ಶಾಲೆಗಳಲ್ಲಿನ್ನು 2 ಶಿಫ್ಟ್ ನಲ್ಲಿ ತರಗತಿ : ಶೈಕ್ಷಣಿಕ ವರ್ಷದಿಂದಲೇ ಹಲವು ಬದಲಾವಣೆ

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಶಿಕ್ಷಣ ಪದ್ದತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶಾಲೆಗಳನ್ನು ನಡೆಸಲೇ ಬೇಕಾಗಿರುವ ಅನಿವಾರ್ಯತೆಯಲ್ಲಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ 2 ಶಿಫ್ಟ್ ಗಳಲ್ಲಿ ಕಾರ್ಯನಿರ್ವಹಿಸಲು ವ್ಯವಸ್ಥೆ ಕಲ್ಪಿಸುವಂತೆ ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದಲೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಶಾಲಾ ಅವಧಿಯಲ್ಲಿಯೂ ಮಾರ್ಪಾಡು ಮಾಡಿದೆ. ಪ್ರತಿದಿನ ಬೆಳಗ್ಗೆ 7.50ರಿಂದ ಮಧ್ಯಾಹ್ನ 12.20ರವರೆಗೆ ಮೊದಲನೇ ಪಾಳಿ ಮತ್ತು ಮಧ್ಯಾಹ್ನ 12.10ರಿಂದ ಸಂಜೆ 5ರವರೆಗೆ ಎರಡನೇ ಪಾಳಿ ತರಗತಿಗಳನ್ನು ನಡೆಸಬೇಕು. ಇದಕ್ಕೆ ಅನುಗುವಾಗಿ ಶಾಲೆಗಳು ವೇಳಾ ಪಟ್ಟಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕು. ಶಿಕ್ಷಕರು ಕೂಡ ವೇಳಾಪಟ್ಟಿಯಂತೆ ಒಂದು ಪಾಳಿಯಲ್ಲಿ ಮಾತ್ರ ಕೆಲಸ ಮಾಡಬಹುದು ಎಂದು ಸೂಚಿಸಿದೆ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕೊಠಡಿಗಳ ಕೊರತೆಯಿರುವ ಶಾಲೆಗಳಲ್ಲಿ ಪಾಳಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಒಂದು ಬೇಂಚ್ ನಲ್ಲಿ ಕೇವಲ ಮೂರು ವಿದ್ಯಾರ್ಥಿಗಳು ಕುಳಿತುಕೊಳ್ಳಲು ಮಾತ್ರವೇ ಅವಕಾಶವಿದ್ದು, ಕೊಠಢಿಗಳ ಕೊರತೆಯನ್ನು ಸರಿದೂಗಿಸಿಕೊಳ್ಳಲು ಪಿಯುಸಿ ತರಗತಿ ಕೊಠಡಿಗಳು, ಮುಚ್ಚಲ್ಪಟ್ಟ ಶಾಲೆಗಳ ಕಟ್ಟಡಗಳನ್ನೂ ಕೂಡ ಬಳಸಿಕೊಳ್ಳಬಹುದಾಗಿದೆ ಎಂದು ಇಲಾಖೆ ಸೂಚಿಸಿದೆ.
ಇನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರಯಾಣ ಮತ್ತು ಭೋಜನದ ಸಮಸ್ಯೆಯಾಗದಂತೆ ವೇಳಾಪಟ್ಟಿಯನ್ನು ಸಿದ್ದಪಡಿಸಲು ಆಯಾಯ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಗಳಿಗೆ ಅಧಿಕಾರ ನೀಡಲಾಗಿದೆ. ಇನ್ನು ಖಾಸಗಿ ಹಾಗೂ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗೆ ಸಂಬಂಧಪಟ್ಟ ಶಾಲೆಗಳಲ್ಲಿ ಹಾಗೂ ಶಾಲಾ ವಾಹನಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹೊಣೆಯನ್ನು ಶಾಲಾ ಆಡಳಿತ ಮಂಡಳಿಗಳಿಗೆ ನೀಡಲಾಗಿದೆ.

ಬದಲಾಯ್ತು ವೇಳಾಪಟ್ಟಿ !
ಮೊದಲನೇ ಪಾಳಿ :

ಬೆಳಗ್ಗೆ 7.50 ರಿಂದ 8 (ಪ್ರಾರ್ಥನೆ ) , 8 ರಿಂದ 9.20 ರವರೆಗೆ ಎರಡು ತರಗತಿ, 9.20 ರಿಂದ 9.40 ರವರೆಗೆ ವಿರಾಮ, 9.40 ರಿಂದ 12.20 ರವರೆಗೆ ನಾಲ್ಕು ತರಗತಿಗಳು.
ಎರಡನೇ ಪಾಳಿ :
ಮಧ್ಯಾಹ್ನ 12.10ರಿಂದ 12.40ರವರೆಗೆ ಪ್ರಾರ್ಥನೆ. 12.30ರಿಂದ 1.50ರವರೆಗೆ ಎರಡು ತರಗತಿಗಳು, ಮಧ್ಯಾಹ್ನ 1.50ರಿಂದ 2.20ರವರೆಗೆ ಊಟದ ವಿರಾಮ, 2.20ರಿಂದ ಸಂಜೆ 5ರವರೆಗೆ ನಾಲ್ಕು ತರಗತಿಗಳು.

ಮಾಸ್ಕ್ ಬಳಕೆ ಕಡ್ಡಾಯ :
ಮುಂಜಾನೆ ಶಾಲೆಗಳಲ್ಲಿ ಪ್ರಾರ್ಥನೆ ನಡೆಯುವ ವೇಳೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಊಟದ ಮುನ್ನ ಹಾಗೂ ನಂತರ ಮತ್ತು ಶೌಚಾಲಯ ಬಳಸಿದ ನಂತರ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಊಟದ ಸಮಯ ಮತ್ತು ಆಟದ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚನೆ ನೀಡಬೇಕು ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ. ವಾರದಲ್ಲಿ ಈ ಹಿಂದೆ ನಡೆಸುತ್ತಿದ್ದ ದೈಹಿಕಶಿಕ್ಷಣ, ಚಿತ್ರಕಲೆ/ಸಂಗೀತ/ವೃತ್ತಿ ಶಿಕ್ಷಣ, ಸಹ ಪಠ್ಯಕ್ರಮ ಚಟುವಟಿಕೆ, ಗ್ರಂಥಾಲಯ/ಗಣಕ ವಿಷಯದ ತರಗತಿಗಳನ್ನು ಕಡಿತಗೊಳಿಸಲಾಗುವುದು. ಇದರಿಂದ ವಾರದಲ್ಲಿ ನಡೆಯುತ್ತಿದ್ದ ಒಟ್ಟು 45 ತರಗತಿಗಳನ್ನು 36ಕ್ಕೆ ಕಡಿತಗೊಳಿಸಲಾಗುವುದು. ಶಿಕ್ಷಕರ ಕೊರತೆಯಿದ್ದಲ್ಲಿ ಸ್ಥಳೀಯವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.

Leave A Reply

Your email address will not be published.