1st to 9th Class : ಸೋಮವಾರದಿಂದ ಬೆಂಗಳೂರಲ್ಲಿ 1 ರಿಂದ 9 ನೇ ತರಗತಿ ಆರಂಭ : ಶಾಲಾರಂಭದ ಸುಳಿವು ಕೊಟ್ಟ ಬಿ.ಸಿ.ನಾಗೇಶ್‌

ಬೆಂಗಳೂರು : ಕೋವಿಡ್‌ ವೈರಸ್‌ ಸೋಂಕಿನ ಪ್ರಮಾಣ ಕರ್ನಾಟಕದಲ್ಲಿ ಇಳಿಕೆಯಾಗುತ್ತಿಲ್ಲ. ಬೆಂಗಳೂರಲ್ಲಿ ಸೋಂಕಿತ ಪ್ರಕರಣ ಕಡಿಮೆಯಾಗಿದ್ದರೂ, ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ. ಈ ನಡುವಲ್ಲೇ ಬೆಂಗಳೂರಲ್ಲಿ 1 ರಿಂದ 9 ನೇ ತರಗತಿ ಆರಂಭಕ್ಕೆ ಶಿಕ್ಷಣ ಇಲಾಖೆ ಸಜ್ಜಾಗಿದೆ. ಸೋಮವಾರದಿಂದಲೇ ಶಾಲೆಗಳು ಆರಂಭವಾಗುವ (1st to 9th Class )ಸಾಧ್ಯತೆಯಿದೆ. ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸುಳಿವು ನೀಡಿದ್ದಾರೆ.

ಬೆಂಗಳೂರಲ್ಲಿ ಏಕಾಏಕಿಯಾಗಿ ಕೊರೊನಾ ವೈರಸ್‌ ಸೋಂಕು ಹೆಚ್ಚಳವಾಗುತ್ತಿದ್ದಂತೆಯೇ ಶಾಲೆಗಳು ಬಂದ್‌ ಆಗಿತ್ತು. 1ರಿಂದ 9 ನೇ ತರಗತಿಗಳಿಗೆ ಭೌತಿಕ ತರಗತಿಗಳನ್ನು ಬಂದ್‌ ಮಾಡಿ, ಕೇವಲ 10, 11 ಹಾಗೂ 12 ನೇ ತರಗತಿಗಳನ್ನು ಮಾತ್ರವೇ ನಡೆಸಲಾಗುತ್ತಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಕೋವಿಡ್‌ ಸೋಂಕು ಹೆಚ್ಚುತ್ತಿದ್ದರೂ ಕೂಡ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿದೆ. ಅತೀ ಹೆಚ್ಚು ಕೊರೊನಾ ಸೋಂಕು ಕಂಡು ಬಂದ ಶಾಲೆಗಳನ್ನು ಒಂದು ವಾರ ಹಾಗೂ ಕಡಿಮೆ ಪ್ರಮಾಣದಲ್ಲಿ ಸೋಂಕು ಕಂಡು ಬಂದ ಶಾಲೆಗಳಿಗೆ ಮೂರು ದಿನಗಳ ಕಾಲ ರಜೆ ನೀಡುವಂತೆ ಈಗಾಗಲೇ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಆದೇಶ ಹೊರಡಿಸಿದ್ದರು.

ಬೆಂಗಳೂರಿನಲ್ಲಿ ಇಪತ್ತು ಸಾವಿರಕ್ಕೂ ಅಧಿಕ ಸೋಂಕುಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಜನವರಿ 29 ರ ವರೆಗೂ ಬೆಂಗಳೂರಿನ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ರಾಜ್ಯದಲ್ಲಿ ಜಾರಿಯಲ್ಲಿದ್ದ ವೀಕೆಂಡ್‌ ಕರ್ಪ್ಯೂವನ್ನು ರಾಜ್ಯ ಸರಕಾರ ರದ್ದು ಮಾಡಿತ್ತು. ಇದೀಗ ನೈಟ್‌ ಕರ್ಪ್ಯೂ ರದ್ದು ಮಾಡುವಂತೆ ಒತ್ತಡ ಕೇಳಿಬರುತ್ತಿದೆ. ಜೊತೆಗೆ ಬೆಂಗಳೂರಲ್ಲಿ ಮತ್ತೆ ಶಾಲಾರಂಭಕ್ಕೆ ಶಿಕ್ಷಣ ಇಲಾಖೆ ಸಜ್ಜಾಗಿದೆ. ತಜ್ಞರ ಸಮಿತಿಯ ಸಭೆಯ ವೇಳೆಯಲ್ಲಿಯೇ ಸಚಿವ ಬಿ.ಸಿ.ನಾಗೇಶ್‌ ಅವರು ಶಾಲಾರಂಭಕ್ಕೆ ಅನುಮತಿ ಕೇಳಿದ್ದರು. ಆದರೆ ತಜ್ಞರು ಒಂದು ವಾರ ಕಾದು ನೋಡುವಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ವಾರ ಕಾದು ನೋಡಿರುವ ಇಲಾಖೆ ಮತ್ತೆ ತಜ್ಞರ ವರದಿಗಾಗಿ ಕಾಯುತ್ತಿದೆ.

