಬಂದ್ ಆಗುವುದು ಖಚಿತ.

ಪ್ರತಿನಿತ್ಯವೂ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 20 ಸಾವಿರದ ಅಂಚಿಗೆ‌ ಬಂದು ನಿಂತಿದೆ. ಎಪ್ರಿಲ್ ಅಂತ್ಯ ಹಾಗೂ ಮೇ ತಿಂಗಳಲ್ಲಿ ಸೋಂಕಿನ ಪ್ರಮಾಣ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ತಜ್ಞರು ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಅದ್ರಲ್ಲೂ ದೇಶದಾದ್ಯಂತ ಅತೀ ಲಕ್ಷಾಂತರ ಸಂಖ್ಯೆಯಲ್ಲಿ ಮಕ್ಕಳೇ ಕೊರೊನಾ ಸೋಂಕಿಗೆ ತುತ್ತಾಗುತ್ತಿರೋದು ಆತಂಕವನ್ನು ಮೂಡಿಸಿದೆ.

ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ  9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಣೆ ಮಾಡ ಲಾಗಿತ್ತು. ಜೊತೆಗೆ ವಿವಿಧ ವಿಶ್ವವಿದ್ಯಾಲಯಗಳಲ್ಲಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ಪರೀಕ್ಷೆಯನ್ನೇ ರದ್ದು ಮಾಡ ಲಾಗಿದೆ. ಆದರೆ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ವಿಚಾರವನ್ನು ಸಚಿವ ಸುರೇಶ್ ಕುಮಾರ್ ಗೊಂದಲದಲ್ಲಿಯೇ ಇಟ್ಟಿದ್ದಾರೆ. ಎಲ್ಲಾ ತರಗತಿ ಬಂದ್ ಆಗಿದ್ದರೂ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ತರಗತಿಗಳನ್ನಷ್ಟೇ ನಡೆಸಲಾಗುತ್ತಿದೆ. ಆದರೀಗ ಮಕ್ಕಳಲ್ಲೇ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ತಜ್ಞರು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಸಲಹೆ ನೀಡಿದ್ದಾರೆ.

ಒಂದೆಡೆ ಕೇಂದ್ರ ಸರಕಾರದ ಸಲಹೆಯ ಮೇರೆಗೆ ಸಿಬಿಎಸ್ಇ 10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದು ‌ಮಾಡಿದ್ದು, 12ನೇ ತರಗತಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ ಪರಿಸ್ಥಿತಿ ಕೈ ಮೀರಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಸ್ಥಿತಿ ತಲುಪಿದೆ. ಒಂದೊಮ್ಮೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡ್ರೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗದ ಸ್ಥಿತಿಗೆ ತಲುಪುವ ಸಾಧ್ಯತೆಯಿದೆ.

ರಾಜ್ಯದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು, ಶಿಕ್ಷಕೇತರ ಸಿಬ್ಬಂಧಿ ಸೇರಿದಂತೆ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ನಿತ್ಯವೂ ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಒಂದೊಮ್ಮೆ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಿದ್ದತೆಗೆ ರಜೆಯನ್ನು ಘೋಷಣೆ ಮಾಡಿ, ಶಿಕ್ಷಕರಿಗೆ ಬೇಸಿಗೆ ರಜೆ ಘೋಷಣೆ ಮಾಡಿದ್ರೆ ಸಾರ್ವಜನಿಕ ಸಾರಿಗೆಯ ಮೇಲಿನ ಒತ್ತಡ ತಪ್ಪಿಸಬಹುದು. ‌ಅಲ್ಲದೇ ಶಾಲೆಗಳು ಕೊರೊನಾ ಹಾಟ್ ಸ್ಪಾಟ್ ಆಗುವುದನ್ನು ತಪ್ಪಿಸಲು ಸಹಕಾರಿಯಾಗಲಿದೆ ಅನ್ನೋದು ಪ್ರಜ್ಞಾವಂತರ ಅಭಿಪ್ರಾಯ.

ಕೊರೊನಾ ಸೋಂಕು ಹೆಚ್ಚುತ್ತಿದ್ದು ಕೋವಿಡ್ ತಾಂತ್ರಿಕ ಸಮಿತಿ, ಆರೋಗ್ಯ ಸಚಿವರು ಕೂಡ ಶಾಲೆಗಳಿಗೆ ರಜೆ ಘೋಷಣೆಗೆ ಸಲಹೆ ನೀಡಿದ್ದಾರೆ. ಆದರೆ ಶಿಕ್ಷಣ ಸಚಿವರು ಮಾತ್ರ ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಇತರ ರಾಜ್ಯಗಳಲ್ಲಿ ಶೈಕ್ಷಣಿಕ ಚಟುವಟಿಕೆಯೇ ನಡೆದಿಲ್ಲ. ಆದರೀಗ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆ ಯನ್ನು ಶಿಕ್ಷಕರು ಪೂರ್ಣಗೊಳಿಸಿದ್ದಾರೆ. ಕೊರೊನಾ ಹಿನ್ನೆಲೆ ಬೇಸಿಗೆ ರಜೆ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಶಿಕ್ಷಣ ಇಲಾಖೆ ರಜೆ ನೀಡಲು ಮುಂದಾಗದಿರುವುದು ವಿಪರ್ಯಾಸವೇ‌ ಸರಿ. ಒಂದೊಮ್ಮೆ ಕೊರೊನಾ ಸೋಂಕಿಗೆ ವಿದ್ಯಾರ್ಥಿಗಳು ತುತ್ತಾದ್ರೆ ಶಿಕ್ಷಣ ಸಚಿವರೇ ಹೊಣೆ ಎಂದು ಪೋಷಕರು ತಮ್ಮ ಅಸಹಾಯಕತೆ ಯನ್ನು ವ್ಯಕ್ತಪಡಿ ಸುತ್ತಿದ್ದಾರೆ.

ಶಾಲೆಗಳು ಸುರಕ್ಷಿತಾ ಕೇಂದ್ರಗಳು ಎಂದು ಸಚಿವರು ಹೇಳುತ್ತಿದ್ದಾರೆ‌. ಆದರೆ ಶಾಲೆಗಳಲ್ಲಿ ಸಾಮಾಜಿಕ ಅಂತರ ಪಾಲನೆ ಸಾಧ್ಯವಾಗುತ್ತಿಲ್ಲ. ಜೊತೆಗೆ ಸಾರ್ವಜನಿಕ ಬಸ್ಸಿನಲ್ಲಿ ವಿದ್ಯಾರ್ಥಿಗಳು ಸಂಚರಿಸುವಾಗಲೂ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಕೊರೊನಾ ವಿಚಾರದಲ್ಲಿ ವಿದ್ಯಾರ್ಥಿಗಳನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳುವ ಬದಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. ಒಂದೊಮ್ಮೆ ಮಕ್ಕಳ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ.

Comments are closed.