ಶಾಲಾ ಮಕ್ಕಳಿಗೆ ಗುಡ್‌ ನ್ಯೂಸ್ : ರಜಾದಿನ ಹೆಚ್ಚಳ, ಶಾಲಾ ದಿನಗಳಲ್ಲಿ ಕಡಿತ

ಬೆಂಗಳೂರು : ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲೆಗಳಿಗೆ ಈಗಾಗಲೇ ಬೇಸಿಗೆ ರಜೆ ಘೋಷಿಸಲಾಗಿದೆ. ಹೀಗಾಗಿ ಮಕ್ಕಳು ತಮ್ಮ ಬೇಸಿಗೆ ರಜಾದಿನವನ್ನು ಬಹಳಷ್ಟು ಸಂಭ್ರಮದಿಂದ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲೇ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಮುಂದಿನ ವರ್ಷ ಅಂದರೆ 2023-24ರ ಶೈಕ್ಷಣಿಕ ವರ್ಷದಲ್ಲಿ (karnataka Education Academic year 2023-24) ರಜಾಗಳನ್ನು ಹೆಚ್ಚಳ ಮಾಡಲಾಗಿದ್ದು, ಶಾಲಾ ದಿನಗಳಲ್ಲಿ ಕಡಿತ ಮಾಡಲಾಗಿದೆ. ಹೀಗಾಗಿ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೇವಲ 244 ದಿನಗಳ ಮಾತ್ರ ಶೈಕ್ಷಣಿಕ ಚಟುವಟಿಕೆಗಳು ನಡೆಯಲಿವೆ.

ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಮಕ್ಕಳ ಶಾಲಾ ದಿನಗಳ ಸಂಖ್ಯೆಯನ್ನು 26 ದಿನಗಳು ಕಡಿತಗೊಳಿಸಿದೆ. ಹೀಗಾಗಿ ಈ ವರ್ಷ ಒಟ್ಟು 244 ಶಾಲಾ ದಿನಗಳು ಇರಲಿದ್ದು, ಇದರಲ್ಲಿ 180 ದಿನಗಳು ಮಾತ್ರ ಬೋಧನಾ ದಿನಗಳು ನಡೆಯಲಿವೆ ಎಂದು ಮಾರ್ಗಸೂಚಿಗಳು ತಿಳಿಸಿದೆ. ಕಳೆದ ವರ್ಷದಲ್ಲಿ ಹೆಚ್ಚುವರಿಯಾಗಿದ್ದ ಕಲಿಕಾ ಚೇತರಿಕೆ ಈ ವರ್ಷ ಇಲ್ಲದಿರುವುದು ಮತ್ತು ಈ ವರ್ಷ ದಸರಾ ರಜೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಶಾಲಾ ದಿನಗಳು ಕಡಿಮೆ ಆಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದೆರೆ ಈ ಬಾರೀ ಶೈಕ್ಷಣಿಕ ಅವಧಿಯಲ್ಲಿ ಶಾಲಾ ಕರ್ತವ್ಯ ದಿನಗಳು ಭಾರೀ ಕಡಿತಗೊಂಡಿದೆ. ಅದೇ ರೀತಿ ಕಲಿಕಾ ದಿನಗಳಲ್ಲಿಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ, 48 ದಿನಗಳಷ್ಟು ಇಳಿಕೆ ಕಂಡು ಬಂದಿದೆ. 2022-23ರ ಶೈಕ್ಷಣಿಕ ವರ್ಷದಲ್ಲಿ 270 ಕರ್ತವ್ಯದ ದಿನಗಳಿದ್ದವು. ಈ ಮೂಲಕ ಹೆಚ್ಚುವರಿಯಾಗಿ 26 ರಜಾ ದಿನಗಳು ಈ ವರ್ಷ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಿಗಲಿದೆ. ಒಟ್ಟಾರೆಯಾಗಿ ಹಿಂದಿನ ವರ್ಷದ ಶೇ. 74ರಷ್ಟು ದಿನ ಶಿಕ್ಷಣ ಸಂಬಂಧಿ ಚಟುವಟಿಕೆ ನಡೆದಿದ್ದರೆ, ಈ ವರ್ಷ ಶೇ. 67ರಷ್ಟು ದಿನ ನಡೆಯಲಿದೆ.

