SSLC ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : ಪರೀಕ್ಷಾ ಕೇಂದ್ರದ ಆಯ್ಕೆಯಲ್ಲಿ ಮತ್ತೆ ಗೊಂದಲ ಸೃಷ್ಟಿಸಿದ ಪರೀಕ್ಷಾ ಮಂಡಳಿ !

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿರೋ ನಡುವಲ್ಲೇ ಶಿಕ್ಷಣ ಇಲಾಖೆ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ನಡೆಸೋದಕ್ಕೆ ವೇಳಾಪಟ್ಟಿ ಪ್ರಕಟಿಸಿದೆ. ಲಾಕ್ ಡೌನ್ ನಿಂದಾಗಿ ಬೇರೆ ಜಿಲ್ಲೆಗಳಲ್ಲಿ ಬಂಧಿಯಾಗಿರುವ ವಿದ್ಯಾರ್ಥಿಗಳಿಗೆ ತಮ್ಮ ಮನೆ ಸಮೀಪದ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿತ್ತು. ಆದ್ರೀಗ ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ಪರೀಕ್ಷಾ ಕೇಂದ್ರಗಳ ಆಯ್ಕೆಯ ವಿಚಾರದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶಾಕ್ ಕೊಟ್ಟಿದೆ. ಕೇವಲ ವಲಸೆ ಕಾರ್ಮಿಕರ ಮಕ್ಕಳು ಹಾಗೂ ಕ್ವಾರಂಟೈನ್ ಆಗಿರುವ ಶಾಲೆಯ ಮಕ್ಕಳಿಗಷ್ಟೇ ತಮ್ಮಿಷ್ಟದ ಪರೀಕ್ಷಾ ಕೇಂದ್ರ ಆಯ್ಕೆ ಮಾಡಲು ಅವಕಾಶ ಕಲ್ಪಿಸಿದೆ. ಉಳಿದ ವಿದ್ಯಾರ್ಥಿಗಳು ತಾವು ಕಲಿಕೆ ಮಾಡುತ್ತಿರುವ ಶಾಲೆಗಳಲ್ಲಿಯೇ ಕಡ್ಡಾಯವಾಗಿ ಪರೀಕ್ಷೆ ಬರೆಯಬೇಕೆಂದು ಆದೇಶಿಸಿದೆ. ಈ ಕುರಿತ NEWS NEXT EXCLUSIVE ಸ್ಟೋರಿ ಇಲ್ಲಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಅಂತರ್ ರಾಜ್ಯ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು ಕೂಡ, ಜನ ಮನೆಯಿಂದ ಹೊರಬರುವುದಕ್ಕೆ ಅಂಜುತ್ತಿದ್ದಾರೆ. ಈ ನಡುವಲ್ಲೇ ಶಿಕ್ಷಣ ಇಲಾಖೆ ಎಸ್ಎಸ್ಎಲ್ ಸಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಮಾತ್ರ ಭಯದಲ್ಲಿಯೇ ಪರೀಕ್ಷೆ ಬರೆಯೋದಕ್ಕೆ ಸಜ್ಜಾಗುತ್ತಿದ್ದಾರೆ. ಆದರೆ ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರು ಹೊರ ಜಿಲ್ಲೆಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ಮನೆ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಾಗಿ ಹೇಳಿದ್ದರು. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದ್ರೀಗ ಎಸ್ಎಸ್ಎಲ್ ಸಿ ಪರೀಕ್ಷಾ ಮಂಡಳಿ ಹಳೆಯ ಆದೇಶವನ್ನು ಬದಲಾಯಿಸಿದೆ.

ಕೇವಲ ವಲಸೆ ಕಾರ್ಮಿಕರ ಮಕ್ಕಳು ಮತ್ತು ಯಾವ ಶಾಲೆ ಹಾಗೂ ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ ಆಗಿದೆಯೋ ಅಂತಹ ಶಾಲೆಗಳ ಮಕ್ಕಳು ಮಾತ್ರವೇ ಅವರು ಈಗಿರುವ ಸ್ಥಳದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಉಳಿದಂತೆ ಯಾವುದೇ ವಿದ್ಯಾರ್ಥಿಗಳಿಗೂ ಅವಕಾಶವಿಲ್ಲ ಎಂದಿದೆ. ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ಈಗಾಗಲೇ ಹೊಸ ಆದೇಶವನ್ನು ಎಲ್ಲಾ ಡಿಡಿಪಿಐಗಳಿಗೆ ರವಾನಿಸಿದೆ. ಡಿಡಿಪಿಐಗಳು ಶಾಲಾ ಮುಖ್ಯೋಪಾಧ್ಯಾಯರಿಗೆ ಹೊಸ ಆದೇಶವನ್ನು ರವಾನಿಸಿದ್ದು, SATSನಲ್ಲಿ ಬದಲಾವಣೆ ಮಾಡುವಾಗ ಹೊಸ ಆದೇಶದನ್ವಯ ಮಾಡಲು ಸೂಚನೆಯನ್ನು ನೀಡಿದ್ದಾರೆ.

