ಕೊರೊನಾ ಹಾಟ್ ಸ್ಪಾಟ್ ಆಗುತ್ತಿದೆ ಶಾಲೆ, ಕಾಲೇಜು, ಹಾಸ್ಟೆಲ್ ..! ಮೌನವಹಿಸಿದೆ ಶಿಕ್ಷಣ ಇಲಾಖೆ

ಬೆಂಗಳೂರು : ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಆತಂಕವನ್ನು ಸೃಷ್ಟಿಸುತ್ತಿದೆ. ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಶಿಕ್ಷಣ ಸಂಸ್ಥೆಗಳೇ ಕೊರೊನಾ ಹಾಟ್ ಸ್ಪಾಟ್ ಆಗಿ ಪರಿವರ್ತನೆ ಹೊಂದುತ್ತಿದೆ. ಆದರೆ ಸರಕಾರ, ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ.

ಕೊರೊನಾ ವೈರಸ್ ಸೋಂಕಿನ ಪ್ರಮಾಣದಲ್ಲಿ ಕೊಂಚ ಇಳಿಮುಖ ವಾಗುತ್ತಲೇ ರಾಜ್ಯ ಸರಕಾರ ಶಾಲೆ, ಕಾಲೇಜುಗಳ ಆರಂಭಕ್ಕೆ ಅನುಮತಿಯನ್ನು ಕೊಟ್ಟಿತ್ತು. ಆದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕೇರಳ, ಮಹಾರಾಷ್ಟ್ರಗಳಲ್ಲಿ ಕೊರೊನಾ ಎರಡನೇ ಕಾಣಿಸಿಕೊಂಡಿದ್ದರೂ ಸುಮ್ಮನಾಗಿದ್ದ ಸರಕಾರ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಕಾಣಿಸಿಕೊಳ್ಳುತ್ತಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳುತ್ತಿದೆ.

ಶಾಲೆ, ಕಾಲೇಜುಗಳನ್ನು ಆರಂಭಿಸಿರುವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಹಾಗೂ ಉಪನ್ಯಾಸಕರನ್ನು ಕೊರೊನಾ ತಪಾಸಣೆಗೆ ಒಳಪಡಿಸುವಲ್ಲಿ ವಿಫಲವಾಗಿದೆ. ಆರಂಭ ಶೂರತ್ವವನ್ನು ಹೊರತು ಪಡಿಸಿದ್ರೆ ನಂತರದ ದಿನಗಳಲ್ಲಿ ಶಾಲೆ, ಕಾಲೇಜು, ಹಾಸ್ಟೆಲ್ ಗಳಲ್ಲಿ ಕೊರೊನಾ ನಿಯಮಗಳನ್ನೇ ಗಾಳಿಗೆ ತೂರಲಾಗಿತ್ತು. ಆದ್ರೀಗ ಕಾಲೇಜು, ಹಾಸ್ಟೆಲ್ ಗಳೇ ಕೊರೊನಾ ಹಾಟ್ ಸ್ಪಾಟ್ ಆಗಿ ಪರಿವರ್ತನೆಗೊಂಡಿದೆ.

ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸುತ್ತಲೇ ನೂರಾರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಅಷ್ಟೇ ಅಲ್ಲಾ ಪರೀಕ್ಷೆಯ ನಂತರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೂ ಏರಿಕೆಯಾಗಬಹುದೆನ್ನುವ ಆತಂಕ ನಿರ್ಮಾಣವಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಅಷ್ಟೇ ಅಲ್ಲಾ ಎಲ್ಲಾ ಜಿಲ್ಲೆಗಳಲ್ಲಿಯೂ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿದೆ. ಇನ್ನು ರಾಜ್ಯದಲ್ಲಿ ಕೊರೊನಾ ತಪಾಸಣೆಯ ಪ್ರಮಾಣವನ್ನು ಹೆಚ್ಚಳ ಮಾಡಿದ್ರೆ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ತಜ್ಞರ ಪ್ರಕಾರ ಮುಂದಿನ ನಾಲ್ಕು ವಾರಗಳಲ್ಲಿ ಕೊರೊನಾ ಎರಡನೇ ಅಲೆಯ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಕಳೆದ ಬಾರಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಲೇ ಎಚ್ಚೆತ್ತುಕೊಳ್ಳದ ಶಿಕ್ಷಣ ಇಲಾಖೆ ಅಂತಿಮ ಹಂತದಲ್ಲಿ ವಿದ್ಯಾರ್ಥಿಗಳನ್ನು ಪೋಷಕರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ರಾಜ್ಯದಲ್ಲಿ ಎರಡನೇ ಅಲೆಯ ಆತಂಕ ಸೃಷ್ಟಿಯಾಗಿದ್ದರೂ ಕೂಡ ಶಿಕ್ಷಣ ಇಲಾಖೆ ಮತ್ತದೇ ನಿರ್ಲಕ್ಷ್ಯವನ್ನು ವಹಿಸುತ್ತಿದೆ. ಶಾಲೆ, ಕಾಲೇಜುಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದರೂ ಕೂಡ ರಾಂಡಮ್ ಆಗಿ ಟೆಸ್ಟ್ ಮಾಡುವ ಕಾರ್ಯ ನಡೆಯುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದರೂ ಕೂಡ ಅದನ್ನು ಆರೋಗ್ಯ ಇಲಾಖೆಯ ಗಮನಕ್ಕೆ ಬಾರದಂತೆ ಮುಚ್ಚಿಡುವ ಕಾರ್ಯ ಬೆಳಕಿಗೆ ಬರುತ್ತಿದೆ.

ತಡವಾಗಿ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದರೂ ಕೂಡ ಪರೀಕ್ಷಾ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿತ್ತು. ಒಂದೊಮ್ಮೆ ಎರಡನೇ ಅಲೆಯ ತೀವ್ರತೆ ಹೆಚ್ಚಾದ್ರೆ, ಈ ಬಾರಿಯೂ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಅತಂತ್ರ ಸ್ಥಿತಿಗೆ ಸಿಲುಕುವ ಸಾಧ್ಯತೆಗಳೇ ಹೆಚ್ಚು. ಈ ನಿಟ್ಟಿನಲ್ಲಿಯೂ ಸರಕಾರ ಚಿಂತೆನ ನಡೆಸಬೇಕು ಅಂತಾ ಕೆಲ ಪೋಷಕರು ಆಗ್ರಹಿಸುತ್ತಿದ್ದಾರೆ.

Comments are closed.