1-5ನೇ ತರಗತಿ ಆರಂಭಕ್ಕೆ ಎರಡು ದಿನದಲ್ಲಿ ನಿರ್ಧಾರ : ಪಠ್ಯ ಕಡಿತವಿಲ್ಲ ಎಂದು ಸಚಿವ ಬಿ.ಸಿ.ನಾಗೇಶ್‌

ಬೆಂಗಳೂರು : ರಾಜ್ಯದಲ್ಲಿ ಸದ್ಯ 6 ನೇ ತರಗತಿ ಮೇಲ್ಪಟ್ಟು ಎಲ್ಲಾ ತರಗತಿಗಳು ಆರಂಭಗೊಂಡಿದೆ. ಇನ್ನೊಂದೆಡೆಯಲ್ಲಿ ದಿನವಿಡಿ ಶಾಲಾರಂಭ ಮಾಡಿದ ಬೆನ್ನಲ್ಲೇ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಇದೀಗ 1 ರಿಂ 5ನೇ ತರಗತಿ ವರೆಗಿನ ಶಾಲೆಯನ್ನು ಆರಂಭಿಸುವ ಕುರಿತು ಇನ್ನೆರಡು ದಿನಗಳ ಒಳಗಾಗಿ ಕ್ರಮಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪೂರ್ಣ ಪ್ರಮಾಣದ ಶಾಲಾರಂಭಕ್ಕೆ ಸಂಬಂಧಿಸಿದಂತೆ ಬೇಕಾದ ಎಲ್ಲಾ ಸಿದ್ದತೆಗಳನ್ನೂ ಮಾಡಿಕೊಳ್ಳ ಲಾಗಿದೆ. ಬಿಇಓ, ಡಿಡಿಪಿಐಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಮಂಗಳವಾರ ಮುಖ್ಯಮಂತ್ರಿಗಳ ಜೊತೆಗೆ ಸಭೆಯನ್ನು ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ.

ರಾಜ್ಯದಲ್ಲಿ ಪಠ್ಯಕ್ರಮ ಕಡಿಮೆ ಮಾಡುವ ಬಗ್ಗೆ ಯಾವುದೇ ಯೋಚನೆಯನ್ನು ಮಾಡಿಲ್ಲ. ಇನ್ನೊಂದೆಡೆ ಶನಿವಾರ ಹಾಗೂ ಭಾನುವಾರವೂ ತರಗತಿಗಳು ನಡೆಸುವ ಮೂಲಕ ಪಠ್ಯವನ್ನು ಪೂರ್ಣಗೊಳಿಸುವ ಕುರಿತು ಚಿಂತನೆ ನಡೆದಿದೆ. ಒಂದೊಮ್ಮೆ ಪರೀಕ್ಷೆಗೆ ಅಗತ್ಯವಿದ್ದಲ್ಲಿ ಪಠ್ಯ ಕಡಿತದ ಕುರಿತು ಜನವರಿ ತಿಂಗಳಿನಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ತೀರಾ ಇಳಿಕೆಯನ್ನು ಕಾಣುತ್ತಿದೆ. ಇನ್ನೊಂದೆಡೆಯಲ್ಲಿ ನೆರೆಯ ರಾಜ್ಯಗಳಲ್ಲಿಯೂ ಕೊರೊನಾ ಸೋಂಕಿನ ಪ್ರಮಾಣ ಇಳಿಮುಖ ಕಾಣುತ್ತಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲಾರಂಭವಾಗುವುದು ಬಹುತೇಕ ಖಚಿತ. ಆದರೆ ಮಕ್ಕಳಿಗೆ ಇನ್ನೂ ವ್ಯಾಕ್ಸಿನ್‌ ನೀಡಿಕೆ ಆರಂಭವಾಗದ ಹಿನ್ನೆಲೆಯಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ತಾಂತ್ರಿಕ ಸಮಿತಿ ಒಪ್ಪಿಗೆಯನ್ನು ನೀಡಿದ್ರೆ ರಾಜ್ಯದಲ್ಲಿ ದಸರಾ ರಜೆ ಮುಕ್ತಾಯದ ಬೆನ್ನಲ್ಲೇ ಶಾಲಾರಂಭವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಶಿಕ್ಷಕರ ವರ್ಗಾವಣೆ, ನೇಮಕಾತಿ : ಸಚಿವ ನಾಗೇಶ್‌ ಮಹತ್ವದ ಮಾಹಿತಿ

ಇದನ್ನೂ ಓದಿ : ಶಿಕ್ಷಕರಿಗೆ ಬಿಗ್‌ ಶಾಕ್‌ ಕೊಟ್ಟ ರಾಜ್ಯ ಸರಕಾರ

( The decision in two days for the start of class 1-5 will be decided by the minister, BC Nagesh )

Comments are closed.