ಅಲ್ಲದೇ ಕಾರ್ಮಿಕರ ಮಕ್ಕಳು ಹಾಗೂ ಕ್ವಾರಂಟೈನ್ ಆಗಿರುವ ಶಾಲೆಗಳನ್ನು ಹೊರತು ಪಡಿಸಿ ಉಳಿದವರಿಗೆ ಪರೀಕ್ಷಾ ಕೇಂದ್ರಗಳ ಆಯ್ಕೆಗೆ ಅವಕಾಶ ನೀಡಬಾರದೆಂದು ಸೂಚನೆ ನೀಡಿದ್ದಾರೆ. ಮಾತ್ರವಲ್ಲ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸುವಂತೆಯೂ ತಿಳಿಸಲಾಗಿದೆ. ಪರೀಕ್ಷಾ ಮಂಡಳಿ ಹೊರಡಿಸಿರುವ ಹೊಸ ಆದೇಶದಿಂದಾಗಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ವಿದ್ಯಾರ್ಥಿಗಳು ಮತ್ತೆ ಗೊಂದಲಕ್ಕೆ ಸಿಲುಕಿದ್ದಾರೆ.

ಅಂತರ್ ರಾಜ್ಯ ಬಸ್ ಸಂಚಾರ ಆರಂಭವಾಗಿದ್ದರೂ ಕೂಡ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ. ಅಲ್ಲದೇ ಕೊರೊನಾ ಸೋಂಕು ಹರಡುತ್ತಿರೋದ್ರಿಂದಾಗಿ ಜನರು ಮನೆಯಿಂದ ಹೊರಬರುವುದಕ್ಕೂ ಅಂಜುತ್ತಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿಯೂ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅವರು ಕಲಿಯುತ್ತಿರುವ ಶಾಲೆಗಳಿಗೆ ತೆರಳಿ ಪರೀಕ್ಷೆ ಬರೆಯ ಬೇಕೆಂಬ ಶಿಕ್ಷಣ ಇಲಾಖೆಯ ಆದೇಶ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗಳಿಗೆ ಪ್ರಯಾಣಿಸುವುದರಿಂದ ಕೊರೊನಾ ಸೋಂಕು ವ್ಯಾಪಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ವಸತಿ ಸಹಿತ ಶಿಕ್ಷಣ ಪಡೆಯುತ್ತಿದ್ದಾರೆ. ಹಾಸ್ಟೆಲ್ ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪರೀಕ್ಷೆ ನಡೆಸುವುದು ಸವಾಲಿನ ಕೆಲಸವೇ ಆಗಿದೆ. ಮಾತ್ರವಲ್ಲ ರಾಜ್ಯದ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶೇ.80 ಕ್ಕೂ ಅಧಿಕ ವಿದ್ಯಾರ್ಥಿಗಳು ಹೊರ ಜಿಲ್ಲೆಯವರೇ ಆಗಿದ್ದಾರೆ. ಹೀಗಾಗಿ ಅವರೆಲ್ಲರನ್ನೂ ತಮ್ಮ ಶಾಲೆಗಳಿಗೆ ಕರೆತಂದು ಪರೀಕ್ಷೆಗೆ ಸಜ್ಜುಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅಲ್ಲದೇ ಪರೀಕ್ಷೆಯ ಸಲುವಾಗಿ ಮಕ್ಕಳನ್ನು ಹೊಸ ಜಿಲ್ಲೆಗಳಿಗೆ ಕಳುಹಿಸೋದಕ್ಕೆ ನಾವು ರೆಡಿಯಿಲ್ಲ. ಹೀಗಾಗಿ ಪರೀಕ್ಷಾ ಮಂಡಳಿ ತಮ್ಮ ಹೊಸ ಆದೇಶವನ್ನು ರದ್ದುಗೊಳಿಸಿ, ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ತಾವು ಇರುವ ಪ್ರದೇಶದ ಸಮೀಪದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ಪೋಷಕರು ಆಗ್ರಹಿಸುತ್ತಿದ್ದಾರೆ.

