School Reopen ಗೆ ಖಾಸಗಿ ಶಾಲೆಗಳ ಒತ್ತಡ, ಲಸಿಕೆ ಪಡೆಯದ ಮಕ್ಕಳ ಮೇಲೆ ಪ್ರಯೋಗ : ಸರಕಾರದ ವಿರುದ್ದ ಪೋಷಕರ ಆಕ್ರೋಶ

ಬೆಂಗಳೂರು : ರಾಜ್ಯದಲ್ಲಿ ಸದ್ಯ ಕೊರೊನಾ ಮಹಾಸ್ಪೋಟವೇ ಸಂಭವಿಸಿದೆ. ಆರೋಗ್ಯ ಸಚಿವರೇ ಹೇಳಿದಂತೆ ಜನವರಿ ಅಂತ್ಯ ಅಥವಾ ಫೆಬ್ರವರಿ ಆರಂಭದಲ್ಲಿ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆ. ಕೊರೊನಾ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್‌ ಮಾಡಲಾಗಿದೆ. ರಾಜ್ಯದಾದ್ಯಂತ ಶಾಲೆ ಕ್ಲೋಸ್‌ ಮಾಡುವ ಕುರಿತು ಆಗ್ರಹ ಕೇಳಿಬರುತ್ತಿದೆ. ಆದರೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಮಾತ್ರ ಬಂದ್‌ ಆಗಿರುವ ಶಾಲೆಯನ್ನು ತೆರೆಯುವಂತೆ ಒತ್ತಡ ಹೇರುತ್ತಿದ್ದಾರೆ. ಜೊತೆಗೆ ಶಿಕ್ಷಣ ಸಚಿವರು ಕೂಡ ಶಾಲಾರಂಭಕ್ಕೆ (School Reopen) ಒಲವು ತೋರಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸರಕಾರ, ಶಿಕ್ಷಣ ಸಚಿವರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ರಾಜ್ಯದಲ್ಲಿ ನಿತ್ಯವೂ 40 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯದಾದ್ಯಂತ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿದೆ. ನೆರೆಯ ಮಹಾರಾಷ್ಟ್ರ, ಕೇರಳದಲ್ಲಿಯೂ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿದೆ. ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ನಿತ್ಯವೂ ಒಂದೂವರೆ ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಸದ್ಯದ ಸ್ಥಿತಿಯನ್ನು ಅವಲೋಕಿಸಿದ್ರೆ ರಾಜ್ಯದಲ್ಲಿ ನಿತ್ಯವೂ ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

ಅದ್ರಲ್ಲೂ ರಾಜ್ಯದ ಶಾಲೆ, ಕಾಲೇಜುಗಳಲ್ಲಿ ಕೊರೊನಾ ವೈರಸ್‌ ಸೋಂಕು ತಾಂಡವವಾಡುತ್ತಿದೆ. ಬಹುತೇಕ ಶಾಲೆಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ವಿದ್ಯಾರ್ಥಿಗಳಲ್ಲಿ ಜ್ವರ, ಶೀತ, ಕೆಮ್ಮ ಸೇರಿದಂತೆ ಕೊರೊನಾ ಸೋಂಕಿನ ಲಕ್ಷಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಕೊರೊನಾ ಲಕ್ಷಣ ಇರುವ ಮಕ್ಕಳನ್ನು ಶಾಲೆಗಳಲ್ಲಿ ಕೊರೊನಾ ಟೆಸ್ಟ್‌ಗೆ ಒಳಪಡಿಸುತ್ತಿಲ್ಲ. ಶಿಕ್ಷಕರು ಕೊರೊನಾ ಸೋಂಕಿಗೆ ಒಳಗಾಗಿದ್ರೂ ಕೂಡ ಮಕ್ಕಳನ್ನು ತಪಾಸಣೆಗೆ ಒಳಪಡಿಸದೇ ಇರುವುದು ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಮಕ್ಕಳ ತಜ್ಞರು ಹೇಳುವಂತೆ ಜ್ವರದ ಲಕ್ಷಣ ಇರುವ ಮಕ್ಕಳನ್ನು ತಪಾಸಣೆಗೆ ಒಳಪಡಿಸಿದ್ರೆ ಕೊರೊನಾ ಪಾಸಿಟಿವ್‌ ಬರುತ್ತಿದೆ ಅನ್ನೋ ಮಾಹಿತಿಯನ್ನು ನೀಡಿದ್ದಾರೆ.