ಜನವರಿ 28 ( ನಾಳೆ ) ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋವಿಡ್‌ ತಜ್ಞರು, ಅಧಿಕಾರಿಗಳು ಹಾಗೂ ಸಚಿವರ ಜೊತೆಗೆ ಸಭೆ ನಡೆಯಲಿದೆ. ಸಿಎಂ ಬೊಮ್ಮಾಯಿ ಅವರು ಈಗಾಗಲೇ ಶಾಲಾರಂಭ, ನೈಟ್‌ ಕರ್ಪ್ಯೂ ರದ್ದತಿ ಕುರಿತು ತಜ್ಞರಿಂದ ವರದಿ ಕೇಳಿದ್ದಾರೆ. ಒಂದೊಮ್ಮೆ ತಜ್ಞರು ಗ್ರೀನ್‌ ಸಿಗ್ನಲ್‌ ಕೊಟ್ರೆ ಶಾಲಾರಂಭದ ಜೊತೆಗೆ ನೈಟ್‌ ಕರ್ಪ್ಯೂ ರದ್ದಾಗಲಿದೆ. ಇನ್ನು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಸೋಮವಾರದಿಂದಲೇ ಶಾಲೆಗಳನ್ನು ಆರಂಭಿಸುವ ಕುರಿತು ಸುಳಿವು ನೀಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಬಂದ್‌ ಆಗಿದ್ದ ಶಾಲೆಗಳು ಮತ್ತೆ ಆರಂಭಗೊಳ್ಳಲಿವೆ. ಅಂತಿಮ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಶಿಕ್ಷಣ ಸಚಿವರ ಮೇಲೆ ಒತ್ತಡ ಹೇರುತ್ತಿವೆ. ಪ್ರಸಕ್ತ ಶೈಕ್ಷಣಿಕ ವರ್ಷದ ಪರೀಕ್ಷೆಯನ್ನು ಮುಕ್ತಾಯಗೊಳಿಸಿದ್ರೆ ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರೀಯೆ ಆರಂಭಿಸಬಹುದು ಅನ್ನೋ ಲೆಕ್ಕಾಚಾರ ದಲ್ಲಿವೆ ಖಾಸಗಿ ಶಾಲೆಗಳು. ಆದರೆ ಸರಕಾರ ಕೂಡ ಒಂದು ತಿಂಗಳು ಕಳೆಯುತ್ತಿದ್ದಂತೆಯೇ ಪರೀಕ್ಷೆ ನಡೆಸಿ ಬೇಸಿಗೆ ರಜೆ ಘೋಷಣೆಗೆ ಸಜ್ಜಾದಂತೆ ಕಂಡು ಬರುತ್ತಿದೆ.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಧಿಕೃತ ವೇಳಾಪಟ್ಟಿ ಪ್ರಕಟ : ಯಾವ ವಿಷಯಕ್ಕೆ ಯಾವಾಗ ಪರೀಕ್ಷೆ

ಇದನ್ನೂ ಓದಿ : ಮಾರ್ಚ್‌ನಲ್ಲೇ ಬೇಸಿಗೆ ರಜೆ, ಜೂನ್‌ 1 ರಿಂದ ಶಾಲಾರಂಭ : ಹೊಸ ಚಿಂತನೆ ನಡೆಸಿದ ಶಿಕ್ಷಣ ಇಲಾಖೆ

(Education Minister Nagesh gave a hint of starting school from 1st to 9th Class in Bangalore from Monday)

Comments are closed.