ವಲಸೆ ಕಾರ್ಮಿಕರ ಮಕ್ಕಳಿಗಷ್ಟೇ ಅವಕಾಶ : ವಿ. ಸುಮಂಗಲಾ
ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕೇವಲ ವಲಸೆ ಕಾರ್ಮಿಕರ ಮಕ್ಕಳಿಗೆ ಹಾಗೂ ಯಾವ ಶಾಲೆ, ಹಾಸ್ಟೆಲ್ ನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆಯೋ ಅಂತಹ ಶಾಲೆಗಳ ವಿದ್ಯಾರ್ಥಿಗಳು ಮಾತ್ರವೇ ತಮ್ಮ ಮನೆ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಬರೆಯಬಹುದಾಗಿದೆ. ಉಳಿದಂತೆ ಎಲ್ಲಾ ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಶಾಲೆಗಳಲ್ಲಿಯೇ ಪರೀಕ್ಷೆಯನ್ನು ಬರೆಯಬೇಕು. ಬಸ್ ಸಂಚಾರ ಆರಂಭವಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ತೆರಳಬಹುದಾಗಿದೆ ಎಂದು ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ. ಸುಮಂಗಲಾ ಅವರು newsnext ಗೆ ತಿಳಿಸಿದ್ದಾರೆ.

ಕೊರೊನಾ ಆರಂಭವಾದ ದಿನದಿಂದಲೂ ಎಸ್ಎಸ್ಎಲ್ ಸಿ ಪರೀಕ್ಷೆಯ ವಿಚಾರದಲ್ಲಿ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗೊಂದಲವನ್ನು ಸೃಷ್ಟಿಸುತ್ತಲೇ ಇದ್ದಾರೆ. ಪರೀಕ್ಷಾ ದಿನಾಂಕ ನಿಗದಿಯಿಂದ ಹಿಡಿದು ಪರೀಕ್ಷಾ ಕೇಂದ್ರಗಳ ಆಯ್ಕೆಯ ವಿಚಾರದವರೆಗೂ ಗೊಂದಲ ಮುಂದುವರಿದಿದೆ. ಕೊರೊನಾ ಭಯದ ನಡುವಲ್ಲೇ ವಿದ್ಯಾರ್ಥಿಗಳನ್ನು ಪರೀಕ್ಷೆ ಸಜ್ಜುಗೊಳಿಸಬೇಕಾದ ಶಿಕ್ಷಣ ಇಲಾಖೆ ಇದೀಗ ಗೊಂದಲಗಳನ್ನು ಮೂಡಿಸೋ ಮೂಲಕ ವಿದ್ಯಾರ್ಥಿಗಳನ್ನು ಇನ್ನಷ್ಟು ಆತಂಕಕ್ಕೆ ದೂಡುತ್ತಿದೆ. ಸಚಿವರು ನೀಡಿದ ಹೇಳಿಕೆಯನ್ನು ಅಧಿಕಾರಿಗಳು ಬದಲಾಯಿಸುತ್ತಿರೋದು ಇದು ಹೊಸತೇನಲ್ಲಾ. ಈ ಹಿಂದೆಯೂ ಸಚಿವರು ಹೊರಡಿಸಿದ ಆದೇಶದಲ್ಲಿ ಅಧಿಕಾರಿಗಳು ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಕಳೆದರೆರಡು ದಿನಗಳ ಹಿಂದೆ ಹೊರಡಿಸಿರೋ ಆದೇಶ ಇದೀಗ ಮತ್ತೆ ಬದಲಾಗಿದೆ. ಹೀಗೆ ಮಾಡೋದ್ರಿಂದ ಮಕ್ಕಳ ಮನಸಿನ ಮೇಲೆ ಗಂಭೀರ ಪರಿಣಾಮವನ್ನು ಬೀರುವುದಂತೂ ಸುಳ್ಳಲ್ಲ. ಇನ್ನಾದ್ರೂ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ಈ ಕುರಿತು ಗಂಭೀರವಾದ ಚಿಂತನೆಯನ್ನು ನಡೆಸಬೇಕಿದೆ ಅನ್ನೋದು newsnext ಕಾಳಜಿ.

Leave A Reply

Your email address will not be published.