ತೌಕ್ಟೇ ಚಂಡ ಮಾರುತ ಅಬ್ಬರ : ಕರಾವಳಿಯಲ್ಲಿ ಭಾರೀ ಮಳೆ, ರೆಡ್ ಅಲರ್ಟ್

ಉಡುಪಿ : ಅರಬ್ಬಿ ಸಮುದ್ರದಲ್ಲಿ ಚೌಕ್ಟೇ ಚಂಡ ಮಾರುತದ ಅಬ್ಬರದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆಯ‌ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬೆಳಗಿನಿಂದಲೇ ಮಳೆ ಸುರಿಯುತ್ತಿದೆ‌. ಕರಾವಳಿ ಯಾದ್ಯಂತ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕಡಲ್ಕೊರೆತ ಉಂಟಾಗಿದೆ. ಸಮುದ್ರ ತೀರದ ನಿವಾಸಿಗಳು ಆತಂಕದಲ್ಲಿದ್ದಾರೆ‌. ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರ ತೀರದಲ್ಲಿ ನೀರಿನ ಮಟ್ಟ ವಿಪರೀತ ಏರಿಕೆಯಾಗಿದೆ. ಕಾಪು ದ್ವೀಪ ಸ್ತಂಭದ ಬಳಿಯ ಬಂಡೆಗೆ ಬೃಹದಾಕಾರದ ಅಲೆ ಅಪ್ಪಳಿಸಿ ನೂರಾರು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಮಲ್ಪೆ‌ ಪಡುಕೆರೆ, ಕಾಪು, ಹೂಡೆ, ಕೋಡಿ, ಬೀಜಾಡಿ,‌ ಮಣೂರು ಪಡುಕೆರೆ, ಕುಂದಾಪುರ‌ ಕೋಡಿ, ಮರವಂತೆ ಭಾಗಗಳಲ್ಲಿ ಕಡಲ್ಕೊರೆತದ ಪ್ರಮಾಣ ಭಾರೀ‌ ಏರಿಕೆಯಾಗಿದೆ.

ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದ ಆಲಿತೋಟದಲ್ಲಿ ನದಿಯ ನೀರು ಕೃಷಿ ಭೂಮಿ ಹಾಗೂ ಮನೆಗಳಿಗೆ ನುಗ್ಗಿ ಅವಾಂತರವನ್ನೇ ಸೃಷ್ಟಿಸಿದೆ. ನಾಳೆಯೂ ಮಳೆಯ ಪ್ರಮಾಣ ಏರಿಕೆಯಾಗುವ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಸಮುದ್ರ ಹಾಗೂ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಎಚ್ಚರದಿಂದ ‌ಇರುವಂತೆ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ.

ಚಂಡ ಮಾರುತದ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳ ಕಾಲ ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆ ಯನ್ನು ಮಾಡಲಾಗಿದೆ. ‌ಮಳೆಯ ಇನ್ನೂ ಎರಡು ದಿನಗಳ ಕಾಲ ಧಾರಾಕಾರವಾಗಿ ಸುರಿಯ ಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

Comments are closed.