ಕೊರೊನಾ ಸೋಂಕು, ಹೆಚ್ಚಿದ ತಾಪಮಾನ : ಶಾಲಾ ಅವಧಿ ಬೆಳಗ್ಗೆ 8 ರಿಂದ 12ರ ವರೆಗೆ ನಿಗದಿ..?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿದ್ದು, ಇನ್ನೊಂದೆಡೆ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದೆ. ಹೀಗಾಗಿ ರಾಜ್ಯಾಧ್ಯಂತ ಶಾಲಾ ಅವಧಿಯನ್ನು ಬೆಳಗ್ಗೆ 8 ಗಂಟೆಯಿಂದ 12ರ ವರೆಗೆ ನಿಗದಿಗೊಳಿಸಿ ಆದೇಶ ಹೊರಡಿಸುವಂತೆ ಶಿಕ್ಷಕರ ಸಂಘ ಶಿಕ್ಷಣ ಸಚಿವರನ್ನು ಆಗ್ರಹಿಸಿದೆ.

ಕೊರೊನಾ 2ನೇ ಅಲೆಯಿಂದಾಗಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಇದರಿಂದಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಯದಲ್ಲಿಯೇ ಶಾಲೆಗೆ ಹಾಜರಾಗಬೇಕಾಗಿದೆ. ಅಲ್ಲದೇ ಕೊರೊನಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ನಡೆಸುವುದು ಕಷ್ಟಕರವಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ದಿನವಿಡೀ ಮಾಸ್ಕ್ ಧರಿಸಿ ಶಿಕ್ಷಕರು ಪಾಠ ಬೋಧನೆಯನ್ನು ಮಾಡುವುದು ಹಾಗೂ ವಿದ್ಯಾರ್ಥಿಗಳು ಮಾಸ್ಕ್ ಧರಿಸಿಯೇ ಪಾಠ ಕೇಳುವುದು ದುಸ್ತರವಾಗುತ್ತಿದೆ.

ಇನ್ನೊಂದೆಡೆ ಬಿಸಿಲ ತಾಪಮಾನ ಹೆಚ್ಚಳವಾಗುತ್ತಿದೆ. ಬಯಲುಸೀಮೆ, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿಯೂ ತಾಪಮಾನದಲ್ಲಿ ವಿಪರೀತ ಏರಿಕೆಯಾಗುತ್ತಿದೆ. ಹೀಗಾಗಿ ದಿನವಿಡೀ ಶಾಲೆಯಲ್ಲಿ ಇರೋದು ಕಷ್ಟಕರವಾಗುತ್ತಿದೆ. ಇಷ್ಟು ವರ್ಷ ಮಾರ್ಚ್ ಅಂತ್ಯದಲ್ಲಿಯೇ ಶೈಕ್ಷಣಿಕ ಚಟುವಟಿಕೆ ಅಂತ್ಯವಾಗುತ್ತಿತ್ತು. ಆದ್ರೆ ಈ ಬಾರಿ ಜೂನ್ ತಿಂಗಳ ವರೆಗೂ ಶಾಲೆಯಲ್ಲಿಯೇ ಕುಳಿತುಕೊಳ್ಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಸಾಮಾನ್ಯವಾಗಿ ಎಪ್ರಿಲ್, ಮೇ ತಿಂಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕಚೇರಿಯ ಅವಧಿಯನ್ನು ಬದಲಾವಣೆಯನ್ನು ಮಾಡಲಾಗುತ್ತಿದ್ದು, ಈ ಬಾರಿಯೂ ವಿವಿಧ ಕಚೇರಿಗಳ ಅವಧಿಯಲ್ಲಿ ಈಗಾಗಲೇ ಬದಲಾವಣೆಯನ್ನು ಮಾಡಲಾಗಿದೆ. ಹೀಗಾಗಿ ಶಾಲಾ ಅವಧಿಯನ್ನೂ ಕೂಡ ಬೆಳಗ್ಗೆ 8 ರಿಂದ 12ರ ವರೆಗೆ ನಿಗದಿ ಪಡಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

Comments are closed.