ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ : ರಿಸಲ್ಟ್ ನೋಡಲು ಹೀಗೆ ಮಾಡಿ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ರಾಜ್ಯಾದ್ಯಂತ ಇಂದು 2025-26ನೇ ಸಾಲಿನ ಪ್ರಥಮ ಪಿ.ಯು.ಸಿ (first puc result 2026) ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿದೆ. ಇದೇ ವರ್ಷದ ಪೆಭ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪ್ರಸ್ತುತ ಈ ಪರೀಕ್ಷೆಯ ಫಲಿತಾಂಶವು ಆನ್ಲೈನ್ನಲ್ಲಿ ಲಭ್ಯವಿದೆ.
ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು karresults.nic.in ವೆಬ್ಸೈಟ್ನಲ್ಲಿ ತಮ್ಮ ಜನ್ಮದಿನಾಂಕ ಹಾಗೂ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಆನ್ಲೈನ್ನಲ್ಲಿ ಫಲಿತಾಂಶಗಳು ಲಭ್ಯವಿರುವುದು ಮಾತ್ರವಲ್ಲದೇ, ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶ ಪರೀಕ್ಷಿಸಲು ಅವಕಾಶ ನೀಡಲಾಗಿದೆ.
ತಮ್ಮ ಪ್ರಥಮ ಪಿಯುಸಿ ಮಾರ್ಕ್ಸ್ ಕಾರ್ಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಮಂಡಳಿಯು ಸರಳ ವಿಧಾನಗಳ್ನು ನೀಡಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿ PUC Annual Exam Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಿದೆ. ಇದಾದ ಬಳಿಕ ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಬಳಿಕ ವಿಜ್ಞಾನ, ಕಲೆ ಅಥವಾ ವಾಣಿಜ್ಯ ವಿಭಾಗವನ್ನು ಆಯ್ಕೆಮಾಡಿಕೊಳ್ಳಬೇಕು. ಇದಾದ ಬಳಿಕ ಪರದೆಯಲ್ಲಿ ನಿಮ್ಮ ಫಲಿತಾಂಶ ಪ್ರಕಟಗೊಳ್ಳಲಿದೆ. ಇದನ್ನು ನೀವು ಭವಿಷ್ಯದ ಬಳಕೆಗಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಲಕ್ಷಾಂತರ ವಿದ್ಯಾರ್ಥಿಗಳು ಇಂದು ಫಲಿತಾಂಶ ವೀಕ್ಷಣೆಗೆ ವೆಬ್ಸೈಟ್ಗೆ ಲಾಗಿನ್ ಆಗುವುದರಿಂದ ತಾತ್ಕಾಲಿಕ ತಂತ್ರಾಶದ ಸಮಸ್ಯೆ ಎದುರಾಗಬಹುದು ಎಂದು ಶಿಕ್ಷಣ ಮಂಡಳಿ ತಿಳಿಸಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ದೃತಿಗೆಡದೇ ತಾಳ್ಮೆಯಿಂದ ಫಲಿತಾಂಶಕ್ಕಾಗಿ ಕಾಯಬೇಕು. ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಣೆ ಸಾಧ್ಯವಾಗದೇ ಹೋದಲ್ಲಿ ನೇರವಾಗಿ ನಿಮ್ಮ ಕಾಲೇಜುಗಳಿಗೆ ತೆರಳಿ ಫಲಿತಾಂಶ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ.
ಪರೀಕ್ಷಾ ಅಂಕಗಳ ಮೇಲೆ ಅಸಮಾಧಾನ ಇರುವ ವಿದ್ಯಾರ್ಥಿಗಳಿಗೆ ತಮ್ಮ ಉತ್ತರ ಪತ್ರಿಕೆಯ ಪುನರ್ಪರಿಶೀಲನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಮತ್ತು ಮರು-ಎಣಿಕೆಗೆ ನಿಬಂಧನೆಗಳನ್ನು ನೀಡಲಾಗಿದ್ದು, ಅಭ್ಯರ್ಥಿಗಳು ಕೆಎಸ್ಇಎಬಿ ನಿಗದಿಪಡಿಸಿದ ಸಮಯದೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ವಿವರವಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ? ದಿನಾಂಕ, ವೆಬ್‌ಸೈಟ್ ಮಾಹಿತಿ ಇಲ್ಲಿದೆ ನೋಡಿ
ಈ ನಡುವೆ, ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಪರೀಕ್ಷಾ ಮಂಡಳಿ ತಿಳಿಸಿದೆ. ಈ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಹಿಂದಿನ ಶೈಕ್ಷಣಿಕ ವರ್ಷಗಳ ಮಾದರಿಯನ್ನು ಅನುಸರಿಸಿ ಮುಂದಿನ ಎರಡು ತಿಂಗಳೊಳಗೆ ಅವುಗಳನ್ನು ನಡೆಸುವ ಸಾಧ್ಯತೆಯಿದೆ.
ಹೀಗಾಗಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ದೃತಿಗೆಡದೇ, ಮರುಮೌಲ್ಯಮಾಪನ ಅಥವಾ ಪೂರಕ ಪರೀಕ್ಷೆಗಳ ಮೂಲಕ ಮತ್ತೊಮ್ಮೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಿದೆ. ಈ ಸಂದರ್ಭದಲ್ಲಿ ಉಪನ್ಯಾಸಕರು ಹಾಗೂ ಪೋಷಕರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಬೇಕು ಎಂದು ಶಿಕ್ಷಣ ತಜ್ಞರು ಮನವಿ ಮಾಡಿದ್ದಾರೆ.