ಕಳೆದ ಬಾರಿ ಕೋವಿಡ್ ಕಾರಣದಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆಗಿರುವ ಹಿನ್ನಡೆಯನ್ನು ಸರಿದೂಗಿಸುವ ಸಲುವಾಗಿ ಮೇ ತಿಂಗಳ 14ರಿಂದ ಶಾಲಾ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡಿತ್ತು. ಹೀಗಾಗಿ ಹಿಂದಿನ ವರ್ಷ ಮೇ ತಿಂಗಳಲ್ಲಿ 14 ದಿನ ಕಲಿಕಾ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ, ಈ ವರ್ಷ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯುವುದಿಲ್ಲ. ಮೇ 29ರಿಂದ ಶಾಲೆ ಆರಂಭಗೊಳ್ಳಲಿದ್ದು,ಶಾಲಾ ಮಕ್ಕಳಿಗೆ ಹೆಚ್ಚಿನ ದಿನಗಳು ಬೇಸಿಗೆ ರಜೆಯನ್ನು ತಮ್ಮ ಕುಟುಂಬದವರೊಂದಿಗೆ ಕಳೆಯಬಹುದಾಗಿದೆ.

2023-24ರ ಶೈಕ್ಷಣಿಕ ವರ್ಷದಲ್ಲಿ ದಸರಾ ರಜೆ ವಿವರ :
ಕಳೆದ ಶೈಕ್ಷಣಿಕ ವರ್ಷದಲ್ಲಿ ಅಕ್ಟೋಬರ್ 3ರಿಂದ 16ರ ವರೆಗೆ ಅಂದರೆ ಒಟ್ಟು 14 ದಿನ ಮಾತ್ರ ದಸರಾ ರಜೆ ನಿಗದಿ ಪಡಿಸಲಾಗಿತ್ತು. ಆದರೆ ಈ ವರ್ಷ ಅಕ್ಟೋಬರ್ 8ರಿಂದ 25ರ ವರೆಗೆ ಒಟ್ಟು 20 ದಿನ ರಜೆ ಇರಲಿದೆ. ಅದೇ ರೀತಿ ಕಳೆದ ವರ್ಷಕ್ಕೆ ಹೋಲಿಸಿದರೆ ಜೂನ್‌, ಜುಲೈಯಲ್ಲಿ ಒಂದು ದಿನ ಮತ್ತು ಡಿಸೆಂಬರ್‌ನಲ್ಲಿ ಮೂರು ರಜಾ ದಿನ ಹೆಚ್ಚಿದೆ.

ಇದನ್ನೂ ಓದಿ : 2nd PUC Result : ಏಪ್ರಿಲ್ 29 ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಇದನ್ನೂ ಓದಿ : ಬೇಸಿಗೆ ತಾಪಮಾನ ಏರಿಕೆ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ ಸರಕಾರ

2023-24ರ ಶೈಕ್ಷಣಿಕ ವರ್ಷದಲ್ಲಿ 180 ದಿನ ಮಾತ್ರ ಪಾಠ :
ಇನ್ನು ಕಳೆದ ಶೈಕ್ಷಣಿಕ ವರ್ಷದಲ್ಲಿ 228 ಬೋಧನಾ ಕಲಿಕೆ ದಿನಗಳಿದ್ದರೆ, ಈ ವರ್ಷ ಕೇವಲ 180 ಕಲಿಕಾ ದಿನಗಳಿರಲಿವೆ. ಈ ಶೈಕ್ಷಣಿಕ ವರ್ಷದಲ್ಲಿ 244 ಶಾಲಾ ಕರ್ತವ್ಯದ ದಿನಗಳನ್ನು ಸರ್ಕಾರ ನಿಗದಿ ಪಡಿಸಿದೆ. ಇದರಲ್ಲಿ ಬೋಧನಾ – ಕಲಿಕೆ ಪ್ರಕ್ರಿಯೆಗೆ ಕೇವಲ 180 ದಿನ ಉಳಿಯಲಿದೆ. ಉಳಿದಂತೆ ಪರೀಕ್ಷೆಗಳು ಮತ್ತು ಮೌಲ್ಯಾಂಕನ ಪ್ರಕ್ರಿಯೆಗಳಿಗಾಗಿ 26 ದಿನಗಳು, ಪಠ್ಯೇತರ ಚಟುವಟಿಕೆಗಳ / ಪಠ್ಯ ಚಟುವಟಿಕೆಗಳ/ ಸ್ಪರ್ಧೆಗಳ ನಿರ್ವಹಣೆ ಕಾರ್ಯಕ್ಕಾಗಿ 24 ದಿನಗಳು, ಮೌಲ್ಯಮಾಪನ ಮತ್ತು ಫ‌ಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನಗಳು ಮತ್ತು ಶಾಲಾ ಸ್ಥಳೀಯ ರಜೆಗಳು ಎಂದು ನಾಲ್ಕು ದಿನವನ್ನು ನಿಗದಿಪಡಿಸಲಾಗಿದೆ.ಹೀಗಾಗಿ ಈ ವರ್ಷದಲ್ಲಿ ಕೇವಲ 180 ಕಲಿಕಾ ದಿನಗಳಿರಲಿವೆ.

Karnataka Education Academic year : Good news for school children: Increase in holidays, reduction in school days

Comments are closed.