NPS Cancel : ಎನ್‌ಪಿಎಸ್‌ ರದ್ದು, ಕೇಂದ್ರ ಸಮಾನ ವೇತನ : ಸಿಎಂ ಬೊಮ್ಮಾಯಿಗೆ ಹೊರಟ್ಟಿ ಪತ್ರ

ಬೆಂಗಳೂರು : ರಾಜ್ಯದಲ್ಲಿ ನೂತನ ಪಿಂಚಣಿಯ ಯೋಜನೆಯನ್ನು (NPS Cancel) ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡುವಂತೆ ಆಗ್ರಹಿಸಿ ಹೋರಾಟಗಳು ನಡೆಯುತ್ತಿವೆ. ಈ ನಡುವಲ್ಲೇ ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಎಸ್.‌ ಹೊರಟ್ಟಿ ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಎನ್‌ಪಿಎಸ್‌ ರದ್ದು ಮಾಡುವುದರ ಜೊತೆಗೆ ಕೇಂದ್ರ ಸಮಾನ ವೇತನವನ್ನು ನೀಡುವಂತೆ ಆಗ್ರಹಿಸಿದ್ದಾರೆ.

ರಾಜಸ್ಥಾನ ಸರಕಾರ ಬಜೆಟ್‌ನಲ್ಲಿ ರಾಜ್ಯ ಸರಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನು ಮುಂದುವರಿಸುವ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ. ಈ ಮೂಲಕ ಸರಕಾರಿ ನೌಕರರ ಭವಿಷ್ಯಕ್ಕೆ ಸುರಕ್ಷತೆಯನ್ನು ಒದಗಿಸಿದೆ. ಜೊತೆಗೆ ನಿವೃತ್ತ ನೌಕರರಿಗೂ ಭವಿಷ್ಯತೆ ಸುಭ್ರತೆಯನ್ನು ಒದಗಿಸಿದೆ. ಅಂತೆಯೇ ಕರ್ನಾಟಕ ರಾಜ್ಯದಲ್ಲಿಯೂ ಡಿನಾಂಕ 2006ರ ಎಪ್ರಿಲ್‌ 1 ರ ನಂತರ ನೇಮಕವಾಗಿರುವ ಸರಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಇದರಿಂದಾಗಿ ಲಕ್ಷಾಂತರ ನೌಕರರಿಗೆ ನಿವೃತ್ತಿಯ ನಂತರ ಯಾವುದೇ ಆರ್ಥಿಕ ಸೌಲಭ್ಯ ದೊರೆಯದೇ ಜೀವನೋಪಾಯಕ್ಕೆ ಕಷ್ಟಸಾಧ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದೀಗ ರಾಜಸ್ಥಾನ ಸರಕಾರದ ಮಾದರಿಯಲ್ಲಿಯೇ ಮಾರ್ಚ್‌ ೪ರಂದು ಮಂಡನೆಯಾಗುವ ಬಜೆಟ್‌ನಲ್ಲಿ ರಾಜ್ಯ ಸರಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ನಿರ್ಧಾರವನ್ನು ಕೈಗೊಳ್ಳಬೇಕು ಎಂದಿದ್ದಾರೆ. ಅಲ್ಲದೇ ರಾಜ್ಯ ಸರಕಾರಿ ನೌಕರರು ಹಾಗೂ ಕೇಂದ್ರ ಸರಕಾರಿ ನೌಕರರ ನಡುವೆ ಇರುವ ವೇತನ ತಾರತಮ್ಯವನ್ನು ನಿವಾರಿಸುವ ಸಲುವಾಗಿ, ೭ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರ ವೇತನದಲ್ಲಿರುವ ತಾರತಮ್ಯಕ್ಕೆ ಅಂತ್ಯ ಹಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ರಾಜ್ಯ ಸರಕಾರಿ ನೌಕರರು ಹಾಗೂ ಅನುದಾನಿತ ಸಂಸ್ಥೆಗಳ ನೌಕರರು ಕೂಡ ಎನ್‌ಪಿಎಸ್‌ ರದ್ದತಿಗೆ ಹಲವು ವರ್ಷಗಳಿಂದಲೂ ಹೋರಾಟವನ್ನು ನಡೆಸುತ್ತಿದ್ದಾರೆ. ಚುನಾವಣೆಗೆ ಮುನ್ನವೇ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎನ್‌ಪಿಎಸ್‌ ರದ್ದು ಮಾಡುವುದಾಗಿ ಭರವಸೆಯನ್ನು ನೀಡಿತ್ತು. ಇದೀಗ ಮುಂದಿನ ಬಾರಿ ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ಈ ಬಜೆಟ್‌ನಲ್ಲಿಯೇ ನೌಕರರ ಬೇಡಿಕೆಯನ್ನು ರಾಜ್ಯ ಸರಕಾರ ಈಡೇರಿಸುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ : ಪ್ರೌಢ, ಪ್ರಾಥಮಿಕ ಶಾಲೆಗಳಿಗೆ ಎಪ್ರಿಲ್‌ 10 ರಿಂದ ಬೇಸಿಗೆ ರಜೆ : ಮೇ 16 ಶಾಲಾರಂಭ

ಇದನ್ನೂ ಓದಿ : ಪರೀಕ್ಷೆ ಗೈರಾದ್ರೆ ಮರು ಪರೀಕ್ಷೆಯಿಲ್ಲ; ಅಂತಿಮ ಪರೀಕ್ಷೆಗೂ ಹಿಜಾಬ್‌ ಧರಿಸಲು ಅವಕಾಶವಿಲ್ಲ : ಸಚಿವ ಬಿ.ಸಿ.ನಾಗೇಶ್‌

( NPS cancel, Central Equal Pay, Basavaraj Horatti Letter to CM Basavaraj Bommai)

Comments are closed.