ಕೊರೊನಾ ವೈರಸ್‌ ಸೋಂಕು ಈಗಾಗಲೇ ಸಮುದಾಯಕ್ಕೆ ಹರಡಿದೆ. 18 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ಲಸಿಕೆಯನ್ನು ನೀಡಲಾಗಿದ್ದು, ಕೊರೊನಾ ಸೋಂಕು ಬಂದರೂ ಕೂಡ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಮಕ್ಕಳಿಗೆ ಇದುವರೆಗೂ ಲಸಿಕೆಯನ್ನು ನೀಡಿಲ್ಲ. ಒಂದೊಮ್ಮೆ ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಎದುರಾದ್ರೆ ರಾಜ್ಯ ಸರಕಾರಕ್ಕೆ ಪರಿಸ್ಥಿತಿಯನ್ನು ನಿಯಂತ್ರಣ ಮಾಡುವುದು ಕಷ್ಟಕರವಾಗಬಹುದು. ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿಯೂ ಸಾಕಷ್ಟು ಸಾವು ನೋವುಗಳು ಸಂಭವಿಸಿತ್ತು. ಆದರೆ ಶಾಲೆ, ಕಾಲೇಜುಗಳು ಬಂದ್‌ ಆಗಿದ್ರಿಂದಾಗಿ ಮಕ್ಕಳು ಹೆಚ್ಚಾಗಿ ಕೊರೊನಾ ಸೋಂಕಿಗೆ ತುತ್ತಾಗಿಲ್ಲ. ಆದ್ರೀಗ ಶಾಲೆಗಳು ಆರಂಭವಾದ ನಂತರದಲ್ಲಿ ಸೋಂಕಿನ ಪ್ರಮಾಣ ಏರಿಕೆಯನ್ನು ಕಾಣುತ್ತಿದೆ. ಮಕ್ಕಳಿಂದಲೇ ಪೋಷಕರಿಗೂ ಇದೀಗ ಸೋಂಕು ಬಹುಬೇಗನೆ ವ್ಯಾಪಿಸುತ್ತಿದೆ.

ವೈದ್ಯಕೀಯವಾಗಿ ಮುಂದುವರಿದಿರುವ ಅಮೇರಿಕಾದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಚೀನಾದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದರೂ ಕೂಡ ಬಹುತೇಕ ಕಡೆಗಳಲ್ಲಿ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಶಾಲೆಗಳನ್ನು ಬಂದ್‌ ಮಾಡಲಾಗಿದೆ. ಭಾರತದಲ್ಲಿ ಇದೀಗ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ಆದರೆ ಪುಟಾಣಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಕಾರ್ಯ ಆರಂಭವಾಗಿಲ್ಲ. ಆದ್ರೂ ಕರ್ನಾಟಕ ಸರಕಾರ ಹಾಗೂ ಶಿಕ್ಷಣ ಇಲಾಖೆ ಬಂದ್‌ ಆಗಿರುವ ಶಾಲೆಗಳನ್ನು ತೆರೆಯಲು ಮುಂದಾಗಿದೆ. ಶಿಕ್ಷಣ ಇಲಾಖೆ, ಸಚಿವರು ಮಾರ್ಗಸೂಚಿ ಹೊರಡಿಸುತ್ತಿದ್ದರೂ ಕೂಡ ಶಾಲೆಗಳಲ್ಲಿ ತಮ್ಮ ಆದೇಶ ಪಾಲನೆ ಆಗುತ್ತಿದೆಯಾ ಅನ್ನೋ ಬಗ್ಗೆಯೂ ಗಮನ ಹರಿಸುತ್ತಿಲ್ಲ. ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆಯ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಶಾಲೆಗಳಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದರೂ ಕೂಡ ಖಾಸಗಿ ಶಾಲೆಗಳು ಸೋಂಕಿತ ಮಕ್ಕಳನ್ನು ಮನೆಗೆ ಕಳುಹಿಸುವ ಕಾರ್ಯ ಮಾಡುತ್ತಿದೆ. ಆದರೆ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸುತ್ತಿಲ್ಲ. ಜೊತೆಗೆ ಹಲವು ಶಾಲೆಗಳು ಕೊರೊನಾ ಸೋಂಕಿತ ಪ್ರಕರಣಗಳನ್ನೇ ಮುಚ್ಚಿಡುವ ಕಾರ್ಯವನ್ನು ಮಾಡುತ್ತಿವೆ.

ಶಾಲೆ, ಕಾಲೇಜುಗಳಲ್ಲಿ ಶಿಕ್ಷಣ ಇಲಾಖೆ ವಹಿಸುತ್ತಿರುವ ನಿರ್ಲಕ್ಷ್ಯದಿಂದಲೇ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಶಾಲೆಗಳನ್ನು ಆರಂಭಿಸಲು (School Reopen) ತೋರುವ ಆಸಕ್ತಿಯನ್ನು ಕೊರೊನಾ ನಿಯಂತ್ರಣಕ್ಕೆ ತೋರಿಸುತ್ತಿಲ್ಲ. ತಮ್ಮ ಆದೇಶಪಾಲನೆ ಆಗದೇ ಇದ್ರೂ ಮೌನವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಚಿವರು ಹಾಗೂ ಸರಕಾರವನ್ನು ಪೋಷಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳು, ಶಿಕ್ಷಕರು ಮಾಸ್ಕ್‌ ಧರಿಸುತ್ತಿಲ್ಲ, ರಾಜ್ಯ ಸರಕಾರದ ನಿಯಮ ಪಾಲನೆಯಾಗುತ್ತಿಲ್ಲ. ಆದರೂ ಲಸಿಕೆ ಪಡೆಯದ ಮಕ್ಕಳ ಮೇಲೆ ಪ್ರಯೋಗ ನಡೆಸಲಾಗುತ್ತಿದೆ. ಹೀಗಾಗಿ ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿಯುವ ಬದಲು ಮಕ್ಕಳ ರಕ್ಷಣೆಗೆ ಸಚಿವರು ಆಧ್ಯತೆ ನೀಡುವ ಕಾರ್ಯವನ್ನು ಮಾಡಬೇಕಾಗಿದೆ.

