CET-2021: ಅಗಸ್ಟ್ 28 ರಿಂದ 30 ರವರೆಗೆ ರಾಜ್ಯದಲ್ಲಿ ಸಿಇಟಿ: 530 ಕೇಂದ್ರಗಳಲ್ಲಿ ನಡೆಯಲಿದೆ ಪರೀಕ್ಷೆ

ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ನಡೆಯುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ ಅಗಸ್ಟ್ 28, 29,30  ರಂದು ನಡೆಯಲಿದ್ದು, ರಾಜ್ಯದಾದ್ಯಂತ ಕೋವಿಡ್ ನಿಯಮಗಳಿಗನುಸಾರವಾಗಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ಸಜ್ಜಾಗಿದೆ.

ರಾಜ್ಯದ ಒಟ್ಟು 530 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ನಿಯಮಗಳಿಗೆ ಅನುಸಾರವಾಗಿ ಪರೀಕ್ಷೆ ನಡೆಯಲಿದ್ದು, 2,01,816 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಎದುರಿಸಲಿದ್ದಾರೆ. ಅಗಸ್ಟ್ 28 ರಂದು ಜೀವಶಾಸ್ತ್ರ ಮತ್ತು ಗಣಿತ, 29 ರಂದು ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ, ಅಗಸ್ಟ್ 30 ರಂದು ಗಡಿನಾಡು ಹಾಗೂ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ  ಪರೀಕ್ಷೆ ನಡೆಯಲಿದೆ.

530 ಪರೀಕ್ಷಾ ಕೇಂದ್ರಗಳ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲಿದ್ದು, 444 ಕೇಂದ್ರಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸಲಿವೆ. ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಹಾಯಕ ಆಯುಕ್ತರ ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ವಿವರಣೆ ನೀಡಿದ್ದಾರೆ.

ಅಗಸ್ಟ್ 30 ರಂದು ನಡೆಯುವ ಕನ್ನಡ ಭಾಷೆಯ ಪರೀಕ್ಷೆಗಾಗಿ 1682 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 6 ಸ್ಥಳಗಳಲ್ಲಿ ಬೆಂಗಳೂರು,ಬೀದರ್,ವಿಜಯಪುರ,ಬಳ್ಳಾರಿ,ಬೆಳಗಾವಿ ಮಂಗಳೂರು ಕೇಂದ್ರದಲ್ಲಿ ನಡೆಯಲಿದೆ.

ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು,  ಪರೀಕ್ಷಾರ್ಥಿಗಳು ಪರೀಕ್ಷೆಗೆ ಅರ್ಧ ಗಂಟೆಗೂ ಮುನ್ನ ಪರೀಕ್ಷಾ ಹಾಲ್ ಗೆ ತಲುಪಬೇಕು. ಬ್ಲೂ ಅಥವಾ ಕಪ್ಪು ಬಾಲ್ ಪೆನ್ ಬಳಸಬೇಕು. ಕೈಗಡಿಯಾರ, ಟ್ಯಾಬ್ಲೇಟ್, ಮೊಬೈಲ್ ಬಳಕೆಗೆ ಅವಕಾಶವಿಲ್ಲ ಎಂದು ಶಿಕ್ಷಣ ಇಲಾಖೆ ಹೇಳಿದೆ.

Comments are closed.