ಕರ್ನಾಟಕ ಉಪಚುನಾವಣೆ ಕರ್ತವ್ಯ: 30ಕ್ಕೂ ಅಧಿಕ ಶಿಕ್ಷಕರು ಕೊರೊನಾಗೆ ಬಲಿ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ನಡೆದ ಉಪ ಚುನಾವಣೆ ಶಿಕ್ಷಕ ಸಮುದಾಯಕ್ಕೆ ಶಾಕ್ ಕೊಟ್ಟಿದೆ. ಉಪ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ 30ಕ್ಕೂ ಅಧಿಕ ಶಿಕ್ಷಕರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ.

ಕೊರೊನಾ 2 ನೇ ಅಲೆ ಅಬ್ಬರದ ನಡುವೆಯೂ ರಾಜ್ಯದಲ್ಲಿ ನಡೆದ ಉಪಚುನಾವಣೆ ಇದೀಗ ಶಿಕ್ಷಕರನ್ನು ಬಲಿ ಪಡೆದುಕೊಳ್ಳುತ್ತಿದೆ. ಉಪ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ 30ಕ್ಕೂ ಹೆಚ್ಚು ಶಿಕ್ಷಕರು ಕೊರೊನಾ ಮಹಾಮಾರಿಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ.

ಪ್ರಮುಖವಾಗಿ ರವಿಂದ್ರನಾಥ ಬಶಟ್ಟಿ (58 ವರ್ಷ ), ಸಂಗಪ್ಪ ವಾನೆ (43 ವರ್ಷ) ರಾಜೇಶ್ವರಿ (41 ವರ್ಷ), ಶ್ರೀದೇವಿ (52‌ ವರ್ಷ), ಶಿವಕುಮಾರ್ ಭಾವು (53 ವರ್ಷ) ನರೇಂದ್ರ ಪಾಟೀಲ್ (47‌ವರ್ಷ), ಪ್ರಕಾಶ್ ಲಕ್ಕಶೆಟ್ಟಿ (54 ವರ್ಷ), ಚಂದ್ರಶೇಖರ್ ಗಚ್ಚಿಮಠ (51 ವರ್ಷ), ಎಸ್.ಎಸ್. ಭರಾಟೆ (42 ವರ್ಷ ),  ಪ್ರಕಾಂಶ್ ಮಂತ್ರೆ (36 ವರ್ಷ) ಸೇರಿದಂತೆ ಹಲವು ಶಿಕ್ಷಕರು ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದನ್ನು ಶಿಕ್ಷಣ ಇಲಾಖೆ ಖಚಿತ ಪಡಿಸಿದೆ.

ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರ, ಬೆಳಗಾವಿ ಲೋಕಸಭಾ ಉಪಚುನಾವಣೆ ಮತ್ತು ವಿವಿದೆಡೆ ನಡೆದ ನಗರಸಭೆ ಚುನಾವಣೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಹಲವು ಶಿಕ್ಷಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 30 ಶಿಕ್ಷಕರು ಸಾವನ್ನಪ್ಪಿರೋ ಕುರಿತು ಶಿಕ್ಷಣ ಇಲಾಖೆ ಮಾಹಿತಿಯನ್ನು ನೀಡಿದೆ.

ಶಿಕ್ಷಕರನ್ನು ಶಾಲೆಗಳಲ್ಲಿ ಬೋಧನೆಯ ಕರ್ತವ್ಯ ನಿರ್ವಹಣೆ ಮಾಡಬೇಕಾಗಿದೆ. ಇದರ ಜೊತೆಗೆ ಚುನಾವಣೆ ಹಾಗೂ ಕೊರೊನಾ ಕರ್ತವ್ಯಕ್ಕೂ ಬಳಕೆ ಮಾಡಲಾಗುತ್ತಿದೆ. ಇದೀಗ 30ಕ್ಕೂ ಅಧಿಕ ಶಿಕ್ಷಕರು ಚುನಾವಣಾ ಕರ್ತವ್ಯದಿಂದಲೇ ಸಾವನ್ನಪ್ಪಿದ್ದು, ನೂರಾರು ಶಿಕ್ಷಕರು ಕೊರೊನಾ ಸೋಂಕಿನಿಂದ ತತ್ತರಿಸಿದ್ದಾರೆ.

ಕೊರೊನಾ ಸೋಂಕಿಗೆ ಬಲಿಯಾದ ಶಿಕ್ಷಕರ ಕುಟುಂಬಸ್ಥರು ಕಣ್ಣೀರು ಸುರಿಸುತ್ತಿದ್ದು, ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೊಂದೆಡೆ ಶಿಕ್ಷಕ ಸಮುದಾಯ ಕೂಡ ಆತಂಕಕ್ಕೆ ಒಳಗಾಗಿದೆ. ಸರಕಾರ ಶಿಕ್ಷಕರಿಗೆ ಒತ್ತಡ ರಹಿತ ಕಾರ್ಯನಿರ್ವಹಣೆಯ ಜೊತೆಗೆ ಸೂಕ್ತ ರಕ್ಷಣೆ ಒದಗಿಸುವ ಕಾರ್ಯವನ್ನು ಮಾಡಬೇಕು ಎಂದು ಶಿಕ್ಷಕರು ಆಗ್ರಹಿಸುತ್ತಿದ್ದಾರೆ.

Comments are closed.