ಇನ್ನು ರಾಜ್ಯದಲ್ಲಿ ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್‌ ದಾಖಲಾದ್ರೆ ಶಾಲೆಗಳನ್ನು ಬಂದ್‌ ಮಾಡಿ ಆನ್‌ಲೈನ್‌ ತರಗತಿಗಳನ್ನು ಆರಂಭಿಸುವಂತೆ ತಜ್ಞರು ರಾಜ್ಯ ಸರಕಾರಕ್ಕೆ ಈ ಹಿಂದೆಯೇ ವರದಿಯನ್ನು ಸಲ್ಲಿಸಿದ್ದಾರೆ. ಆದರೆ ರಾಜ್ಯ ಸರಕಾರ ತಜ್ಞರ ಸಲಹೆಯನ್ನು ಧಿಕ್ಕರಿಸಿ, ಶಾಲೆಗಳನ್ನು ಮುಂದುವರಿಸಿದೆ ಅನ್ನೋ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇನ್ನೊಂದೆಡೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ, ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ ಕನಿಷ್ಠ 15 ರಿಂದ 20 ದಿನಗಳ ಕಾಲ ಶಾಲೆಗಳನ್ನು ಬಂದ್‌ ಮಾಡುವುದು ಸೂಕ್ತ ಅನ್ನೋ ಸಲಹೆಯನ್ನು ಕೊಟ್ಟಿದ್ದಾರೆ.

ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಬಹುತೇಕ ಪಠ್ಯಗಳು ಪೂರ್ಣಗೊಂಡಿವೆ. ಮುಂದಿನ ಒಂದೆರಡು ತಿಂಗಳಲ್ಲಿ ಪರೀಕ್ಷೆ ನಡೆದು ಬೇಸಿಗೆ ರಜೆ ಆರಂಭವಾಗಲಿದೆ. ರಾಜ್ಯದಲ್ಲಿ ಚಳಿಯ ಪ್ರಮಾಣ ಹೆಚ್ಚುತ್ತಿದ್ದು, ಜ್ವರದ ಲಕ್ಷಣ ಹೆಚ್ಚಿನ ಮಕ್ಕಳಲ್ಲಿ ಪತ್ತೆಯಾಗುತ್ತಿದೆ. ಹೀಗಾಗಿ ಲಸಿಕೆ ಪಡೆಯದ ಮಕ್ಕಳ ಬಗ್ಗೆ ಜಾಗರೂಕತೆ ವಹಿಸಲೇಬೇಕಾಗಿದೆ. ಸರಕಾರ, ಶಿಕ್ಷಣ ಸಚಿವರು ಖಾಸಗಿ ಒತ್ತಡಕ್ಕೆ ಮಣಿದಿದ್ರೆ ಆದ್ರೆ ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸಿದ್ರೆ ಹೊಣೆಗಾರ ಬೇಕಾಗಿದೆ. ಇನ್ನೊಂದೆಡೆಯಲ್ಲಿ ಲಸಿಕೆ ಪಡೆಯದ ಮಕ್ಕಳನ್ನೇ ಶಾಲೆಯಲ್ಲಿ ಕೂರಿಸಿರುವಾಗ ನೈಟ್‌ ಕರ್ಪ್ಯೂ, ವೀಕೆಂಡ್‌ ಕರ್ಪ್ಯೂ ಯಾಕೆ ಜಾರಿ ಮಾಡಿದ್ದೀರಿ ಅಂತಾ ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ : PUC 2022 Exam : ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಇದನ್ನೂ ಓದಿ : Coastal Corona : ಕರಾವಳಿಯಲ್ಲಿ ಕೊರೊನಾ ಹೆಚ್ಚಳಕ್ಕೆ ಶಾಲೆಗಳೇ ಕಾರಣ : ಖಾಸಗಿ ಒತ್ತಡ, ಶಾಲೆ ಬಂದ್‌ ಮಾಡಲು ಸಚಿವರೇ ಅಡ್ಡಿ

(School Reopen Pressure of Private Schools, Experiment on Non-Vaccine Children, Parental Outrage against Karnataka Government)

Comments are closed.