ರಾಜ್ಯದಲ್ಲಿ ಶಾಲೆಗಳ ಪುನರಾರಂಭ ! ಸೆ.30ರ ಒಳಗೆ ಶಾಲಾ ಶುಲ್ಕ ಪಾವತಿ ಕಡ್ಡಾಯ, ಪ್ರವೇಶಾತಿಯ ಕುರಿತು ಮಹತ್ವದ ಆದೇಶ

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆಗಳು ಬಾಗಿಲು ಮುಚ್ಚಿ 5 ತಿಂಗಳು ಕಳೆದಿದೆ. ಶಿಕ್ಷಣ ಇಲಾಖೆ ನಾನಾ ಮಾರ್ಗಗಳ ಮೂಲಕ ಮಕ್ಕಳನ್ನು ಸಂಪರ್ಕಿಸಿ ಶಿಕ್ಷಣ ಒದಗಿಸುವ ಕಾರ್ಯವನ್ನು ಮಾಡುತ್ತಿದೆ. ಈ ನಡುವಲ್ಲೇ ಪ್ರಸಕ್ತ ಶೈಕ್ಷಣಿಕ ವರ್ಷಾರಂಭದ ಕುರಿತು ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಸೆಪ್ಟೆಂಬರ್ 30ರ ಒಳಗಾಗಿ ಮಕ್ಕಳನ್ನು ಶಾಲೆಗೆ ಸೇರಿಸಿ ಶುಲ್ಕ ಪಾವತಿಸುವಂತೆ ಆದೇಶಿಸಿದೆ.

ರಾಜ್ಯದಲ್ಲಿನ ಶಾಲೆಗಳಲ್ಲಿ ಈಗಾಗಲೇ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಸರಕಾರಿ, ಅನುದಾನಿತ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಕ್ತಾಯವನ್ನು ಕಂಡಿದೆ. ಆದರೆ ಬಹುತೇಕ ಪೋಷಕರು ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.

ಈ ಹಿನ್ನೆಲೆಯಲ್ಲೀಗ ಶಿಕ್ಷಣ ಇಲಾಖೆ ಪ್ರವೇಶ ಪ್ರಕ್ರಿಯೆ, ಶಾಲಾ ಶುಲ್ಕ ಪಾವತಿಯ ಕುರಿತು ಆದೇಶ ಹೊರಡಿಸಿದ್ದು, ಪೋಷಕರು ಪ್ರಥಮ ಕಂತಿನ ಶುಲ್ಕ ಸಂಗ್ರಹಿಸಿ 2020-21 ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿದೆ. ಜೊತೆಗೆ ಹೆಚ್ಚಿನ ಶುಲ್ಕವನ್ನು ಪಡೆಯದೇ ಕಂತುಗಳ ರೂಪದಲ್ಲಿ ಶುಲ್ಕ ಪಾವತಿಸಲು ಅವಕಾಶ ನೀಡುವಂತೆಯೂ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಿನಿಂದಲೇ ಶಾಲೆಗಳಿಗೆ ಬೀಗ ಹಾಕಲಾಗಿದೆ. ಈಗಾಗಲೇ 5 ತಿಂಗಳ ಕಾಲ ಮಕ್ಕಳು ಮನೆಯಲ್ಲಿಯೇ ಉಳಿದುಕೊಂಡಿದ್ದರಿಂದಾಗಿ ಶೈಕ್ಷಣಿಕ ಚಟುವಟಿಕೆಯಿಂದ ದೂರವಾಗಿದ್ದಾರೆ. ಅಲ್ಲದೇ ಕೊರೊನಾ ಹಿನ್ನೆಲೆಯಲ್ಲಿ ಭೌತಿಕವಾಗಿ ಶಾಲೆಗಳ ಪುನರಾರಂಭದ ಕುರಿತು ಅನಿಶ್ಚಿತತೆ ಮುಂದುವರೆದಿರುವುದರಿಂದ ಮಕ್ಕಳನ್ನು ಪರ್ಯಾಯವಾಗಿ ಸಂಪರ್ಕಿಸಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿದೇ ಇದ್ದಲ್ಲಿ, ಅವರು ಕಲಿಕೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಸಂಭವವಿರುತ್ತದೆ. ಅಲ್ಲದೇ ಶಾಲಾರಂಭವಾದ ಮೇಲೆಯೂ ಸಹ ಶಾಲೆಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ವಿದ್ಯಾರ್ಥಿಗಳನ್ನು ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯವಿವಾಹದಂತೆ ಪಿಡುಗುಗಳಿಗೆ ತುತ್ತಾಗುವ ಅಪಾಯವಿರುತ್ತದೆ. ಹೀಗಾಗಿ ಮಕ್ಕಳನ್ನು ಶಾಲಾರಂಭದವರೆಗೆ ಪರ್ಯಾಯ ಮಾರ್ಗಗಳ ಮೂಲಕ ಸಂಪರ್ಕಿಸಿ ಅವರಲ್ಲಿ ಮೋನೋಸ್ಥೈರ್ಯವನ್ನು ಹೆಚ್ಚಿಸಿ ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪ್ರಥಮ ಹಂತವಾಗಿ ಎಲ್ಲಾ ವಿದ್ಯಾರ್ಥಿಗಳು ಸರ್ಕಾರಿ, ಅನುದಾನಿತ ಅಥವಾ ಮಾನ್ಯತೆ ಪಡೆದ ಅನುದಾನ ರಹಿತ ಶಾಲೆಗಳಲ್ಲಿ ದಾಖಲಾಗಿರುವುದನ್ನು ಖಚಿತಪಡಿಸಬೇಕಾಗಿದೆ.

ಆದ್ದರಿಂದ 2020-21 ನೇ ಸಾಲಿನಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ದಿನಾಂಕ 30-09-2020 ರೊಳಗೆ ಪೂರ್ಣಗೊಳಿಸಲು ಎಲ್ಲಾ ಶಾಲೆಗಳಿಗೆ ಹಾಗೂ ಪೋಷಕರಿಗೆ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶದಲ್ಲಿ ಸೂಚನೆಯನ್ನು ನೀಡಿದ್ದಾರೆ.

Leave A Reply

Your email address will not be published.