PUC Result : ಜುಲೈ ಕೊನೆಯ ವಾರ ದ್ವಿತೀಯ ಪಿಯುಸಿ ಫಲಿತಾಂಶ: ಸಚಿವ ಸುರೇಶ್ ಕುಮಾರ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಯನ್ನು ರದ್ದು ಮಾಡಲಾಗಿತ್ತು. ಇದೀಗ ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ ಹಾಗೂ ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರವನ್ನಿಟ್ಟುಕೊಂಡು ಪಾಸ್‌ ಮಾಡಲು ಮುಂದಾಗಿದೆ. ಈಗಾಗಲೇ ಸಕಲ ಸಿದ್ದತೆ ಗಳನ್ನು ಮಾಡಿಕೊಂಡಿದ್ದು ಜುಲೈ ಕೊನೆಯ ವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪರೀಕ್ಷೆಗೆ ನೊಂದಾಯಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಥಮ ಪಿಯುಸಿ ಪ್ರವೇಶಾವಕಾಶ ನೀಡುವ ನಿಟ್ಟಿನಲ್ಲಿ ಸರಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿಂದು ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವನ್ನು ತುಂಬುವ ಕಾರ್ಯವನ್ನು ಮಾಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ಕಡಿಮೆಯಾದ್ರೆ ಮಾತ್ರವೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದರು. ಇದೀಗ ಕೊರೊನಾ ವೈರಸ್‌ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ನಡೆಸಲು ಮುಂದಾಗಿದ್ದೇವೆ. ಕಳೆದ ಬಾರಿ ಪರೀಕ್ಷೆ ನಡೆಸುವ ಸಂದರ್ಭ ದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ13.2ರಷ್ಟಿತ್ತು, ಆದರೆ ಇದೀಗ ಪಾಸಿಟಿವಿಟಿ ದರ ಶೇ. 1.7ರ ಆಸುಪಾಸಿನಲ್ಲಿದೆ. ಅಲ್ಲದೇ ಈ ಬಾರಿಯ ಪರೀಕ್ಷೆಗೆ ಹೆಚ್ಚುವರಿಯಾಗಿ ಕೊಠಡಿಗಳನ್ನು ಬಳಕೆ ಮಾಡಲಾಗುತ್ತಿದ್ದು, ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಕೇವಲ ಎರಡೇ ದಿನಗಳ ಕಾಲ ಪರೀಕ್ಷೆ ನಡೆಯಲಿರುವುದರಿಂದಾಗಿ ಯಾವುದೇ ಸಮಸ್ಯೆಯೂ ಆಗಲಾರದು. ವಿದ್ಯಾರ್ಥಿ ಗಳು ಕೊರೊನಾ ಭಯವನ್ನು ಬಿಟ್ಟು ಧೈರ್ಯದಿಂದ ಪರೀಕ್ಷೆ ಎದುರಿಸಬೇಕೆಂದು ಕಿವಿಮಾತು ಹೇಳಿದ್ದಾರೆ.

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕಾರ್ಯಕ್ಕೆ ನಿಯೋಜನೆಗೊಂಡಿರುವ 1,33,926 ಸಿಬ್ಬಂದಿಗಳ ಪೈಕಿ 1,30,522 ಸಿಬ್ಬಂದಿಗಳು ಈಗಾಗಲೇ ಕೊರೊನಾ ಮೊದಲ ಲಸಿಕೆಯನ್ನು ಪಡೆದಿದ್ದಾರೆ. ಅಲ್ಲದೇ 48,938 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಒಟ್ಟಾರೆಯಾಗಿ ಶೇ. 98 ರಷ್ಟು ಸಿಬ್ಬಂದಿಗಳು ಈಗಾಗಲೇ ಲಸಿಕೆ ಪಡೆದಿದ್ದು, ಬಾಕಿ ಉಳಿದಿರುವ 3,404 ಸಿಬ್ಬಂದಿಗಳು ಎರಡು ದಿನಗಳ ಒಳಗಾಗಿ ಕೊರೊನಾ ಲಸಿಕೆಯನ್ನು ಪಡೆಯಲಿದ್ದಾರೆ ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಮತ್ತು ಕೋವಿಡ್‌ ತಾಂತ್ರಿಕ ಸಮಿತಿ ಈಗಾಗಲೇ ಪರೀಕ್ಷಾ ಮಾರ್ಗಸೂಚಿಯನ್ನು ನೀಡಿದ್ದು, ಸಿಎಂ ಯಡಿಯೂರಪ್ಪ ಅವರು ಕೂಡ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಸಂಪೂರ್ಣ ಪರೀಕ್ಷೆ ಯನ್ನು ಕೊರೊನಾ ಪರೀಕ್ಷಾ ಮಾರ್ಗಸೂಚಿಯಂತೆಯೇ ಸುರಕ್ಷತಾ ಕ್ರಮಗಳನ್ನು ಕೈಗೊಂಡು ನಡೆಸಲಾಗುತ್ತದೆ. ಇನ್ನು ಈ ಬಾರಿ ಶೈಕ್ಷಣಿಕ ವರ್ಷದ ಕುರಿತು ಹಲವು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

Comments are closed.