ಸೆಪ್ಟೆಂಬರ್ 1ರಿಂದ 13ರ ವರೆಗೆ ನೀಟ್, ಜೆಇಇ ಪರೀಕ್ಷೆ: ಸುಪ್ರೀಂ ಕೋರ್ಟ್ ಅನುಮತಿ

0

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ನೀಟ್ (ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಮತ್ತು ಜೆಇಇ ( ಜಂಟಿ ಪ್ರವೇಶ ಪರೀಕ್ಷೆ ) ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಮಾತ್ರವಲ್ಲ ನಿಗದಿಯಂತೆಯೇ ಪರೀಕ್ಷೆಯನ್ನು ನಡೆಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಜೆಇಇ ಪರೀಕ್ಷೆ ಸೆಪ್ಟೆಂಬರ್ 1ರಿಂದ 6ರವರೆಗೆ, ನೀಟ್ ಪರೀಕ್ಷೆ ಸೆಪ್ಟೆಂಬರ್ 13ರವರೆಗೆ ನಡೆಯಲಿದೆ.

ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ನೀಟ್ ಹಾಗೂ ಜೆಇಇ ಪರೀಕ್ಷೆಯ ಕುರಿತು ಸಾಕಷ್ಟು ಗೊಂದಲಗಳು ಏರ್ಪಟ್ಟಿತ್ತು. ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಬೇಕೆಂದು 11 ಮಂದಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ ಪರೀಕ್ಷೆಯನ್ನು ಮುಂದೂಡಲು ಸಾಧ್ಯವಿಲ್ಲ. ಯುವ ಜನತೆಯ ವೃತ್ತಿ ಬದುಕನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಕೊರೋನಾ ಇದೆ ಎಂದು ಜೀವನ ನಿಲ್ಲಿಸಲು ಸಾಧ್ಯವಿಲ್ಲ. ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಮುಂದುವರಿಯಬೇಕು. ವಿದ್ಯಾರ್ಥಿಗಳು ಒಂದು ವರ್ಷವಿಡೀ ಹಾಳು ಮಾಡಲು ಸಿದ್ದರಿದ್ದೀರಾ? ಶಿಕ್ಷಣ ವ್ಯವಸ್ಥೆ ಮುಕ್ತವಾಗಬೇಕು. ಕೋವಿಡ್ ಒಂದು ವರ್ಷದವರೆಗೆ ಮುಂದೆ ಹೋಗಬಹುದು. ಮತ್ತೊಂದು ವರ್ಷ ವಿದ್ಯಾರ್ಥಿಗಳು ಕಾಯುತ್ತೀರಾ? ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ದೇಶಕ್ಕೆ ಎಷ್ಟು ನಷ್ಟ ಎಂದು ಗೊತ್ತೇ ನಿಮಗೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ಇಂದು ವಿಚಾರಣೆ ವೇಳೆ ಪ್ರಶ್ನಿಸಿತು.

11 ರಾಜ್ಯಗಳ 11 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಕೊರೋನಾ ಕಡಿಮೆಯಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಮೇಲೆಯೇ ಪರೀಕ್ಷೆ ನಡೆಸಬೇಕೆಂದು ಮತ್ತು ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸುವಂತೆ ಕೂಡ ಒತ್ತಾಯಿಸಿದ್ದರು. ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ನ್ಯಾಯವಾದಿ ಅಲಕ್ ಅಲೋಕ್ ಶ್ರೀವಾಸ್ತವ, ವಿದ್ಯಾರ್ಥಿಗಳು ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪರವಾಗಿ ವಾದ ಮಂಡಿಸಿದ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪರೀಕ್ಷೆ ನಡೆಸಲು ಎಲ್ಲಾ ಮುನ್ನೆಚ್ಚರಿಕೆ ವಹಿಸುವುದಾಗಿ ಹೇಳಿದರು.

Leave A Reply

Your email address will not be published.